ಸರಾಯಿ ಮಾರಾಟ ಸುಳ್ಳು ಇದ್ದರೆ ಶಾಸಕ ಡಾ.ಸಿದ್ದು ಪ್ರಮಾಣ ಮಾಡಲಿ

KannadaprabhaNewsNetwork | Published : Aug 18, 2024 1:52 AM

ಸಾರಾಂಶ

ಸೈಟ್‌ ಅತಿಕ್ರಮಿಸಿ ಲಾಡ್ಜ್‌ ನಿರ್ಮಿಸಿದ್ದಾರೆ, ಕಳಪೆ ಹೈಮಾಸ್ಟ್‌ ದೀಪ ತರಿಸಿದ್ದಾರೆಸುಳ್ಳಾದ್ರೆ ರಾಜಕೀಯದಿಂದ ಸನ್ಯಾಸ ಸುದ್ದಿಗೋಷ್ಠಿಯಲ್ಲಿ ರಾಜಶೇಖರ ಪಾಟೀಲ್‌

ಕನ್ನಡಪ್ರಭ ವಾರ್ತೆ ಹುಮನಾಬಾದ್‌

ಲಾಡ್ಜ್‌ ಅತಿಕ್ರಮಣ, ಸರಾಯಿ ಮಾರಾಟ ನನ್ನಂದಾಗಿಲ್ಲ ಇದೆಲ್ಲ ಸುಳ್ಳು ಎಂದು ಪತ್ನಿ ಮಕ್ಕಳೊಂದಿಗೆ ವೀರಭದ್ರೇಶ್ವರ ದೇವರ ಮೇಲೆ ಪ್ರಮಾಣ ಮಾಡಲಿ ನಾನು ರಾಜಕೀಯದಿಂದ ಸನ್ಯಾಸ ಸ್ವೀಕರಿಸುತ್ತೇನೆ. ಸಹೋದರರಿಬ್ಬರು ವಿಧಾನ ಪರಿಷತ್‌ ಸದಸ್ಯತ್ವದಿಂದ ರಾಜೀನಾಮೆ ನೀಡುತ್ತಾರೆ ಎಂದು ಮಾಜಿ ಸಚಿವ ರಾಜಶೇಖರ ಪಾಟೀಲ್‌ ಅವರು ಶಾಸಕ ಡಾ.ಸಿದ್ದಲಿಂಗಪ್ಪ ಪಾಟೀಲ್‌ ಅವರಿಗೆ ಸವಾಲ್‌ ಹಾಕಿದ್ದಾರೆ.

ಪಟ್ಟಣದ ಗೃಹ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕರು ಹಾಗೂ ಅವರ ಸಹೋದರರು ಜಮೀನಿನಲ್ಲಿ ಸರಾಯಿ ಪಾಕೆಟ್‌ ತಯಾರಿಸಿ ಶಾಸಕ ಡಾ.ಸಿದ್ದು ಪಾಟೀಲ್‌ ಪ್ರತಿ ದಿನ ನೂರು ಪಾಕೆಟ್‌ ಸರಾಯಿ ಮಾರಾಟ ಮಾಡದೇ ಮನೆಗೆ ಹೋಗುತ್ತಿರಲಿಲ್ಲ, ಹೌಸಿಂಗ್‌ ಬೋರ್ಡ್‌ನಿಂದ ಮಂಜೂರಾತಿಯಾದ 40-60 ಸೈಟ್ ಜಾಗದಲ್ಲಿ 40-70 ಸೈಟ್‌ ಅತಿಕ್ರಮಿಸಿ ಲಾಡ್ಜ್‌ ನಿರ್ಮಿಸಿದ್ದಾರೆ ಎಂದು ಆರೋಪಿಸಿದರು.

ಹುಮನಾಬಾದ್‌ ಮತಕೇತ್ರದ ಜನತೆ ಇಂತಹ ಭ್ರಷ್ಟ ಶಾಸಕನನ್ನು ಎಂದೂ ಕಂಡಿಲ್ಲ. ಶಾಸಕರು ಕೈಗಾರಿಕಾ ಪ್ರದೇಶದಲ್ಲಿ ನೀರು ಮಾರಾಟ ಮಾಡಿ ದುಡ್ಡು ಸಂಗ್ರಹ ಮಾಡುತ್ತಿದ್ದಾರೆ. ಕಾರ್ಖಾನೆಯವರಿಗೆ ಕರೆ ಮಾಡಿ ಪ್ಲಾಶ್‌ (ಕೊಳಸಿ) ಯಾರಿಗೂ ಕೊಡಬೇಡಿ ನಮ್ಮ ವ್ಯಕ್ತಿಗೆ ನೀಡುವಂತೆ ಹೇಳುತ್ತಾರೆ ಎಂದು ದೂರಿದರು.ಕಾರ್ಖಾನೆಯಿಂದ ಚುನಾವಣೆಗೆ ₹5 ಲಕ್ಷ ಬೇಡಿಕೆ ಇಡುವುದು ಹಾಗೂ ಈ ಹಿಂದೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವಾಗಲೂ ಮತಗಳಿಕೆಯಲ್ಲಿ ಮುಂದೆ ಇತ್ತು ಆದರೆ ಈ ಬಾರಿ ಜನ ಕಾಂಗ್ರೆಸ್‌ ಪಕ್ಷದ ಕಡೆಗೆ ಒಲವು ನೀಡಿರುವದಕ್ಕೆ ಬಿಜೆಪಿಯ ಭ್ರಷ್ಟಾಚಾರವೇ ಕಾರಣ. ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರಿಗೆ ಜೈಲುವಾಸ ಆಗುವ ಸಂದರ್ಭದಲ್ಲಿ ಇವರ ಖಾತೆಗೆ ಹಾಗೂ ಇವರ ಪುಣೆ ಅಳಿಯನ ಖಾತೆಗೆ ಹಣ ವರ್ಗಾವಣೆಯಾಗಿದೆ. ಈ ಕುರಿತು ತನಿಖೆ ಯಾವಾಗ ಬರುತ್ತದೆ ಗೊತ್ತಿಲ್ಲ ಎಂದು ನುಡದರು.

