ಬಿಜೆಪಿ ಅಣೆಕಟ್ಟು ಕಟ್ಟಿಸಿದ ಉದಾಹರಣೆ ಇದ್ದರೆ ತೋರಿಸಿ: ಸಿಎಂ ಸವಾಲು

KannadaprabhaNewsNetwork |  
Published : Jan 26, 2024, 01:46 AM IST
ಚಿತ್ರ : 25ಎಂಡಿಕೆ3 : ವಿರಾಜಪೇಟೆಯ ಪಂಜರಪೇಟೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಹೂವು ಹಾಕುವ ಮೂಲಕ ಸ್ವಾಗತಿಸಲಾಯಿತು.   | Kannada Prabha

ಸಾರಾಂಶ

ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಗುರುವಾರ ಕಾರ್ಯಕರ್ತರ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಿದರು. ಸಭೆಯಲ್ಲಿ ಬಿಜೆಪಿಯನ್ನು ಟೀಕಿಸಿ, ಕಾಂಗ್ರೆಸ್‌ ಸಾಧನೆಯನ್ನು ಒತ್ತಿ ಹೇಳಿದರು.

ಕನ್ನಡಪ್ರಭ ವಾರ್ತೆ ವಿರಾಜಪೇಟೆಬಿಜೆಪಿ ಭಾರತದಲ್ಲಿ, ಯಾವುದಾದರೂ ರಾಜ್ಯದಲ್ಲಿ ಒಂದೇ ಒಂದು ಅಣೆಕಟ್ಟು ಕಟ್ಟಿಸಿ ರೈತರಿಗೆ, ಕೃಷಿಗೆ ನೆರವಾದ ಒಂದೇ ಒಂದು ಉದಾಹರಣೆ ಇದ್ದರೆ ನಾನು ಬಿಜೆಪಿ ವಿರುದ್ಧ ಮಾತಾಡುವುದನ್ನೇ ನಿಲ್ಲಿಸುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಗುರುವಾರ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಈ ದೇಶಕ್ಕೆ ಏನೂ ಮಾಡಿಲ್ಲ ಎಂದು ಬಿಜೆಪಿ ಬೊಬ್ಬೆ ಹೊಡೆಯುತ್ತದೆ. ಇಡೀ ದೇಶದಲ್ಲಿರುವ ಅಣೆಕಟ್ಟುಗಳನ್ನು ಕಟ್ಟಿಸಿದ್ದು ಕಾಂಗ್ರೆಸ್ ಪಕ್ಷ. ಬಿಜೆಪಿ ನೆಪಕ್ಕಾದರೂ ಒಂದೂ ಅಣೆಕಟ್ಟು ಕಟ್ಟಿಸಲಿಲ್ಲ. ಕಟ್ಟಿಸಿದ ಉದಾಹರಣೆ ಇದ್ದರೆ ಹೇಳಿ ಎಂದು ಸವಾಲು ಹಾಕಿದರು. 1925 ರಲ್ಲೇ ಆರ್‌ಎಸ್ಎಸ್‌ ಹುಟ್ಟಿದರೂ ಅಪ್ಪಿ ತಪ್ಪಿಯೂ ಭಾರತ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲಿಲ್ಲ.‌ ಭಾರತೀಯರನ್ನು ಬ್ರಿಟಿಷರ ದಾಸ್ಯದಿಂದ ಬಿಡುಗಡೆಗೊಳಿಸಿದ್ದು , ಇದಕ್ಕಾಗಿ ಹೋರಟ ಮಾಡಿ ಪ್ರಾಣ ತ್ಯಾಗ ಮಾಡಿದ, ಜೈಲು ಸೇರಿದ ಇತಿಹಾಸ, ಚರಿತ್ರೆ ಇರುವುದು ಕಾಂಗ್ರೆಸ್ಸಿಗೆ ಮಾತ್ರ. ಈಗ ಭಾರತದ ಜೀವಾಳವಾದ ಸಂವಿಧಾನ ರಕ್ಷಣೆಗೆ ಕಾಂಗ್ರೆಸ್ ಹೋರಾಟ ಆರಂಭಿಸಿದೆ ಎಂದರು.

ಸಂವಿಧಾನ ವಿರೋಧಿ ನೀತಿ: ''''ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾಯಿಸಲು'''' ಎಂದು ಬಿಜೆಪಿಯ ಸಂಸದ ಅನಂತಕುಮಾರ ಹೆಗಡೆ ನೇರವಾಗಿ ಹೇಳುತ್ತಾರೆ. ಇದನ್ನು ಬಿಜೆಪಿಯ ಯಾರೊಬ್ಬರೂ ವಿರೋಧಿಸಲಿಲ್ಲ. ಇದರಿಂದ ಅವರ ಸಂವಿಧಾನ ವಿರೋಧಿ ನಿಲುವು ಸ್ಪಷ್ಟವಾಗುತ್ತದೆ ಎಂದರು.

