ಕನ್ನಡಪ್ರಭ ವಾರ್ತೆ ವಿಜಯಪುರ

ಜಿಲ್ಲೆಯಲ್ಲಿ ನಡೆಯುತ್ತಿರುವ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌)-2026ರ ಕಾರ್ಯವನ್ನು ನಿಗದಿತ ವೇಳಾಪಟ್ಟಿಯಂತೆ ಪರಿಣಾಮಕಾರಿಯಾಗಿ ಪೂರ್ಣಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ಡಾ.ಆನಂದ.ಕೆ ಅವರು ಜಿಲ್ಲೆಯ ಎಲ್ಲಾ ತಾಲೂಕುಗಳ ತಹಸೀಲ್ದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಿಂದ ಜಿಲ್ಲೆಯ ಎಲ್ಲ ತಾಲೂಕು ತಹಸೀಲ್ದಾರರೊಂದಿಗೆ ನಡೆಸಿದ ವಿಡಿಯೋ ಸಂವಾದ ಸಭೆಯಲ್ಲಿ ಅವರು ಈ ಸೂಚನೆ ನೀಡಿದರು. ತಹಸೀಲ್ದಾರರು ತಮ್ಮ ಲಾಗಿನ್‌ಗಳಲ್ಲಿ ಬೂತ್ ಮಟ್ಟದ ಅಧಿಕಾರಿಗಳು (ಬಿಎಲ್‌ಒ) ಎಎಸ್‌ಡಿಡಿ (ಅಬ್ಸೆಂಟ್, ಶಿಫ್ಟೆಡ್‌, ಡೂಪ್ಲಿಕೇಟ್‌, ಡೆತ್‌) ಸಂಬಂಧಿಸಿದಂತೆ ಭರ್ತಿ ಮಾಡಿ ಸಲ್ಲಿಸಿರುವ ವಿವರಗಳನ್ನು ಕೂಲಂಕಶವಾಗಿ ಪರಿಶೀಲಿಸಬೇಕು. ಅದಕ್ಕೆ ತಕ್ಕಂತೆ ಪೂರಕ ದಾಖಲೆಗಳನ್ನು ಖಾತ್ರಿಪಡಿಸಿಕೊಳ್ಳಬೇಕು. ಎಎಸ್‌ಡಿಡಿ ಮತದಾರರ ವಿವರಗಳನ್ನು ಸಂಬಂಧಿತ ಬೂತ್ ಮಟ್ಟದ ಏಜೆಂಟರಿಗೆ (ಬಿಎಲ್‌ಎ) ಹಾಗೂ ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ನಿಯಮಾನುಸಾರ ಒದಗಿಸಿರುವ ಕುರಿತು ಮಾಹಿತಿ ಪಡೆಯಬೇಕು. ಇಡೀ ಪ್ರಕ್ರಿಯೆಯನ್ನು ಅತ್ಯಂತ ಪಾರದರ್ಶಕವಾಗಿ ಪೂರ್ಣಗೊಳಿಸಬೇಕು ಎಂದು ಸೂಚನೆ ನೀಡಿದರು.

​ಡಿಜಿಟಲೀಕರಣಕ್ಕೆ ಚುರುಕು: ಗಣತಿ ನಮೂನೆಗಳ ವಿತರಣೆಯ ಪ್ರಗತಿ ಹಾಗೂ ಡಿಜಿಟಲೀಕರಣದ ಕಾರ್ಯವನ್ನು ತ್ವರಿತಗೊಳಿಸಿ, ಯಾವುದೇ ಬಾಕಿ ಉಳಿಯದಂತೆ ಕ್ರಮ ಕೈಗೊಳ್ಳಬೇಕು. ಮನೆಮನೆಗೆ ಭೇಟಿ ನೀಡಿ ನಮೂನೆಗಳನ್ನು ವಿತರಿಸುವ ಹಾಗೂ ಸ್ವೀಕರಿಸಿದ ನಮೂನೆಗಳನ್ನು ತಕ್ಷಣವೇ ಡಿಜಿಟಲೀಕರಣಗೊಳಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.

ದೂರು ಮತ್ತು ಆಕ್ಷೇಪಣೆಗಳ ವಿಲೇವಾರಿ: ಮತದಾರರಿಂದ ಸಲ್ಲಿಕೆಯಾಗುವ ಹಕ್ಕು ಮಂಡನೆಗಳು ಮತ್ತು ಆಕ್ಷೇಪಣೆಗಳು ನಿಗದಿತವಾಗಿ ನಿಯಮಾನುಸಾರ ತ್ವರಿತವಾಗಿ ವಿಲೇವಾರಿ ಆಗುವಂತೆ ಕ್ರಮ ಕೈಗೊಳ್ಳಬೇಕು. ಮತದಾರರಿಗೆ ಯಾವುದೇ ತೊಂದರೆಯಾಗದಂತೆ ಅಗತ್ಯ ಸಲಹೆ ಹಾಗೂ ಸಹಕಾರ ನೀಡಬೇಕು ಎಂದು ತಿಳಿಸಿದರು.