2003ರಿಂದ ಇಲ್ಲಿಯವರೆಗೆ ನನ್ನ ಅವಧಿಯಲ್ಲಿ ಆಸ್ಪತ್ರೆ ಮಂಜೂರಾತಿ, ಸಂಚಾರ ಪೊಲೀಸ್ ಠಾಣೆ, ಚಿಟ್ಟಗುಪ್ಪ ತಾಲೂಕು ಘೋಷಣೆ ಸೇರಿದಂತೆ ಹಳ್ಳಿಯಿಂದ ಹಳ್ಳಿಗಳಿಗೆ ಸಂಪರ್ಕ ರಸ್ತೆ ಸೇರಿದಂತೆ ಅನೇಕ ಅಭಿವೃದ್ಧಿ ಕುರಿತು ದಾಖಲೆಗಳು ನೀಡುತ್ತೇನೆ. ದಿ. ಮೀರಾಜೋದ್ದಿನ ಪಟೇಲ್‌ ಬಳಿಕ ನಾನೇ ಅಮೃತ ಯೋಜನೆ ತಂದಿದ್ದೇನೆ ಎಂದು ಶಾಸಕ ಡಾ. ಸಿದ್ದು ಪಾಟೀಲ್‌ ಹೇಳುತ್ತಿದ್ದಾರೆ. ಅಮೃತ ಯೋಜನೆ ಹಳೆ ಯೋಜನೆ. ಇವರ ಅವಧಿಯಲ್ಲಿ ಮುಖ್ಯ ರಸ್ತೆಯಲ್ಲಿ ತಗ್ಗು ಗುಂಡಿ ಬಿದ್ದಿವೆ ಅದು ಕಣ್ಣಿಗೆ ಕಾಣುತ್ತಿಲ್ಲವೆ ಎಂದು ಕುಟುಕಿದರು.ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಸದಸ್ಯ ಭೀಮರಾವ್‌ ಪಾಟೀಲ್‌, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಅಫ್ಸರಮಿಯ್ಯಾ, ವೀರಣ್ಣ ಪಾಟೀಲ್‌, ಓಂಕಾರ ತುಂಬಾ, ಲಕ್ಷ್ಮಣ ಬುಳ್ಳಾ, ಶ್ರೀಮಂತ ಪಾಟೀಲ್‌, ರಮೇಶ ಡಾಕುಳಗಿ, ರವಿಕುಮಾರ ಘವಳಕರ್‌, ಪ್ರಭು ತಾಳಮಡಗಿ, ಮಹೇಶ ಅಗಡಿ, ಬಾಬು ಟೈಗರ್‌ ಸೇರಿದಂತೆ ಅನೇಕರಿದ್ದರು.

ಕಳಪೆ ಮಟ್ಟದ ಹೈಮಾಸ್ಟ್‌ ಲೈಟಿಂಗ್‌ಗೆ ಅನುದಾನ ಬಳಕೆ: ಕಲ್ಯಾಣ ಕರ್ನಾಟಕ ಯೋಜನೆಯಡಿಯಲ್ಲಿ ಕ್ಷೇತ್ರ ಅಭಿವೃದ್ಧಿಗೆ ₹65 ಕೋಟಿ ಅನುದಾನ ಬಿಡುಗಡೆಯಾಗಿದೆ. ಅದರಲ್ಲಿ 5-6 ಕೋಟಿ ಕೇವಲ ಕಳಪೆ ಮಟ್ಟದ ಹೈಮಾಸ್ಟ್‌ ಲೈಟಿಂಗ್‌ಗೆ ನೀಡಿದ್ದಾರೆ. ಈ ಕುರಿತು ಮುಂಬರುವ ದಿನಗಳಲ್ಲಿ ದಾಖಲೆ ಸಹಿತ ಮಾಹಿತಿ ನೀಡಲಾಗುವುದು ಎಂದು ರಾಜಶೇಖರ್‌ ಪಾಟೀಲ್‌ ತಿಳಿಸಿದರು.

Share this article