- ಶೋಭಾ ಟಾಕೀಸ್ ರಸ್ತೆ, ಪೋಸ್ಟ್ ಆಫೀಸ್ ರಸ್ತೆ ಚರಂಡಿ ಕಾಮಗಾರಿಗೆ ಸ್ಥಳೀಯರ ತಕರಾರು
ಕನ್ನಡಪ್ರಭ ವಾರ್ತೆ ಹರಿಹರ
ರಸ್ತೆ ಜಾಗ ಒತ್ತುವರಿಯಾಗಿದ್ದರೆ ವಾಸಿಗಳ ದಾಖಲೆ ಹಾಗೂ ನಗರಸಭೆ ದಾಖಲೆಗಳನ್ನು ಪರಿಶೀಲಿಸಿ. ಯಾವುದೇ ಮುಲಾಜಿಲ್ಲದೆ ಒತ್ತುವರಿ ತೆರವುಗೊಳಿಸಲು ಪೌರಾಯುಕ್ತರು ಮತ್ತು ಎಂಜಿನಿಯರ್‌ಗಳು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಬಿ.ಪಿ.ಹರೀಶ್ ತಾಕೀತು ಮಾಡಿದರು.ನಗರದ ಶೋಭಾ ಟಾಕೀಸ್ ರಸ್ತೆ ಸುತ್ತಮುತ್ತ ಚರಂಡಿ ಕಾಮಗಾರಿ ಬಗ್ಗೆ ಸ್ಥಳೀಯ ನಿವಾಸಿಗಳು ತಕರಾರು ವ್ಯಕ್ತಪಡಿಸುತ್ತಿದ್ದ ಕಾರಣ ಶಾಸಕರು ಮಂಗಳವಾರ ಬೆಳಗ್ಗೆ ಸ್ಥಳಕ್ಕೆ ಭೇಟಿ ನೀಡಿ, ರಸ್ತೆ ಜಾಗ ಪರಿಶೀಲನೆ ನಡೆಸಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಈ ರಸ್ತೆಯಲ್ಲಿ 15 ದಿನಗಳಿಂದ ಕಾಮಗಾರಿ ಪ್ರಗತಿಯಲ್ಲಿದೆ. ಆದರೆ ಕೆಲವರು ನಮ್ಮ ಜಾಗ ಎಷ್ಟಿದೆ, ಅದನ್ನು ಬಿಟ್ಟು ಚರಂಡಿ ಮಾಡಿ ಎಂದು ಅಧಿಕಾರಿಗಳಿಗೆ ಮತ್ತು ಗುತ್ತಿಗೆದಾರರಿಗೆ ಕಾಮಗಾರಿ ತಡೆಹಿಡಿಯುವ ಪ್ರಯತ್ನ ಮಾಡುತ್ತಿದ್ದಾರೆ. ಇಲ್ಲಿನ ವಸ್ತುಸ್ಥಿತಿ ಖುದ್ದು ಪರಿಶೀಲನೆ ಮಾಡಿದ್ದೇನೆ. ಅಧಿಕಾರಿಗಳು ನಿವಾಸಿಗಳ ಬಳಿಯಿರುವ ದಾಖಲೆ ಹಾಗೂ ನಗರಸಭೆ ದಾಖಲೆಗಳನ್ನು ಪರಿಶೀಲನೆ ಮಾಡಬೇಕು. ನಿವಾಸಿಗಳಿಂದಲೇ ಒತ್ತುವರಿ ಮಾಡಿದ್ದಲ್ಲಿ ಯಾವುದೇ ಮುಲಾಜಿಲ್ಲದೇ ತೆರವುಗೊಳಿಸಿ ಕಾಮಗಾರಿ ಪ್ರಾರಂಭಿಸಲು ಸೂಚಿಸಿದ್ದೇನೆ ಎಂದು ಹೇಳಿದರು.
ನಗರಸಭೆಯಲ್ಲಿ ಕೆಲವು ಗುತ್ತಿಗೆದಾರರೂ ಬ್ಲಾಕ್ ಮೇಲ್ ಮೂಲಕ ಕಾಮಗಾರಿಗಳ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿದ್ದಾರೆ ಎಂಬ ಮಾಹಿತಿ ಬಂದಿದೆ. ಇವರು ತಾವು ಕಾಮಗಾರಿ ಮಾಡುವುದಿಲ್ಲ, ಬೇರೆಯವರಿಗೂ ಮಾಡಲು ಬಿಡುವುದಿಲ್ಲ. ಒಂದು ಕಾಮಗಾರಿಗೆ 3 ಬಿಲ್ಲುಗಳನ್ನು ತೆಗೆದುಕೊಂಡಿರುವ ಘಟನೆಗಳು ನಗರಸಭೆಯಲ್ಲಿವೆ ಎಂದು ಆರೋಪಿಸಿದರು.
ಶಿವಮೊಗ್ಗ ರಸ್ತೆಯ ಎಲ್ಐಸಿ ಆಫೀಸ್ ಹತ್ತಿರ ನಡೆಯುತ್ತಿರುವ ರಸ್ತೆ ಕಾಮಗಾರಿ ಪೂರ್ಣಗೊಂಡ ನಂತರ ಮಂಗಳವಾರದ ಸಂತೆಯನ್ನು ಎಪಿಎಂಸಿಗೆ ಸ್ಥಳಾಂತರ ಮಾಡಲಾಗುವುದು. ಈಗ ತಾತ್ಕಾಲಿಕವಾಗಿ ಗ್ರಾಮ ದೇವತೆ ದೇವಸ್ಥಾನದ ಮುಂಭಾಗದಲ್ಲಿ ನಡೆಸಲು ಅವಕಾಶ ನೀಡಲಾಗಿದೆ ಎಂದರು.
ಸ್ಥಳದಲ್ಲಿದ್ದ ಕೆಲವರು ಪಾರದರ್ಶಕವಾಗಿ ಕಾಮಗಾರಿ ಆಗಬೇಕು. ಶ್ರೀಮಂತರಿಗೂಂದು ನ್ಯಾಯ, ಬಡವರಿಗೊಂದು ನ್ಯಾಯ ಆಗಬಾರದು. ಯಾರೇ ಒತ್ತುವರಿ ಮಾಡಿದ್ದರೂ ಮುಲಾಜ್ ಇಲ್ಲದೇ ತೆರವು ಮಾಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿಕೊಂಡರು.
- - -
ಹರಿಹರದ ಶೋಭಾ ಟಾಕೀಸ್ ರಸ್ತೆ ಸುತ್ತಮುತ್ತ ಚರಂಡಿ ಕಾಮಗಾರಿಯ ಬಗ್ಗೆ ಸ್ಥಳೀಯ ನಿವಾಸಿಗಳು ತಕರಾರು ವ್ಯಕ್ತಪಡಿಸುತ್ತಿರುವ ಕಾರಣ ಶಾಸಕ ಬಿ.ಪಿ.ಹರೀಶ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.