ಕನ್ನಡಪ್ರಭ ವಾರ್ತೆ ದಾವಣಗೆರೆ
ಕೃಷಿಗೆ ಪೂರಕವಾದ ರೂಢಿಗತ, ನಕಾಶೆ ದಾರಿಗಳ ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹುಟ್ಟುವಳಿಗಳ ಸಾಗಣೆ ಮಾಡಲು ಅನುಕೂಲ ಕಲ್ಪಿಸುವುದು ಎಲ್ಲಾ ತಹಸೀಲ್ದಾರರ ಜವಾಬ್ದಾರಿ ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ತಿಳಿಸಿದರು.ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಕಂದಾಯ ಅಧಿಕಾರಿಗಳು ಹಾಗೂ ರೈತ ಮುಖಂಡರೊಂದಿಗೆ ನಡೆಸಲಾದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ ರೈತಸ್ನೇಹಿಯಾಗಿ ಕೆಲಸ ಮಾಡಲು ಈಗಾಗಲೇ ಸರ್ಕಾರ ಸುತ್ತೋಲೆಯ ಮೂಲಕ ರೂಢಿಗತ, ನಕಾಶೆ ರಸ್ತೆಗಳಿದ್ದಲ್ಲಿ ಅವುಗಳನ್ನು ಯಾರಾದರೂ ಮುಚ್ಚಿದರೆ ಅಂತಹ ದಾರಿ ಬಿಡಿಸಿಕೊಡುವ ಮೂಲಕ ರೈತರು ತಮ್ಮ ಹೊಲಗಳಿಗೆ ಹೋಗಲು ಅನುಕೂಲ ಕಲ್ಪಿಸಬೇಕು. ರೈತರು ಬೆಳೆದ ಬೆಳೆಗಳನ್ನು ಸಕಾಲದಲ್ಲಿ ಕಟಾವು ಮಾಡಿ ಹೊರ ತರದಿದ್ದಲ್ಲಿ ಹಾಳಾಗುವ ಸಂಭವವಿರುತ್ತದೆ. ಆದ್ದರಿಂದ ಸರ್ಕಾರದ ಸುತ್ತೋಲೆಯ ಮೂಲಕ ನಕಾಶೆಯಲ್ಲಿ ಇಲ್ಲದ ದಾರಿ ರೂಢಿಗತವಾಗಿದ್ದಲ್ಲಿ, ಅದನ್ನು ದಾರಿ ಎಂದು ಪರಿಗಣಿಸಿ ಯಾರಾದರೂ ಇದಕ್ಕೆ ಅಡ್ಡಿಪಡಿಸಿದಲ್ಲಿ ಇದನ್ನು ಬಿಡಿಸಿಕೊಡುವ ಜವಾಬ್ದಾರಿ ಕಂದಾಯ ಇಲಾಖೆ ಅಧಿಕಾರಿಗಳದ್ದಾಗಿರುತ್ತದೆ. ಮತ್ತು ನಕಾಶೆ ದಾರಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದಲ್ಲಿ ಕೂಡಲೇ ಆ ದಾರಿ ತೆರವು ಮಾಡಿಸುವ ಮೂಲಕ ಜನರು ಓಡಾಡಲು ಅವಕಾಶ ಕಲ್ಪಿಸಬೇಕು ಎಂದರು.
