ಉತ್ತರ ಕರ್ನಾಟಕದಲ್ಲೂ ಮಾದಕ ವಸ್ತುಗಳ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಆತಂಕದ ನಡುವೆ, ಉತ್ತರ ವಲಯ ಪೊಲೀಸರು ಡ್ರಗ್ಸ್ ಮಾಫಿಯಾದ ವಿರುದ್ಧ ಸಮರ ಸಾರಿದ್ದಾರೆ. ಒಂದು ವಾರದ ವಿಶೇಷ ಕಾರ್ಯಾಚರಣೆಯಲ್ಲೇ 16 ಪ್ರಕರಣಗಳನ್ನು ದಾಖಲಿಸಿ ಸುಮಾರು 27 ಕೆಜಿ ಮಾದಕ ವಸ್ತುಗಳನ್ನು ಜಪ್ತಿ
ಶ್ರೀಶೈಲ ಮಠದ
ಬೆಳಗಾವಿ : ಉತ್ತರ ಕರ್ನಾಟಕದಲ್ಲೂ ಮಾದಕ ವಸ್ತುಗಳ ಜಾಲ ದಿನದಿಂದ ದಿನಕ್ಕೆ ವಿಸ್ತರಿಸುತ್ತಿರುವ ಆತಂಕದ ನಡುವೆ, ಉತ್ತರ ವಲಯ ಪೊಲೀಸರು ಡ್ರಗ್ಸ್ ಮಾಫಿಯಾದ ವಿರುದ್ಧ ಸಮರ ಸಾರಿದ್ದಾರೆ. ಒಂದು ವಾರದ ವಿಶೇಷ ಕಾರ್ಯಾಚರಣೆಯಲ್ಲೇ 16 ಪ್ರಕರಣಗಳನ್ನು ದಾಖಲಿಸಿ ಸುಮಾರು 27 ಕೆಜಿ ಮಾದಕ ವಸ್ತುಗಳನ್ನು ಜಪ್ತಿ ಮಾಡಿರುವುದು, ಉತ್ತರ ಕರ್ನಾಟಕದಲ್ಲೂ ಡ್ರಗ್ಸ್ ಜಾಲ ಎಷ್ಟು ಆಳವಾಗಿ ಬೇರೂರಿದೆ ಎಂಬುದನ್ನು ಮತ್ತೊಮ್ಮೆ ಬಹಿರಂಗಪಡಿಸಿದೆ.
ಹಿರಿಯ ಐಪಿಎಸ್ ಅಧಿಕಾರಿ ಸಂದೀಪ ಪಾಟೀಲ ಉತ್ತರ ವಲಯ ಐಜಿಪಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಅಕ್ರಮ ಚಟುವಟಿಕೆಗಳ ನಿಯಂತ್ರಣಕ್ಕೆ ವಿಶೇಷ ಒತ್ತು ನೀಡಲಾಗುತ್ತಿದೆ. ಅದರ ಭಾಗವಾಗಿ ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಣೆ ವಿರೋಧಿ ದಿನದ ಅಂಗವಾಗಿ ಜೂನ್ 21ರಿಂದ 28ರವರೆಗೆ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಸಮನ್ವಯಿತ ವಿಶೇಷ ಕಾರ್ಯಾಚರಣೆ ನಡೆಸಲಾಗಿದೆ.ಕಾರ್ಯಾಚರಣೆಯಲ್ಲಿ ಅನುಮಾನಾಸ್ಪದ ಸ್ಥಳಗಳ ಮೇಲೆ ದಾಳಿ, ಹಳೆಯ ಆರೋಪಿಗಳ ಪರಿಶೀಲನೆ, ಮಾದಕ ವಸ್ತುಗಳ ಮಾರಾಟ ಜಾಲದ ಮೇಲೆ ನಿಗಾ, ಸಾಗಣೆ ಮಾರ್ಗಗಳ ಮೇಲ್ವಿಚಾರಣೆ ಹಾಗೂ ಯುವಜನರಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಏಕಕಾಲದಲ್ಲಿ ಹಮ್ಮಿಕೊಳ್ಳಲಾಗಿದೆ.
ಒಂದು ವಾರದಲ್ಲೇ 27 ಕೆಜಿ ಮಾದಕ ವಸ್ತು ವಶ:
ಜೂ.21 ರಿಂದ 28 ರವರೆಗೆ ನಡೆದ ಕಾರ್ಯಾಚರಣೆಯಲ್ಲಿ 16 ಎನ್ಡಿಪಿಎಸ್ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣಗಳಲ್ಲಿ 26 ಕೆಜಿ 987 ಗ್ರಾಂ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದ್ದು, ಅವುಗಳ ಅಂದಾಜು ಮೌಲ್ಯ ₹12. 38 ಲಕ್ಷ ಎಂದು ಪೊಲೀಸ್ ಇಲಾಖೆ ತಿಳಿಸಿದೆ. ಈ ಅಂಕಿ ಅಂಶವೇ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲೂ ಮಾದಕ ವಸ್ತುಗಳ ಜಾಲ ಸಕ್ರಿಯವಾಗಿರುವ ಸೂಚನೆ ನೀಡುತ್ತಿದೆ.
