ಸಿಎಂ ಬಳಸಿದ ಗೂಂಡಾಗಿರಿ ಪದಕ್ಕೆ ಕಲಾಪ ಬಲಿ

KannadaprabhaNewsNetwork | Updated : Feb 16 2024, 12:55 PM IST

ಸಾರಾಂಶ

ಪ್ರತಿಪಕ್ಷದ ಸದಸ್ಯರಿಗೆ ನಿಮ್ಮ ಗೂಂಡಾಗಿರಿ ನಡೆಯಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಟೀಕೆ ತೀವ್ರ ವಾಗ್ವಾದ, ಗದ್ದಲಕ್ಕೆ ಕಾರಣವಾಗಿ ಗುರುವಾರ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು.

ಕನ್ನಡಪ್ರಭ ವಾರ್ತೆ ವಿಧಾನ ಪರಿಷತ್‌

ಪ್ರತಿಪಕ್ಷದ ಸದಸ್ಯರಿಗೆ ‘ನಿಮ್ಮ ಗೂಂಡಾಗಿರಿ ನಡೆಯಲ್ಲ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿದ ಟೀಕೆ ತೀವ್ರ ವಾಗ್ವಾದ, ಗದ್ದಲಕ್ಕೆ ಕಾರಣವಾಗಿ ಸದನವನ್ನು ಕೆಲ ಕಾಲ ಮುಂದೂಡಬೇಕಾಯಿತು. 

ತಾವು ಬಳಸಿದ ಶಬ್ದಕ್ಕೆ ಕ್ಷಮೆ ಕೋರಲು ಮುಖ್ಯಮಂತ್ರಿಗಳು ನಿರಾಕರಿಸಿದ್ದನ್ನು ಪ್ರತಿಭಟಿಸಿ ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು. ಗದ್ದಲದ ವಾತಾವರಣದಿಂದ ಪ್ರಶ್ನೋತ್ತರ ಕಲಾಪ ಕೇವಲ ಒಂದು ಪ್ರಶ್ನೆಗೆ ಸೀಮಿತವಾಯಿತು.

ಪ್ರಶ್ನೋತ್ತರ ವೇಳೆ ಯು.ಬಿ. ವೆಂಕಟೇಶ್‌ ಅವರ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೇಂದ್ರದಿಂದ ರಾಜ್ಯಕ್ಕೆ ತೆರಿಗೆ ಹಂಚಿಕೆ, ಅನುದಾನ ನೀಡಿಕೆ ಮುಂತಾದ ಬಾಬ್ತಿನಲ್ಲಿ ಅನ್ಯಾಯವಾಗುತ್ತಿದೆ ಎಂದು ಅಂಕಿ-ಅಂಶಗಳೊಂದಿಗೆ ಕೊಂಚ ದೀರ್ಘವಾಗಿ ಉತ್ತರಿಸುವ ಜೊತೆಗೆ ಕೇಂದ್ರ ಸರ್ಕಾರ, ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ ಎಂದು ಹೇಳಿದರು. 

ಈ ಮಧ್ಯ ಬಿಜೆಪಿಯ ರುದ್ರೇಗೌಡ ಅವರು ಕುಳಿತಲ್ಲಿಯೇ ಕೈ ಬೆರಳು ತೋರಿಸಿ ಮಾತನಾಡುವುದಾಗಿ ಮುಖ್ಯಮಂತ್ರಿಗಳ ಗಮನ ಸೆಳೆದರು.

ಇದರಿಂದ ಇರಿಸು ಮುರಿಸುಗೊಂಡ ಸಿದ್ದರಾಮಯ್ಯ ಅವರು ಕೊಂಚ ಏರಿದ ಧ್ವನಿಯಲ್ಲಿ ನನ್ನ ಉತ್ತರ ಮುಗಿದಿಲ್ಲ, ಕುತ್ಕೊಳ್ಳಯ್ಯ ಎಂದು ಹೇಳಿದ ಮಾತು ಹಾಗೂ ಪ್ರಶ್ನೋತ್ತರ ವೇಳೆ ಕೇಂದ್ರವನ್ನು ಟೀಕಿಸಲು ಹೆಚ್ಚು ಸಮಯ ತೆಗೆದುಕೊಂಡ ಬಗ್ಗೆ ಪ್ರತಿಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ, ಎನ್‌.ರವಿಕುಮಾರ್‌ ಮತ್ತಿತರರು ಆಕ್ಷೇಪಕ್ಕೆ ಮುಂದಾದರು. ಆಗ ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರು ಎದ್ದು ನಿಂತು ವಾಗ್ವಾದಕ್ಕೆ ಇಳಿದರು.