ರೈತರು ತಮ್ಮ ಜಮೀನುಗಳಿಗೆ ಹೋಗಲು ರೂಢಿಗತ, ನಕಾಶೆ ದಾರಿ ಇಲ್ಲದ ಕಾರಣ ಅನೇಕ ಸಮಸ್ಯೆ ಎದುರಿಸುತ್ತಿರುವುದು ಮನಗಂಡು ಸುತ್ತೋಲೆಯ ಮೂಲಕ ಪರಿಹರಿಸುವ ಕ್ರಮಗಳ ಬಗ್ಗೆ ವಿವರಿಸಲಾಗಿದೆ. ಯಾವುದೇ ದೂರು ರೈತರಿಂದ ಬಂದಲ್ಲಿ ಕೂಡಲೇ ಕ್ರಮಕ್ಕೆ ಮುಂದಾಗಬೇಕೆಂದು ತಹಸೀಲ್ದಾರ್‌ಗೆ ಸೂಚನೆ ನೀಡಿದರು.ಬಗರ್‌ಹುಕುಂ ಸಮಿತಿ ರಚನೆ:
ಬಗರ್‌ಹುಕುಂನಡಿ ಜಮೀನು ಮಂಜೂರು ಮಾಡಲು ಮಾಯಕೊಂಡ ಕ್ಷೇತ್ರ ಹೊರತುಪಡಿಸಿ ಉಳಿದ ಎಲ್ಲಾ ತಾಲೂಕುಗಳಲ್ಲಿ ಬಗರ್‌ಹುಕುಂ ಸಮಿತಿಗಳನ್ನು ರಚಿಸಲಾಗಿದೆ. ಎಲ್ಲಾ ತಾಲೂಕುಗಳಲ್ಲಿ ಭೂ ಮಂಜೂರಾತಿಗೆ ನಮೂನೆ-57 ರಲ್ಲಿ ಸಲ್ಲಿಸಿದ ಅರ್ಜಿಗಳ ಪರಿಶೀಲನೆ ಮಾಡಲು ಸಮಿತಿ ಕಾರ್ಯಾರಂಭ ಮಾಡಬೇಕಾಗಿದೆ. ಈ ಹಿಂದಿಗಿಂತ ಈಗ ಡಿಜಿಟಲ್ ಮಾದರಿಯಲ್ಲಿ ಭೂ ಮಂಜೂರಾತಿಗೆ ಕ್ರಮ ವಹಿಸಲಾಗುತ್ತಿದೆ. ಸಾಗುವಳಿ ಮಾಡಲಾಗುತ್ತಿರುವ ಜಮೀನಿಗೆ ಜಿಯೋಫೆನ್ಸಿಂಗ್, ಎಷ್ಟು ವರ್ಷಗಳಿಂದ ಸಾಗುವಳಿ ಮಾಡಲಾಗುತ್ತಿದೆ ಎಂಬ ಸ್ಯಾಟಲೈಟ್ ಛಾಯಾಚಿತ್ರ, ಸರ್ವೆ ಇಲಾಖೆಯಿಂದ ಸಾಗುವಳಿ ಭೂಮಿಗೆ ಸ್ಕೆಚ್ ಪಡೆದು ಸಮಿತಿಯಲ್ಲಿ ಪರಿಶೀಲನೆ ಮಾಡಿದ ನಂತರ ಭೂ ಮಂಜೂರಾತಿ ಮಾಡಲು ನಿಯಮಾವಳಿ ರೂಪಿಸಲಾಗಿದೆ. ಮತ್ತು ಸಮಿತಿ ಸಭೆಯ ನಡಾವಳಿಯನ್ನು ದಾಖಲಿಸುವಾಗ ಡಿಜಿಟಲ್ ಮಾದರಿಯಲ್ಲಿ ದಾಖಲಿಸುವ ಮೂಲಕ ಸಭೆಯಲ್ಲಿ ಭಾಗವಹಿಸುವ ಸದಸ್ಯರ ಹಾಜರಾತಿ ಬಯೋಮೆಟ್ರಿಕ್ ಮೂಲಕ ಪಡೆದುಕೊಳ್ಳಲಾಗುತ್ತದೆ ಎಂದು ತಿಳಿಸಿದರು.ರೈತ ಮುಖಂಡರು ಗ್ರಾಮಗಳಲ್ಲಿ ಸ್ಮಶಾನ ಜಾಗದ ಸಮಸ್ಯೆ ಇದೆ ಎಂದಾಗ, ಸ್ಮಶಾನ ಭೂಮಿಯ ಅಭಿವೃದ್ದಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಮೂಲಕ ಅಭಿವೃದ್ಧಿಪಡಿಸಲು ಸಿಇಒ ಮೂಲಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಈ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉಮಾ ಪ್ರಶಾಂತ್, ಉಪವಿಭಾಗಾಧಿಕಾರಿ ದುಗಾಶ್ರೀ, ಹೊನ್ನಾಳಿ ಉಪವಿಭಾಗಾಧಿಕಾರಿ ಹುಲ್ಲುಮನಿ ತಿಮ್ಮಣ್ಣ, ತಹಸೀಲ್ದಾರ್ ಅಶ್ವತ್ಥ್, ಎಲ್ಲಾ ತಾಲೂಕಿನ ಎಡಿಎಲ್‌ಆರ್ ಹಾಗೂ ರೈತ ಮುಖಂಡರಾದ ರವಿಕುಮಾರ, ಕೊಳೇನಹಳ್ಳಿ ಸತೀಶ್ ಹಾಗೂ ರೈತ ಮುಖಂಡರು ಉಪಸ್ಥಿತರಿದ್ದರು.