​ಗೌರವಧನ ವಿತರಣೆ: ಬೂತ್ ಮಟ್ಟದ ಅಧಿಕಾರಿಗಳ ಬಿಎಲ್‌ಒ ಅವರಿಗೆ ನೀಡಲಾಗುವ ಗೌರವಧನವನ್ನು ವಿಳಂಬವಿಲ್ಲದೆ ಸಮಯಕ್ಕೆ ಸರಿಯಾಗಿ ವಿತರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ನಿರ್ದೇಶನ ನೀಡಿದ್ದಾರೆ.

ಜಿಲ್ಲೆಯಲ್ಲಿ 18,31,696 ಗಣತಿ ನಮೂನೆ ವಿತರಣೆ:

ಜಿಲ್ಲೆಯಾದ್ಯಂತ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಆರಂಭಗೊಂಡಿದ್ದು, ಮತಗಟ್ಟೆ ಮಟ್ಟದ ಅಧಿಕಾರಿಗಳು ಜೂ.29 ರಿಂದ ಮನೆ ಮನೆಗೆ ಭೇಟಿ ನೀಡಿ ಮತದಾರರಿಗೆ ಗಣತಿ ನಮೂನೆಗಳನ್ನು ವಿತರಿಸುವ ಕಾರ್ಯ ಭರದಿಂದ ನಡೆದಿದ್ದು, ಜಿಲ್ಲೆಯ ಪ್ರಗತಿ ವರದಿಯ ಪ್ರಕಾರ ಇಲ್ಲಿಯವರೆಗೆ 18,31,696 ಗಣತಿ ನಮೂನೆ ಮತದಾರರಿಗೆ ವಿತರಿಸಲಾಗಿದೆ. ಅವುಗಳಲ್ಲಿ 4,50,158 ಗಣಕೀಕರಣಗೊಂಡ ಗಣತಿ ನಮೂನೆಗಳಿವೆ ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಜಿಲ್ಲಾಧಿಕಾರಿ ಡಾ.ಆನಂದ.ಕೆ ತಿಳಿಸಿದ್ದಾರೆ.

2025ರ ಮತದಾರರ ಪಟ್ಟಿಯಂತೆ ಜಿಲ್ಲೆಯಲ್ಲಿ ಒಟ್ಟು 19,82,114 ಮತದಾರರು ದಾಖಲಾಗಿದ್ದಾರೆ. ಇವರಿಗೆ ಮನೆ ಮನೆಗೆ ತೆರಳಿ ಗಣತಿ ನಮೂನೆಗಳನ್ನು ವಿತರಿಸಿ, ಅಗತ್ಯ ಮಾಹಿತಿ ಸಂಗ್ರಹಿಸುವ ಕಾರ್ಯ ನಡೆಯುತ್ತಿದೆ. ಗಣತಿ ನಮೂನೆಗಳ ವಿತರಣೆ ಮತ್ತು ಡಿಜಿಟಲೀಕರಣ ಕಾರ್ಯ ಜೂನ್ 30 ರಿಂದ ಜುಲೈ 29ರ ವರೆಗೆ ನಡೆಯಲಿದ್ದು, ಈ ಅವಧಿಯಲ್ಲಿ ಮತದಾರರು ತಮ್ಮ ವಿವರಗಳನ್ನು ಪರಿಶೀಲಿಸಿ ಅಗತ್ಯ ದಾಖಲೆಗಳೊಂದಿಗೆ ನಮೂನೆಗಳನ್ನು ಸಲ್ಲಿಸಬಹುದಾಗಿದೆ. 1,528 ಮತದಾರರು ಆನ್ ಲೈನ್ ಮೂಲಕ ಗಣತಿ ನಮೂನೆ ಸಲ್ಲಿಸಿದ್ದಾರೆ. 2,141 ಮತದಾರರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 3,276 ಮತದಾರರು ಮೃತಪಟ್ಟಿದ್ದಾರೆ. 824 ಮತದಾರರು ಈಗಾಗಲೇ ನೋಂದಾಯಿಸಿಕೊಂಡಿರುವುದು ಪರಿಶೀಲನೆಯಲ್ಲಿ ಕಂಡುಬಂದಿದೆ. ಸಂಗ್ರಹಿಸಲಾಗದ ಅಥವಾ ಗೈರುಹಾಜರಾಗಿರುವ ಮತದಾರರು 55 ಹಾಗೂ 44 ಇತರೆ ಮತದಾರರಿದ್ದಾರೆ ಎಂದು ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.