ನಂತರ ಸಭಾಪತಿ ಬಸವರಾಜ ಹೊರಟ್ಟಿ ಎರಡೂ ಕಡೆಯ ಸದಸ್ಯರಿಗೆ ಕುಳಿತುಕೊಳ್ಳುವಂತೆ ಹೇಳಿ ಶ್ರೀನಿವಾಸ ಪೂಜಾರಿ ಅವರಿಗೆ ಮಾತನಾಡಲು ಅವಕಾಶ ನೀಡಿದರು.

 ಮಾತು ಮುಂದುವರೆಸಿದ ಪೂಜಾರಿ, ಒಂದು ಪ್ರಶ್ನೆಗೆ ನಾಲ್ಕೈದು ನಿಮಿಷ ಕಾಲ ಉತ್ತರ ನೀಡಬಹುದು. ಆದರೆ ಮುಖ್ಯಮಂತ್ರಿಗಳು ಬಜೆಟ್‌ ಮೇಲೆ ಚರ್ಚೆಗೆ ಉತ್ತರ ನೀಡುವಂತೆ ಸುದೀರ್ಘ ಉತ್ತರ ನೀಡುತ್ತಿದ್ದಾರೆ. 

ಪ್ರತಿ ಮಾತಿನಲ್ಲಿ ಕೇಂದ್ರವನ್ನು ಗುರಿಯಾಗಿಟ್ಟುಕೊಂಡು ಮಾತನಾಡುತ್ತಿದ್ದಾರೆ. ನಮ್ಮ ಬಳಿಯೂ ದಾಖಲೆಗಳು ಇವೆ. ಮುಖ್ಯಮಂತ್ರಿಗಳು ಸುಳ್ಳು ಹೇಳಿ ದಿಕ್ಕು ತಪ್ಪಿಸುವುದು ಬೇಡ ಎಂದು ಆಗ್ರಹಿಸಿದರು.

ಈ ಮಾತಿಗೆ ಪ್ರತಿಯಾಗಿ ಸಿದ್ದರಾಮಯ್ಯ ಏರಿದ ಧ್ವನಿಯಲ್ಲಿ ನಿಮ್ಮ ಬಳಿ ದಾಖಲೆ ಇದ್ದರೆ ಹಣಕಾಸು ಆಯೋಗಕ್ಕೆ ಕೊಡಿ, ನೀವು ಏಳು ಕೋಟಿ ಕನ್ನಡಿಗರ ಪರ ಇಲ್ಲವೇ ಎಂಬುದನ್ನು ಹೇಳಿ, ನೀವೆಲ್ಲ ಎದ್ದು ನಿಂತು ಮಾತನಾಡಿದರೆ ನಾವು ಬಾಯಿ ಮುಚ್ಚಿಕೊಂಡು ಸುಮ್ಮನೆ ಕುಳಿತುಕೊಳ್ಳುವುದಿಲ್ಲ. 

ನಿಮ್ಮ ಗೂಂಡಾಗಿರಿಗೆ ನಾವು ಹೆದರುವುದಿಲ್ಲ. ನೀವು ಕನ್ನಡಿಗರ ವಿರೋಧಿಗಳು, ಜನರು ನಿಮಗೆ ಛೀ. ಥೂ ಎನ್ನುತ್ತಿದ್ದಾರೆ ಎಂದು ಟೀಕಾ ಪ್ರಹಾರ ಮಾಡಿದರು. 

ಇದಕ್ಕೆ ಪ್ರತಿಪಕ್ಷದ ನಾಯಕ ಶ್ರೀನಿವಾಸ ಪೂಜಾರಿ ಸದನದಲ್ಲಿ ತೊಡೆ ತಟ್ಟಿದವರು ನಾವಲ್ಲ ಎಂದು ತಿರುಗೇಟು ನೀಡಿದರು. ಈ ಹಂತದಲ್ಲಿ ತೀವ್ರ ಮಾತಿನ ಚಕಮಕಿ, ಗದ್ದಲದ ವಾತಾವರಣ ಉಂಟಾಯಿತು. ಕೊನೆಗೆ ಸಭಾಪತಿಗಳು ಸದನವನ್ನು 10 ನಿಮಿಷಗಳ ಕಾಲ ಮುಂದೂಡಿದರು.