ಅಚ್ಚೆ ದಿನ್‌ ಆಯೇಗಾ ಎಂದ ನರೇಂದ್ರ ಮೋದಿಯವರೇ ಎಲ್ಲಿದೆ ನಿಮ್ಮ ಅಚ್ಛೆ ದಿನ್ ಎಂದು ಪ್ರಶ್ನಿಸಿದ ಮುಖ್ಯಮಂತ್ರಿ, ಪೆಟ್ರೋಲ್, ಡೀಸೆಲ್ , ಅಡುಗೆ ಗ್ಯಾಸ್ ಬೆಲೆ ಇಳಿಕೆ ಮಾಡಿದಿರಾ? ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಭಾಷಣ ಮಾಡಿದ ಮೋದಿಯವರೇ ಈ ಹತ್ತು ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿ ಆಗಬೇಕಿತ್ತು. ಎಲ್ಲಿವೆ 20 ಕೋಟಿ ಉದ್ಯೋಗ ತೋರಿಸಿ ಎಂದು ಸವಾಲು ಹಾಕಿದರು. ರಾಜ್ಯದಲ್ಲಿ ಬರಗಾಲ ಬಂದಿದೆ. ಬಿಜೆಪಿ ಸಂಸದರು ಕೇಂದ್ರದಿಂದ ರಾಜ್ಯಕ್ಕೆ ಒಂದು ರುಪಾಯಿ ಬರ ಪರಿಹಾರವನ್ನೂ ತರಲಿಲ್ಲ. ರೈಲು ಬಿಡುವುದರಲ್ಲಿ ಮಾತ್ರ ಪ್ರತಾಪ ತೋರಿಸುವ ಮಿಸ್ಟರ್ ಪ್ರತಾಪ್ ಸಿಂಹ ರಾಜ್ಯದ ಬರ ಪರಿಹಾರಕ್ಕೆ ಒಂದೇ ಒಂದು ರುಪಾಯಿಯನ್ನೂ ಬಿಡುಗಡೆ ಮಾಡಿಸಿಲಿಲ್ಲ ಏಕೆ ಎಂದು ಪ್ರಶ್ನಿಸಿದರು. ನುಡಿದಂತೆ ನಡೆದಿದ್ದೇವೆ:

ನಾವು 2013 ರಿಂದ 2018 ರವರೆಗೂ ನುಡಿದಂತೆ ನಡೆದಿದ್ದೇವೆ. ಬಡವರು ಮತ್ತು ಮಧ್ಯಮ ವರ್ಗದ ಜನರಿಗೆ ಅನುಕೂಲ ಆಗುವ ಭಾಗ್ಯಗಳನ್ನು ಜಾರಿಗೆ ತಂದಿದ್ದೇವೆ. ಈಗ ಸರ್ಕಾರ ಬಂದ 7 ತಿಂಗಳಲ್ಲಿ ಐದಕ್ಕೆ ಐದೂ ಗ್ಯಾರಂಟಿಗಳನ್ನೂ ಜಾರಿಗೆ ತಂದಿದ್ದೇವೆ. ಇದರಿಂದ ಕರ್ನಾಟಕದ ಬಡವರು ಮತ್ತು ಮಧ್ಯಮ ವರ್ಗದ ಜನರ ಸಂಕಷ್ಟ ಕಡಿಮೆ ಆಗಿದೆ ಎಂದ ಮುಖ್ಯಮಂತ್ರಿ ‘ಹೌದೋ, ಇಲ್ಲವೋ’ ಎಂದು ಜನಸ್ತೋಮಕ್ಕೆ ಕೇಳಿದರು. ಜನಸ್ತೋಮ ‘ಹೌದು’ ಎಂದು ಕೂಗಿ ಚಪ್ಪಾಳೆ ತಟ್ಟಿದರು.

ಬಿಜೆಪಿಯ ವಿರುದ್ಧ ಕೊಡಗು ಜಿಲ್ಲೆಯ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದಕ್ಕೆ ಶಾಸಕರಾದ ಪೊನ್ನಣ್ಣ ಮತ್ತು ಮಂಥರ್ ಗೌಡ ಹಾಗೂ ಇಡೀ ಜಿಲ್ಲೆಯ ಜನತೆಗೆ ಸರ್ಕಾರ ಮತ್ತು ಪಕ್ಷದ ಪರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾರ್ಯಕರ್ತರ ಸಭೆಯಲ್ಲಿ ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಉಸ್ತುವಾರಿ ಸಚಿವ ಭೋಸರಾಜು, ಗೃಹ ಸಚಿವ ಡಾ. ಜಿ.ಪರಮೇಶ್ವರ್, ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ, ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್, ರೇಷ್ಮೆ ಸಚಿವ ಕೆ.ವೆಂಕಟೇಶ್, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ, ಮಡಿಕೇರಿ ಶಾಸಕ ಡಾ.ಮಂತರ್ ಗೌಡ, ಕೆಪಿಸಿಸಿ ಸಾಮಾಜಿಕ ಸಂವಹನ ವಿಭಾಗದ ಅಧ್ಯಕ್ಷರಾದ ಮೆಹರೂಸ್ ಖಾನ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.ಬಿಜೆಪಿಯಿಂದ ಅಪಪ್ರಚಾರ : ಪೊನ್ನಣ್ಣಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತರಲು ಸಾಧ್ಯವಿಲ್ಲವೆಂದು ಬಿಜೆಪಿಯವರು ಹೇಳಿದರು. ಅಲ್ಲದೆ ಅಭಿವೃದ್ಧಿ ಸಾಧ್ಯವಿಲ್ಲವೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ ನಾವು ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದಿದ್ದೇವೆ ಎಂದು ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹೇಳಿದರು.ವಿರಾಜಪೇಟೆಯಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಬಿಡುಗಡೆಗೊಳಿಸಿದ ