ಕನ್ನಡಪ್ರಭ ವಾರ್ತೆ ಕಾರವಾರ

ಜಿಲ್ಲೆಯ ದಾಂಡೇಲಿ ಪಟ್ಟಣ ಪೊಲೀಸ್ ಠಾಣೆಯ ಇಬ್ಬರು ಪೊಲೀಸ್ ಸಿಬ್ಬಂದಿ ವಿರುದ್ಧ 18 ವರ್ಷದ ಯುವತಿಗೆ ವಾಟ್ಸ್ಆಪ್ ಮತ್ತು ಇನ್‌ಸ್ಟಾಗ್ರಾಂ ಮೂಲಕ ಅಶ್ಲೀಲ ಸಂದೇಶ ಕಳುಹಿಸಿ, ರೂಮ್‌ಗೆ ಬರುವಂತೆ ಒತ್ತಾಯಿಸಿ ಹಾಗೂ ದೂರವಾಣಿ ಮೂಲಕ ಅಸಭ್ಯವಾಗಿ ಮಾತನಾಡಿ ಲೈಂಗಿಕ ಕಿರುಕುಳ ನೀಡಿದ ಆರೋಪದಡಿ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಜು. 8ರಂದು ದಾಖಲಾದ ಪ್ರಕರಣದಲ್ಲಿ ದಾಂಡೇಲಿ ಪಟ್ಟಣ ಪೊಲೀಸ್ ಠಾಣೆಯ ಕಾನ್‌ಸ್ಟೇಬಲ್ ಇಮ್ರಾನ್ ಹಾಗೂ ಮಾಂತೇಶ್ ವಿರುದ್ಧ ದೂರು ದಾಖಲಿಸಲಾಗಿದೆ.

ಯುವತಿಯ ದೂರಿನ ಪ್ರಕಾರ, ಜು. 4ರಂದು ಅಪಘಾತಕ್ಕೊಳಗಾಗಿದ್ದ ತನ್ನ ಸ್ನೇಹಿತನನ್ನು ಭೇಟಿ ಮಾಡಲು ಹಾಗೂ ಆತನ ಮೊಬೈಲ್ ಪಡೆಯುವ ಉದ್ದೇಶದಿಂದ ಸ್ನೇಹಿತೆಯೊಂದಿಗೆ ದಾಂಡೇಲಿ ಪೊಲೀಸ್ ಠಾಣೆಗೆ ತೆರಳಿದ್ದರು.

ಇದಾದ ಎರಡು ದಿನಗಳ ಬಳಿಕ ಠಾಣೆಯ ದಾಖಲೆಗಳಲ್ಲಿ ಲಭ್ಯವಿದ್ದ ತನ್ನ ಮೊಬೈಲ್ ಸಂಖ್ಯೆಯನ್ನು ಬಳಸಿಕೊಂಡು ಆರೋಪಿಗಳಲ್ಲಿ ಒಬ್ಬರು ವಾಟ್ಸ್ಆಪ್ ಮೂಲಕ ಸಂಪರ್ಕಿಸಿ ಅಶ್ಲೀಲ ಸಂದೇಶಗಳನ್ನು ಕಳುಹಿಸಲು ಆರಂಭಿಸಿದ್ದಾನೆ ಎಂದು ಯುವತಿ ತಿಳಿಸಿದ್ದಾರೆ.


ದೂರಿನ ಪ್ರಕಾರ, ಕಾನ್‌ಸ್ಟೇಬಲ್ ಇಮ್ರಾನ್ ತನ್ನ ತಂದೆ-ತಾಯಿಯ ವಿಚ್ಛೇದನ ಪ್ರಕರಣದ ಸಂದರ್ಭದಲ್ಲಿ ಪರಿಚಿತರಾಗಿದ್ದು, ಬಳಿಕ ಇನ್‌ಸ್ಟಾಗ್ರಾಂ ಮೂಲಕ ನಿರಂತರವಾಗಿ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ತನ್ನನ್ನು ಫಾಲೋ ಮಾಡುತ್ತಿದ್ದರು ಎನ್ನಲಾಗಿದೆ.

ಬಳಿಕ ಮತ್ತೋರ್ವ ಕಾನ್‌ಸ್ಟೇಬಲ್ ಮಾಂತೇಶ್ ಕೂಡ ಇನ್‌ಸ್ಟಾಗ್ರಾಂನಲ್ಲಿ ಸಂಪರ್ಕಿಸಿ ಸಂದೇಶ ಕಳುಹಿಸಿದ್ದಲ್ಲದೆ, ನಂತರ ವಾಟ್ಸ್ಆಪ್ ಮೂಲಕವೂ ಅಶ್ಲೀಲ ಸಂದೇಶಗಳನ್ನು ಕಳುಹಿಸಿ ಲಾಡ್ಜ್‌ನಲ್ಲಿರುವ ರೂಮ್‌ಗೆ ಬರುವಂತೆ ಒತ್ತಾಯಿಸಿದ್ದಾರೆ ಎಂದು ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಸಂಬಂಧಿಸಿದ ಪೊಲೀಸ್ ಅಧಿಕಾರಿಗಳ ಗಮನಕ್ಕೆ ವಿಷಯ ತಂದರೂ ಆರಂಭದಲ್ಲಿ ಯಾವುದೇ ಕ್ರಮ ಕೈಗೊಳ್ಳಲಿಲ್ಲ ಎಂದು ಯುವತಿ ಆರೋಪಿಸಿದ್ದಾರೆ. ನಂತರ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್.ಎಂ.ಎನ್ ಅವರನ್ನು ನೇರವಾಗಿ ಭೇಟಿ ಮಾಡಿ ಲಿಖಿತ ದೂರು ಸಲ್ಲಿಸಿದ್ದು, ಅವರ ನಿರ್ದೇಶನದಂತೆ ಕಾರವಾರ ಮಹಿಳಾ ಪೊಲೀಸ್ ಠಾಣೆಯಲ್ಲಿ ಇಬ್ಬರೂ ಪೊಲೀಸ್ ಸಿಬ್ಬಂದಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಡಿಜಿಟಲ್ ಸಾಕ್ಷ್ಯಗಳನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ. ಆರೋಪಗಳ ಸತ್ಯಾಸತ್ಯತೆ ಕುರಿತು ತನಿಖೆ ನಡೆಯುತ್ತಿದೆ.