ಈ ವರ್ಷವೇ 427 ಕೆಜಿ ಡ್ರಗ್ಸ್ ಜಪ್ತಿ:
2026ರ ಜನವರಿಯಿಂದ ಇದುವರೆಗೆ ಉತ್ತರ ವಲಯದಲ್ಲಿ ನಡೆದ ವಿವಿಧ ಕಾರ್ಯಾಚರಣೆಗಳಲ್ಲಿ ಒಟ್ಟು 427 ಕೆಜಿ 29 ಗ್ರಾಂ ಮಾದಕ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿಯಾದ ಮಾದಕ ವಸ್ತುಗಳ ಮೌಲ್ಯ ₹1. 12 ಕೋಟಿ ಎಂದು ಅಂದಾಜಿಸಲಾಗಿದೆ.
ಒಂದೇ ವಲಯದಲ್ಲಿ ಇಷ್ಟು ದೊಡ್ಡ ಪ್ರಮಾಣದ ಮಾದಕ ವಸ್ತುಗಳು ಪತ್ತೆಯಾಗಿರುವುದು ಡ್ರಗ್ಸ್ ಜಾಲದ ವ್ಯಾಪ್ತಿಯ ಬಗ್ಗೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ. ಸಾಮಾನ್ಯ ಪ್ರಕರಣ ದಾಖಲಿಸುವುದಕ್ಕೆ ಮಾತ್ರ ಸೀಮಿತವಾಗದೆ, ಮಾದಕ ವಸ್ತುಗಳ ಸಂಗ್ರಹ, ಸಾಗಣೆ ಹಾಗೂ ಮಾರಾಟದಲ್ಲಿ ಪದೇ ಪದೇ ತೊಡಗಿದ್ದ ನಾಲ್ವರು ಆರೋಪಿಗಳ ವಿರುದ್ಧ ನಿರ್ಬಂಧಾತ್ಮಕ ಕಾನೂನುಗಳಡಿ ಕ್ರಮ ಕೈಗೊಳ್ಳಲಾಗಿದೆ.
ಗದಗದ ನಾಗರಾಜ ದೊಡ್ಡಪ್ಪ ಮುತರಾಜ, ಹುಕ್ಕೇರಿಯ ದೀಪಕ ರಾವಸಾಹೇಬ ನಾಯಿಕ, ವಿಜಯಪುರ ಜಿಲ್ಲೆಯ ಬಾಬುರಾವ್ ಲಾವಟೆ ಹಾಗೂ ಯಲ್ಲಪ್ಪ ಚವ್ಹಾಣ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗಿದೆ. ಡ್ರಗ್ಸ್ ಜಾಲದ ಪ್ರಮುಖರನ್ನು ಗುರಿಯಾಗಿಸಿಕೊಂಡು ಕೈಗೊಂಡಿರುವ ಈ ಕ್ರಮಕ್ಕೆ ಪೊಲೀಸ್ ಇಲಾಖೆ ಹೆಚ್ಚಿನ ಮಹತ್ವ ನೀಡಿದೆ.ಕೇವಲ ಬಂಧನ ಮತ್ತು ಜಪ್ತಿಯಿಂದ ಸಮಸ್ಯೆ ಪರಿಹಾರವಾಗುವುದಿಲ್ಲ ಎಂಬ ನಿಟ್ಟಿನಲ್ಲಿ ಉತ್ತರ ವಲಯ ಪೊಲೀಸರು ಜಾಗೃತಿ ಕಾರ್ಯಕ್ರಮಗಳಿಗೂ ಆದ್ಯತೆ ನೀಡಿದ್ದಾರೆ. ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳ ಶಾಲೆ ಮತ್ತು ಕಾಲೇಜುಗಳಲ್ಲಿ ಒಟ್ಟು 1106 ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಮಾದಕ ವ್ಯಸನದ ದುಷ್ಪರಿಣಾಮಗಳು, ಆರೋಗ್ಯದ ಮೇಲೆ ಆಗುವ ಪರಿಣಾಮ, ಕುಟುಂಬದ ಸಮಸ್ಯೆಗಳು ಹಾಗೂ ಭವಿಷ್ಯದ ಮೇಲಿನ ದುಷ್ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮಾಹಿತಿ ನೀಡಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ತಿಳಿಸಿದ್ದಾರೆ. ಇದರ ಜೊತೆಗೆ ವಿವಿಧ ನಗರ ಹಾಗೂ ಪಟ್ಟಣಗಳಲ್ಲಿ 107 ಜಾಗೃತಿ ರ್‍ಯಾಲಿಗಳನ್ನು ನಡೆಸಲಾಗಿದೆ. ಪೊಲೀಸ್ ಸಿಬ್ಬಂದಿ, ವಿದ್ಯಾರ್ಥಿಗಳು, ಶಿಕ್ಷಕರು, ಸಾಮಾಜಿಕ ಸಂಘಟನೆಗಳು ಹಾಗೂ ಸಾರ್ವಜನಿಕರು ಈ ಅಭಿಯಾನದಲ್ಲಿ ಭಾಗವಹಿಸಿದ್ದರು.
