ಕನ್ನಡಪ್ರಭ ವಾರ್ತೆ ರಾಮದುರ್ಗ

ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪತ್ರಕರ್ತರು ಶ್ರಮಿಸುವ ವರ್ಗವಾಗಿದೆ. ಸಮಾಜಕ್ಕೆ ಅಗತ್ಯ ಸೇವೆ ನೀಡುವ ಪತ್ರಕರ್ತರ ಕಾರ್ಯವನ್ನು ಗುರ್ತಿಸುವಂತಾಗಬೇಕು ಎಂದು ಕನ್ನಡಪ್ರಭ ಪತ್ರಿಕೆಯ ಹುಬ್ಬಳ್ಳಿಯ ಸ್ಥಾನಿಕ ಸಂಪಾದಕ ಮಲ್ಲಿಕಾರ್ಜನ ಸಿದ್ದಣ್ಣವರ ಹೇಳಿದರು.

ಪಟ್ಟಣದ ಸಿ.ಎಸ್.ಬೆಂಬಳಗಿ ಮಹಾವಿದ್ಯಾಲಯದಲ್ಲಿ ಶನಿವಾರ ಸ್ಥಳೀಯ ಪ್ರೆಸ್‌ಕ್ಲಬ್ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಮಾತನಾಡಿದ ಅವರು, ಚಲನಚಿತ್ರಗಳಲ್ಲಿ ನಾಯಕ ಕೇವಲ ತುಟಿಗಳನ್ನು ಆಡಿಸಿದರೇ ಹಿನ್ನೆಲೆಯಾಗಿ ಹಾಡುವ ವ್ಯಕ್ತಿ ಬೇರೆ ಇರುವಂತೆ ಸರ್ಕಾರದ ಅಭಿವೃದ್ಧಿ ಕಾರ್ಯಗಳು, ಅಧಿಕಾರಿಗಳ ಕಾರ್ಯ ವೈಖರಿ ಮತ್ತು ರಾಜಕಾರಣಿಯ ಎಲ್ಲ ಸ್ತರಗಳ ಬೆಳವಣಿಗೆಯನ್ನು ಪತ್ರಕರ್ತನೇ ನಿಭಾಯಿಸುತ್ತಾನೆ. ಆದರೂ ಊಟದಲ್ಲಿಯ ಕರಿಬೇವು ತೆಗೆದು ಹಾಕುವಂತೆ ಪತ್ರಕರ್ತರನ್ನು ಎಲ್ಲರೂ ಕಡೆಗಣಿಸುತ್ತಾರೆ ಎಂದು ತಿಳಿಸಿದರು.ಸಂವಿಧಾನದಲ್ಲಿರುವ ಕಾರ್ಯಾಂಗ, ನ್ಯಾಯಾಂಗ ಮತ್ತು ಶಾಸಕಾಂಗಗಳು ಸಮರ್ಪಕ ಕಾರ್ಯ ನಿರ್ವಹಣೆಯಲ್ಲಿ ಎಡವಿದಾಗ ಸರಿಪಡಿಸುವ ಕಾರ್ಯ ಮಾಡಲೆನ್ನುವ ಉದ್ದೇಶದಿಂದ ಪ್ರಜಾಪ್ರಭುತ್ವದ ಕಾವಲು ಎಂದು ನಾಲ್ಕನೆ ಅಂಗವಾದ ಪತ್ರಿಕಾರಂಗಕ್ಕಿದೆ ಎಂದರು.ಧಾರವಾಡದ ಆಕಾಶವಾಣಿ ನಿಲಯದ ವಿಶ್ರಾಂತ ನಿರ್ದೇಶಕ ಡಾ.ಬಸು ಬೇವಿನಗಿಡದ ಮಾತನಾಡಿ, ಸಮಾಜದಲ್ಲಿಯ ನೂನ್ಯತೆಗಳನ್ನು ಹೆಕ್ಕಿ ತೆಗೆಯುವುದು ಕೇವಲ ಪತ್ರಕರ್ತರ ಜವಾಬ್ದಾರಿಯಲ್ಲ. ಸಮಾಜದಲ್ಲಿರುವ ಪ್ರತಿಯೊಬ್ಬ ಪ್ರಜೆಯೂ ಅನ್ಯಾಯಗಳ ವಿರುದ್ಧ ಹೋರಾಟಕ್ಕೆ ಮುಂದಾಗಬೇಕು. ಅಂದಾಗ ಮಾತ್ರ ಸಮಾಜದಲ್ಲಿ ಸಮಾನತೆ ತರಲು ಸಾಧ್ಯ ಎಂದರು.ತಹಸೀಲ್ದಾರ್‌ ಪ್ರಕಾಶ ಗಾಯಕವಾಡ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಯುವ ಜನಾಂಗ ಮತ್ತು ಮಕ್ಕಳು, ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವ ಸುದ್ಧಿಗೆ ಪತ್ರಕರ್ತರು ಆದ್ಯತೆ ನೀಡುವುದು ಅಗತ್ಯವಾಗಿದೆ. ಇಂದು ಸಮಾಜದ ಮೇಲೆ ದುಷ್ಪರಿಣಾಮದ ಕೊಲೆ, ದೊಂಬಿಗಳಂತಹ ಕೆಟ್ಟ ಸುದ್ಧಿಗಳ ವೈಭವಿಕರಣ ಮಾಡುವುದನ್ನು ಕೈ ಬಿಟ್ಟು ಒಳ್ಳೆಯ ಸುದ್ದಿ ಪ್ರಸಾರದತ್ತ ಗಮನ ಹರಿಸುವ ಮೂಲಕ ಕೆಟ್ಟ ಸುದ್ದಿಗಳ ಪ್ರಸಾರಕ್ಕೆ ಪತ್ರಕರ್ತರು ಕಡಿವಾಣ ಹಾಕಿಕೊಳ್ಳಬೇಕು ಎಂದು ಸಲಹೆ ನೀಡಿದರು.ಪ್ರೆಸ್‌ಕ್ಲಬ್ ಅಧ್ಯಕ್ಷ ರವಿ ಸದಾಶಿವನವರ ಅಧ್ಯಕ್ಷತೆ ವಹಿಸಿದ್ದರು. ಡಿವೈಎಸ್ಪಿ ಚಿದಂಬರ ಮಡಿವಾಳರ, ವಿದ್ಯಾಪ್ರಸಾರಕ ಸಮಿತಿಯ ಅಧ್ಯಕ್ಷ ಪ್ರೊ.ಎಸ್.ಎಸ್.ಸುಲ್ತಾನಪೂರ ಮಾತನಾಡಿದರು. ಖಜಾಂಚಿ ಈರಣ್ಣ ಬುಡ್ಡಾಗೋಳ ಸ್ವಾಗತಿಸಿದರು. ಮಲ್ಲಿಕಾರ್ಜುನ ಗೊಂದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿ.ಬಿ.ಪಾಟೀಲ ನಿರೂಪಿಸಿದರು. ಐ.ಆರ್.ಪಾಟೀಲ ವಂದಿಸಿದರು.ಸಮ ಸಮಾಜ ನಿರ್ಮಾಣಕ್ಕೆ 12ನೇ ಶತಮಾನದಲ್ಲಿ ಶರಣರು ಶ್ರಮಿಸಿದರೇ, ಸ್ವಾತಂತ್ರ್ಯ ನಂತರ ಡಾ.ಅಂಬೇಡ್ಕರ್‌ ಅವರು ಶರಣ ತತ್ವದ ಆಶಯದಂತೆ ಸಂವಿಧಾನ ರಚಿಸಿದರು. ಸಂವಿಧಾನದಂತೆ ಜನಸಾಮಾನ್ಯರ ಧ್ವನಿಯಾಗಿ ಪತ್ರಕರ್ತರು ಕೆಲಸ ಮಾಡುತ್ತಿದ್ದಾರೆ. ಆದರೆ, ಸಮಾಜ ಪತ್ರಕರ್ತರ ಬಗ್ಗೆ ಕಾಳಜಿ ವಹಿಸದಿರುವುದು ವಿಷಾದನೀಯ.

