ತೀರ್ಥಹಳ್ಳಿ: ಸ್ಥಳೀಯ ಪಪಂಯ ಅಧ್ಯಕ್ಷ ಚುನಾವಣೆಯ ನಂತರದಲ್ಲಿ ಕಾಂಗ್ರೆಸ್ ಪಕ್ಷದೊಳಗೆ ಉಂಟಾಗಿರುವ ಭಿನ್ನಾಭಿಪ್ರಾಯ ಹಿನ್ನೆಲೆಯಲ್ಲಿ ಗುರುವಾರ ಪಟ್ಟಣದ ಕೆಬಿಎಸ್ ಕಾಂಪ್ಲೆಕ್ಷಿನಲ್ಲಿ ಡಿ.ಎಸ್.ವಿಶ್ವನಾಥಶೆಟ್ಟಿ ಅಧ್ಯಕ್ಷತೆಯಲ್ಲಿ ಸಮಾನ ಮನಸ್ಕ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ಸಮಾಲೋಚನಾ ಸಭೆ ನಡೆಯಿತು.
ಪಕ್ಷಕ್ಕೆ ಕಾರ್ಯಕರ್ತರೇ ನಿರ್ಣಾಯಕರಾಗಿದ್ದು ಯಾವುದೇ ಒಬ್ಬ ವ್ಯಕ್ತಿಯ ಮೂಗಿನ ನೇರಕ್ಕೆ ನಡೆಯುವಂತಾಗಬಾರದು. ಪಕ್ಷದ ಮುಂಚೂಣಿಯಲ್ಲಿರುವವರು ತಮ್ಮ ತಪ್ಪನ್ನು ಸರಿಪಡಿಸಿಕೊಳ್ಳದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಮುಂದಾಗಬೇಕಾದೀತು ಎಂದು ಪಕ್ಷದ ಮುಖಂಡರಿಗೆ ಎಚ್ಚರಿಕೆ ನೀಡಿದರು.ಸಭೆಯಲ್ಲಿ ನಿಷ್ಠಾವಂತರಿಗೆ ಸರ್ಕಾರದಿಂದ ಸಿಗುವ ಸವಲತ್ತು ನಾಮ ನಿರ್ದೆಶನ ಸ್ಥಾನಗಳನ್ನು ನೀಡಬೇಕು. ಮುಂಬರುವ ಚುನಾವಣೆಗಳಿಗೆ ಪಕ್ಷವನ್ನು ಬಲ ಪಡಿಸಲು ಬೂತ್ ಸಮಿತಿ ರಚಿಸಿ ಅರ್ಹರಿಗೆ ಹೊಣೆಗಾರಿಕೆ ನೀಡುವುದು. ಪಕ್ಷವನ್ನು ಪ್ರತಿಹಂತದಲ್ಲೂ ದುರ್ರ್ಬಲಗೊಳಿಸಿರುವ 12 ವರ್ಷಗಳಿಂದ ಅಧಿಕಾರದಲ್ಲಿರುವ ತೀರ್ಥಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನು ಕೂಡಲೇ ಬದಲಾಯಿಸಿ ಸಮರ್ಥರನ್ನು ನೇಮಕ ಮಾಡಬೇಕು. ಪಕ್ಷದ ನಿರ್ಧಾರಗಳು ಕಾರ್ಯಕರ್ತರ ಧ್ವನಿಯಾಗಬೇಕು. ಮುಂಬರುವ ಸ್ಥಳೀಯ ಚುನಾವಣೆಗೆ ಕಾರ್ಯಕರ್ತರ ಅಭಿಪ್ರಾಯದಂತೆ ಪಕ್ಷದ ನಿಷ್ಠಾವಂತರಿಗೆ ಟಿಕೆಟ್ ನೀಡಬೇಕು ಎಂದು 6 ನಿರ್ಣಯಗಳನ್ನು ಮಂಡಿಸಿ ಹಕ್ಕೊತ್ತಾಯ ಮಾಡಲಾಗಿದೆ ಎಂದು ಅವರು ತಿಳಿಸಿದರು. ಈ ಸಂದರ್ಭದಲ್ಲಿ ಪಪಂ ಸದಸ್ಯ ರಹಮತ್ ಉಲ್ಲಾ ಅಸಾದಿ, ಸದಸ್ಯೆ ಸುಶೀಲಾ ಶೆಟ್ಟಿ, ಜಿಲ್ಲಾ ಧಾರ್ಮಿಕ ಸಮಿತಿ ಸದಸ್ಯೆ ವರಲಕ್ಷ್ಮಿ, ಡಾ.ಬಂಗಾರಪ್ಪ, ಈರೇಗೋಡು ಶ್ರೀಧರ್, ಹರಡವಳ್ಳಿ ಮಂಜುನಾಥ್, ಬೆಳ್ಳಯ್ಯ, ಹಂಜಾ ಕಮ್ಮರಡಿ ಮುಂತಾದವರು ಇದ್ದರು. ಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸುದೀರ್ಘ ಅವಧಿಗೆ ಅಧಿಕಾರ ನಡೆಸಿರುವ ಬಗ್ಗೆ ಕೇಕ್ ಕತ್ತರಿಸಿ ಶುಭ ಹಾರೈಸಲಾಯ್ತು.