ಸುಮಾರು ಒಂದು ಗಂಟೆ ನಂತರ ಸದನ ಆರಂಭವಾಗುತ್ತಿದ್ದಂತೆ ಸಭಾಪತಿ ಬಸವರಾಜ ಹೊರಟ್ಟಿ ಅವರು, ಕಲಾಪ ನಡೆಯಬೇಕು ಎಂಬ ಉದ್ದೇಶದಿಂದ ಸಿದ್ದರಾಮಯ್ಯ ಬಳಸಿದ ಶಬ್ದಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ. 

ಮತ್ತೆ ಈ ಬಗ್ಗೆ ಚರ್ಚೆಗೆ ಅವಕಾಶ ಇಲ್ಲ ಎಂದರು. ಆದರೆ ಈ ಮಾತನ್ನು ಒಪ್ಪದ ಶ್ರೀನಿವಾಸ ಪೂಜಾರಿ, ಎನ್‌.ರವಿಕುಮಾರ್‌ ಮತ್ತಿತರ ಸದಸ್ಯರು, ಬೇಕಾದರೂ ಮಾತನಾಡಿ ನಂತರ ಕಡತದಿಂದ ತೆಗೆದು ಹಾಕುವುದು ಸರಿಯಾದ ಸಂಪ್ರದಾಯ ಆಗುವುದಿಲ್ಲ. 

ಮುಖ್ಯಮಂತ್ರಿಗಳು ಆಡಿದ ಮಾತಿಗೆ ಕ್ಷಮೆ ಕೇಳಬೇಕು, ಇಲ್ಲವೇ ಕನಿಷ್ಠ ವಿಷಾದ ವ್ಯಕ್ತಪಡಿಸಬೇಕು ಎಂದು ಆಗ್ರಹಿಸಿದರು.

ಆಗ ಕಾನೂನು ಸಚಿವ ಎಚ್‌.ಕೆ.ಪಾಟೀಲ್‌ ಅವರು, ಬಳಸಿದ ಶಬ್ವವನ್ನು ಕಡತದಿಂದ ತೆಗೆದ ಮೇಲೆ ಪುನಃ ಅದೇ ವಿಷಯದ ಬಗ್ಗೆ ಚರ್ಚೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು. 

ಮುಖ್ಯಮಂತ್ರಿ ಸಿದ್ದರಾಮಯ್ಯ ತಾವು ರುದ್ರೇಗೌಡ ಅವರ ಕುರಿತು ದುರುದ್ದೇಶದಿಂದ ಹೇಳಿಲ್ಲ. ತಾವು ಬಳಸಿದ ಶಬ್ದ ಅಸಂಸದೀಯ ಅಲ್ಲದಿದ್ದರೂ ಸಭಾಪತಿಗಳ ನಿರ್ಧಾರವನ್ನು ಗೌರವಿಸುತ್ತೇನೆ. ಸದಸ್ಯರು ಕೇಳಿದ ಪ್ರಶ್ನೆಗೆ ಸುದೀರ್ಘವಾಗಿಯೇ ಉತ್ತರ ಕೊಡಬೇಕಾಗಿದೆ ಎಂದಷ್ಟೇ ಹೇಳಿದರು.

ಬಿಜೆಪಿಯ ಎನ್‌.ರವಿಕುಮಾರ್‌ ಕ್ಷಮೆ ಕೇಳುವಂತೆ ಸಭಾಪತಿಗಳು ಮುಖ್ಯಮಂತ್ರಿಗಳಿಗೆ ನಿದೇರ್ಶನ ನೀಡಬೇಕೆಂದು ಮನವಿ ಮಾಡಿದರು. ಆದರೆ ಸಭಾಪತಿಗಳು ಇದೇ ರೀತಿ ಹೇಳುವಂತೆ ಯಾರಿಗೂ ಹೇಳಲು ತಮಗೆ ಅಧಿಕಾರವಿಲ್ಲ. ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟ ವಿಷಯ ಎಂದರು.

ಆದರೆ ಮುಖ್ಯಮಂತ್ರಿಗಳು ಕ್ಷಮೆ ಅಥವಾ ವಿಷಾದ ವ್ಯಕ್ತಪಡಿಸಲು ಮುಂದಾಗದೇ ಇದ್ದಾಗ ಬಿಜೆಪಿ ಸದಸ್ಯರು ಘೋಷಣೆ ಕೂಗುತ್ತಾ ಸಭಾತ್ಯಾಗ ಮಾಡಿದರು.

Share this article