-ಮಲ್ಲಿಕಾರ್ಜನ ಸಿದ್ದಣ್ಣವರ, ಸ್ಥಾನಿಕ ಸಂಪಾದಕರು, ಕನ್ನಡಪ್ರಭ ಹುಬ್ಬಳ್ಳಿ ಆವೃತ್ತಿ.ಸಮಾಜದಲ್ಲಿ ಪತ್ರಕರ್ತರು ಇರುವುದರಿಂದಲೇ ಸಮಾಜದಲ್ಲಿ ಎಲ್ಲರೂ ಸುರಕ್ಷಿತವಾಗಿದ್ದಾರೆ. ಸಮಾಜದಲ್ಲಿ ಅಟ್ಟಹಾಸದ ಪ್ರತಿಕಾರ ಹೆಚ್ಚಾಗಿ ಸಮಾಜದಲ್ಲಿ ಅಧೋಗತಿ ಉಂಟಾಗುತ್ತಿತ್ತು ಎಂಬುವುವನ್ನು ಸಾರ್ವಜನಿಕರು ಅರಿತುಕೊಳ್ಳಬೇಕು. ಸಮಾಜಕ್ಕಾಗಿ ನಿರಂತರ ಹೋರಾಟ ನಡೆಸುವ ಪತ್ರಕರ್ತರ ಸಹಾಯಕ್ಕಾಗಿ ಸಮಾಜ ಮುಂದಾಗಬೇಕು.

-ಡಾ.ಬಸು ಬೇವಿನಗಿಡದ,


ಧಾರವಾಡದ ಆಕಾಶವಾಣಿ ನಿಲಯದ ವಿಶ್ರಾಂತ ನಿರ್ದೇಶಕರು.