- ತಾಲೂಕು ಪಂಚಾಯಿತಿ ಸಾಮಾರ್ಥ್ಯ ಸೌಧದಲ್ಲಿ ಲೋಕಾಯುಕ್ತ ಜನಸಂಪರ್ಕ ಸಭೆ
ಸರ್ಕಾರಿ ಕಚೇರಿಗೆ ಸಾರ್ವಜನಿಕರು ಅರ್ಜಿ ಸಲ್ಲಿಸಿದಾಗ ತಪ್ಪದೆ ಹಿಂಬರಹ ನೀಡಬೇಕು ಎಂದು ಚಿಕ್ಕಮಗಳೂರು ಲೋಕಾಯುಕ್ತ ಕಚೇರಿ ಇನ್ಸ್‌ಪೆಕ್ಟರ್ ಮಲ್ಲಿಕಾರ್ಜುನ ಸರ್ಕಾರಿ ನೌಕರರಿಗೆ ಸೂಚಿಸಿದರು.
ಮಂಗಳವಾರ ತಾಪಂ ಸಾಮರ್ಥ್ಯ ಸೌಧದಲ್ಲಿ ಲೋಕಾಯುಕ್ತ ಡಿವೈ.ಎಸ್.ಪಿ ತಿರುಮಲೇಶ್ ಅಧ್ಯಕ್ಷತೆ ಯಲ್ಲಿ ನಡೆದ ಲೋಕಾಯುಕ್ತ ಜನಸಂಪರ್ಕ ಸಭೆಯಲ್ಲಿ ಮಾತನಾಡಿ ಸರ್ಕಾರಿ ನೌಕರರು ಕಚೇರಿಗೆ ಬಂದ ಸಾರ್ವಜನಿಕರಿಗೆ ಗೌರವ ನೀಡಬೇಕು. ಲೋಕಾಯುಕ್ತರು ಮಾಹಿತಿ ಕೇಳಿದರೆ ಸೂಕ್ತ ದಾಖಲೆ ನೀಡಬೇಕು.ಕಂದಾಯ ಇಲಾಖೆ ಹಾಗೂ ವಿವಿಧ ಸರ್ಕಾರಿ ಕಚೇರಿಗಳಲ್ಲಿ ಕಡತ ಲಭ್ಯವಿಲ್ಲ ಎಂದು ಬರೆದುಕೊಡುತ್ತಾರೆ. ಈ ಬಗ್ಗೆ ಕಡತ ಏನಾಗಿದೆ ಎಂದು ಸೂಕ್ತ ಉತ್ತರ ನೀಡಬೇಕು ಎಂದು ಸೂಚಿಸಿದರು.ಅಧಿಕಾರಿಗಳಿಂದ ಅಧಿಕಾರ ದುರುಪಯೋಗವಾಗಿದೆ ಎಂದು ದೂರುಗಳು ಬಂದಿದೆ. ಸಾರ್ವಜನಿಕರು ಸಂಬಂಧಪಟ್ಟ ದಾಖಲೆ ನೀಡಿದರೆ ಕ್ರಿಮಿನಲ್ ಕೇಸು ದಾಖಲಿಸುತ್ತೇವೆ. ಸಾರ್ವಜನಿಕರು ದೂರು ನೀಡಲು ಜಿಲ್ಲಾ ಕೇಂದ್ರಕ್ಕೆ ಬರಲು ಸಾಧ್ಯವಾಗದಿದ್ದರೆ ಅಂಚೆ ಮೂಲಕ ರಿಜಿಸ್ಟರ್ ಪೋಸ್ಟ್ ಮಾಡಬಹುದು. ಲೋಕಾಯುಕ್ತರ ಹೆಸರಿನಲ್ಲಿ ಯಾರಾದರೂ ದೂರವಾಣಿ ಕರೆ ಮಾಡಿದರೆ ತಕ್ಷಣ ನಮ್ಮ ಗಮನಕ್ಕೆ ತನ್ನಿ ಎಂದು ಅಧಿಕಾರಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಇ.ಒ. ನವೀನ್ ಕುಮಾರ್, ತಹಸೀಲ್ದಾರ್ ಡಾ.ನೂರಲ್ ಹುದಾ ಇದ್ದರು. ಜನ ಸಂಪರ್ಕ ಸಭೆಯಲ್ಲಿ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಪಂ ಪಿಡಿಒ ಗಳು ಭಾಗವಹಿಸಿದ್ದರು. ಲೋಕಾಯುಕ್ತ ಜನ ಸಂಪರ್ಕ ಸಭೆಯಲ್ಲಿ ಸಾರ್ವಜನಿಕರಿಂದ 8 ಅರ್ಜಿಗಳು ಬಂದಿದ್ದು ಬಹುತೇಕ ಕಂದಾಯ ಇಲಾಖೆ ಬಗ್ಗೆ ಅರ್ಜಿ ನೀಡಿದ್ದಾರೆ.
