ರೈತರ ಸಮಸ್ಯೆಗಳಿಗೆ ಸ್ಪಂದಿಸದಿದ್ರೆ ಹೆದ್ದಾರಿ ಬಂದ್‌, ಪ್ರತಿಭಟನೆ: ಉಮೇಶ್ ಪಾಟೀಲ್

KannadaprabhaNewsNetwork | Published : May 23, 2024 1:13 AM

ಸಾರಾಂಶ

ರೈತ ಸಮೂಹವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವ ನಿಟ್ಟಿನಲ್ಲಿ ರೈತರ ಒಕ್ಕಲುತನದಿಂದ ಹೊರದಬ್ಬುವ ನೀಚತನಕ್ಕೆ ಇಳಿದಿವೆ. ರೈತ ಸಂತುಷ್ಟನಾದರೆ ಇಡೀ ಜಗತ್ತು ಬೆಳಗಿ ಹಸಿವಿನಿಂದ ಮುಕ್ತಿ ಕಾಣುತ್ತದೆ. ಆದ್ದರಿಂದ ಆಳುವ ಸರ್ಕಾರಗಳು ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು.

ಕನ್ನಡಪ್ರಭ ವಾರ್ತೆ ಸೊರಬ ಚುನಾವಣಾ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಾಪಸ್‌ ಪಡೆಯುತ್ತೇವೆ ಎಂದು ವಾಗ್ದಾನ ಮಾಡಿದ್ದ ಕಾಂಗ್ರೆಸ್ ಸರ್ಕಾರ ನಂತರದ ದಿನಗಳಲ್ಲಿ ರೈತರ ಸಮಸ್ಯೆಗಳಿಗೆ ಸ್ಪಂದಿಸದೇ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ಆದ್ದರಿಂದ ಮುಂದಿನ ದಿನಗಳಲ್ಲಿ ಹೆದ್ದಾರಿ ಬಂದ್‌, ಪ್ರತಿಭಟನೆ ನಡೆಸಲಾಗುವುದು ಎಂದು ರಾಜ್ಯ ರೈತ ಸಂಘದ ಸಂಚಾಲಕ ಎನ್.ಉಮೇಶ್ ಪಾಟೀಲ್ ಹೇಳಿದರು.

ಪಟ್ಟಣದ ದಾನಮ್ಮ ಕಾಂಪ್ಲೆಕ್ಸ್‌ನಲ್ಲಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ತಾಲೂಕು ಘಟಕದ ವತಿಯಿಂದ ಜಿಲ್ಲಾ ಘಟಕಕ್ಕೆ ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳಿಗೆ ಅಭಿನಂದನೆ ಹಾಗೂ ಸಂಘದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ ರೈತ ಸಮೂಹವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ದೊಡ್ಡ ಕಾರ್ಪೊರೇಟ್ ಕಂಪನಿಗಳ ಹಿತ ಕಾಯುವ ನಿಟ್ಟಿನಲ್ಲಿ ರೈತರ ಒಕ್ಕಲುತನದಿಂದ ಹೊರದಬ್ಬುವ ನೀಚತನಕ್ಕೆ ಇಳಿದಿವೆ. ರೈತ ಸಂತುಷ್ಟನಾದರೆ ಇಡೀ ಜಗತ್ತು ಬೆಳಗಿ ಹಸಿವಿನಿಂದ ಮುಕ್ತಿ ಕಾಣುತ್ತದೆ. ಆದ್ದರಿಂದ ಆಳುವ ಸರ್ಕಾರಗಳು ಮೊದಲು ರೈತರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದರು.

ಬ್ಯಾಂಕ್‌ ಸಾಲಕ್ಕೆ ಜಮೆ ಮಾಡದಿರಿ: ರಾಜ್ಯದಲ್ಲಿ ಬರಗಾಲದ ಪರಿಸ್ಥಿತಿ ಇದ್ದು, ರೈತರು ಸಂಕಷ್ಟದ ದಿನಗಳ ಎದುರಿಸುತ್ತಿದ್ದಾರೆ ಆದರೆ ಸರ್ಕಾರಗಳು ಮಾತ್ರ ಸ್ಪಂದಿಸುತ್ತಿಲ್ಲ. ವಿದ್ಯುತ್ ಪಂಪ್ ಸೆಟ್‌ಗೆ ಮೀಟರ್ ಅಳವಡಿಸುವ ನೀತಿ ಕೈಬಿಡಬೇಕು, ರೈತರ ಕೃಷಿ ಪಂಪ್‌ಸೆಟ್‌ಗಳಿಗೆ ೩ ಫೇಸ್ ವಿದ್ಯುತ್ ೧೨ ಗಂಟೆ ಹಗಲು ವೇಳೆಯಲ್ಲಿ ನೀಡಬೇಕು ಎಂದು ಒತ್ತಾಯಿಸಿದರು. ಬರ ಪರಿಹಾರದ ಮೊತ್ತ ರೈತರ ಸಾಲಕ್ಕೆ ಬ್ಯಾಂಕ್‌ಗಳು ಜಮೆ ಮಾಡುವುದು ಸಲ್ಲದು. ಕೂಡಲೇ ರೈತರಿಗೆ ಪೂರ್ಣ ಪ್ರಮಾಣದಲ್ಲಿ ಬರ ಪರಿಹಾರ ನೀಡುವತ್ತ ಸರ್ಕಾರ ಗಮನ ನೀಡಬೇಕು ಎಂದರು.

ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಎನ್.ಕೆ.ಮಂಜುನಾಥ ಗೌಡ ಮಾತನಾಡಿ, ರೈತರಿಗೆ ಹೋರಾಟ, ಸಂಘಟನೆ ಅರಿವು ಮೂಡಿಸಿದ ಎಚ್.ಎಸ್.ರುದ್ರಪ್ಪ ನೆನಪು ಕಾರ್ಯಕ್ರಮ ಜು.೧೯ರಂದು ಶಿವಮೊಗ್ಗದ ಮತ್ತೂರು ರಸ್ತೆಯ ತೀರ್ಥಪ್ಪ ಕ್ಯಾಂಪ್ ನಲ್ಲಿ ಆಯೋಜಿಸಲಾಗಿದೆ. ರೈತ ಹೋರಾಟ ಹಾಗೂ ಸಂಘಟನೆಯ ಅರಿವು ಮೂಡಿಸಬೇಕಾದರೆ ರುದ್ರಪ್ಪ ಜೀವನ ಪರಿಚಯ ಮುಖ್ಯ. ಈ ನಿಟ್ಟಿನಲ್ಲಿ ರಾಜ್ಯದ ವಿವಿಧ ಭಾಗಗಳಿಂದ ಸಾವಿರಾರು ರೈತರು ಆಗಮಿಸಲಿದ್ದಾರೆ ಎಂದರು.

ರೈತ ಸಂಘದ ಜಿಲ್ಲಾಧಕ್ಷ ಮಂಜುನಾಥ ಆರೇಕೊಪ್ಪ, ಮಹಿಳಾ ಸಂಚಾಲಕಿ ಸುನಿತಾ, ತಾಲೂಕು ಅಧ್ಯಕ್ಷ ಈಶ್ವರಪ್ಪ ಕೊಡಕಣಿ, ಪ್ರಧಾನ ಕಾರ್ಯದರ್ಶಿ ಮೇಘರಾಜ್, ರೈತ ಮುಖಂಡರಾದ ಸೈಯದ್ ಶಫೀವುಲ್ಲಾ, ವೀರಭದ್ರಪ್ಪ ಗೌಡ, ಅಮೃತರಾಜ್, ಸತೀಶ್, ಬಸವರಾಜ ಬನ್ನೂರು, ನಾಗರಾಜ ನಾಡಕಲಸಿ, ಯೋಗೇಶ್, ಸೋಮಶೇಖರ ಶಿಗ್ಗಾ, ಬಸವರಾಜ ಅರೇಕೊಪ್ಪ, ನಾಗರಾಜ ಬೆಣ್ಣಿಗೇರಿ, ಬಸವರಾಜ ಹೆಗ್ಗೋಡು, ಫಕೀರಸ್ವಾಮಿ, ರವಿ ಶಿಕಾರಿಪುರ, ಸುರೇಶ್ ನಾಯ್ಕ್ ಸೇರಿ ಇತರರಿದ್ದರು.ಅಡಕೆ ಕಳ್ಳರ ಹಿಡಿಯವಲ್ಲಿ ಪೊಲೀಸರು ವಿಫಲ

ತಾಲೂಕಿನಲ್ಲಿ ಅಡಕೆ ಕಳವು ಪ್ರಕರಣಗಳು ಹೆಚ್ಚುತ್ತಿದ್ದು, ತಂತ್ರಜ್ಞಾನ ಮುಂದುವರಿದಿದ್ದರೂ ಕಳ್ಳರ ಪತ್ತೆ ಮಾಡುವಲ್ಲಿ ಪೊಲೀಸ್ ಇಲಾಖೆ ನಿರ್ಲಕ್ಷ್ಯ ಧೋರಣೆ ಅನುಸರಿಸಿದೆ. ತಾಲೂಕಿನ ಮೂಡುಗೋಡು ಗ್ರಾಮದಲ್ಲಿ ಒಂದೇ ಗೋದಾಮಿನಲ್ಲಿ ತಿಂಗಳೊಳಗೆ ಎರಡು ಬಾರಿ ಕಳ್ಳತನವಾಗಿದೆ. ಇದರಿಂದ ರೈತ ಸಮೂಹ ಕಂಗಾಲಾಗಿದ್ದು, ಪೊಲೀಸರು ಪ್ರಕರಣ ಬೇಧಿಸುವ ಮೂಲಕ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಬೇಕು. ಅಡಕೆ ಕಳ್ಳತನ ಕುರಿತು ಸಂಘಟನೆಯಿಂದ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದು ಮಂಜುನಾಥ ಗೌಡ ಹೇಳಿದರು.

Share this article