ಗ್ರಾಮಗಳತ್ತ ಡ್ರಗ್ಸ್ ಜಾಲ:
ಇದುವರೆಗೆ ಮಹಾನಗರಗಳಿಗೆ ಸೀಮಿತವಾಗಿತ್ತು ಎನ್ನಲಾಗುತ್ತಿದ್ದ ಡ್ರಗ್ಸ್ ಜಾಲ ಈಗ ಉತ್ತರ ಕರ್ನಾಟಕದ ನಗರಗಳು, ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಿಗೂ ವಿಸ್ತರಿಸುತ್ತಿರುವ ಆತಂಕ ಎದುರಾಗಿದೆ. ಶೈಕ್ಷಣಿಕ ಕೇಂದ್ರಗಳು, ಕೈಗಾರಿಕಾ ಪ್ರದೇಶಗಳು ಹಾಗೂ ಗಡಿ ಭಾಗಗಳನ್ನು ಗುರಿಯಾಗಿಸಿಕೊಂಡು ಮಾದಕ ವಸ್ತುಗಳ ಮಾರಾಟ ಜಾಲ ಕಾರ್ಯನಿರ್ವಹಿಸುತ್ತಿದೆಯೇ ಎಂಬ ಅನುಮಾನವೂ ಮೂಡಿದೆ. ಗಡಿ ಜಿಲ್ಲೆಯಾಗಿರುವ ಬೆಳಗಾವಿಯ ಮೂಲಕ ಮಾದಕ ವಸ್ತುಗಳ ಸಾಗಣೆ ನಡೆಯುವ ಸಾಧ್ಯತೆಯನ್ನೂ ತನಿಖಾ ಸಂಸ್ಥೆಗಳು ಗಂಭೀರವಾಗಿ ಪರಿಗಣಿಸಿವೆ. ಒಂದು ವಾರದಲ್ಲಿ ನಡೆದ ಕಾರ್ಯಾಚರಣೆ ಪೊಲೀಸರ ಕಾರ್ಯಕ್ಷಮತೆಯನ್ನು ತೋರಿಸಿದರೂ, ಡ್ರಗ್ಸ್ ಸಮಸ್ಯೆಗೆ ಇದು ಅಂತಿಮ ಪರಿಹಾರವಲ್ಲ.ಮಾದಕ ವಸ್ತುಗಳು ಎಲ್ಲಿಂದ ಬರುತ್ತಿವೆ, ಯಾರ ಮೂಲಕ ಪೂರೈಕೆಯಾಗುತ್ತಿವೆ, ಹಣಕಾಸಿನ ಮೂಲ ಯಾವುದು, ಯುವಜನರನ್ನು ಗುರಿಯಾಗಿಸಿಕೊಂಡಿರುವ ಜಾಲ ಹೇಗೆ ಕಾರ್ಯನಿರ್ವಹಿಸುತ್ತಿದೆ ಎಂಬುವುದರ ಕುರಿತು ಸಮಗ್ರ ತನಿಖೆಯಾಗಬೇಕಿದೆ.
ಮಾದಕ ವಸ್ತುಗಳ ವಿರುದ್ಧ ಉತ್ತರ ವಲಯದಲ್ಲಿ ಶೂನ್ಯ ಸಹಿಷ್ಣುತೆ ನೀತಿಯನ್ನು ಅನುಸರಿಸಲಾಗುತ್ತಿದೆ. ಮಾದಕ ವಸ್ತುಗಳ ಸಂಗ್ರಹ, ಸಾಗಣೆ ಮತ್ತು ಮಾರಾಟದಲ್ಲಿ ತೊಡಗಿರುವವರ ವಿರುದ್ಧ ನಿರಂತರ ಕಾರ್ಯಾಚರಣೆ ಮುಂದುವರಿಯಲಿದೆ. ಕೇವಲ ಜಪ್ತಿ ಮತ್ತು ಬಂಧನಕ್ಕೆ ಸೀಮಿತವಾಗದೆ, ಡ್ರಗ್ಸ್ ಜಾಲದ ಮೂಲ ಪತ್ತೆ ಮಾಡಿ ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಗುರಿಯೊಂದಿಗೆ ಪೊಲೀಸರು ಕಾರ್ಯನಿರ್ವಹಿಸುತ್ತಿದ್ದಾರೆ.
-ಸಂದೀಪ ಪಾಟೀಲ, ಐಜಿಪಿ ಉತ್ತರ ವಲಯ.