ಮೇದರ ಬೀದಿಯ ಮಂಜುನಾಥ್ ಮಾತನಾಡಿ, ಲಿಂಗಾಪುರ ಗ್ರಾಮದಲ್ಲಿ ಕೈಗಾರಿಕೆ ಇಲಾಖೆ ಸರ್ಕಾರದ 10 ಎಕರೆ ಜಮೀನು ಖರೀದಿ ಮಾಡಿದ್ದು ಕಾಮಗಾರಿ ಮುಗಿದು 15 ವರ್ಷ ಆಗಿದೆ. ಅರಣ್ಯ ಜಾಗ ಎಂದು ಕೈಗಾರಿಕೆ ನಿಲ್ಲಿಸ ಲಾಗಿದೆ.ಅದು ಅರಣ್ಯ ಜಾಗವಲ್ಲ. ಸರ್ಕಾರದ ಕೋಟ್ಯಾಂತರ ರು. ಪೋಲಾಗಿದ್ದು ತನಿಖೆ ಮಾಡಬೇಕು ಎಂದು ಒತ್ತಾಯಿಸಿದರು.
ಕೊಪ್ಪ ಎ.ಪಿ.ಎಂ.ಸಿ.ಸದಸ್ಯ ಎಚ್.ಎಂ.ಶಿವಣ್ಣ ಮಾತನಾಡಿ,ಜಂಟಿ ಸರ್ವೆ ವಿಳಂಬವಾಗುತ್ತಿದೆ.ಇದರಿಂದ ಬಡವರಿಗೆ ಅನ್ಯಾಯವಾಗುತ್ತಿದೆ ಎಂದರು.ಶೆಟ್ಟಿಕೊಪ್ಪ ಸುರೇಶ್ ಮಾತನಾಡಿ,ಗ್ರಾಮ ಸಭೆಯಲ್ಲಿ ಕೆಲವು ವಿಷಯ ಪ್ರಸ್ತಾಪ ಮಾಡಿದ್ದಕ್ಕೆ ಹಾಗೂ ಸಣ್ಣ ವಿಷಯಕ್ಕೆ ಕೆಲವರು ಪೊಲೀಸರಿಗೆ ದೂರು ನೀಡಿದ್ದಾರೆ. ಹಿಂದಿನ ಪೊಲೀಸ್ ಅಧಿಕಾರಿ ನನಗೆ ತೀವ್ರ ತೊಂದರೆ ಕೊಟ್ಟಿದ್ದರು. ಜಿಲ್ಲೆ ಹಾಗೂ ರಾಜ್ಯ ಪೊಲೀಸ್ ದೂರು ಪ್ರಾಧೀಕಾರಕ್ಕೂ ಸಹ ದೂರು ನೀಡಿದ್ದೇನೆ. ಆದರೂ ಪ್ರಯೋಜನವಾಗುತ್ತಿಲ್ಲ ಎಂದರು.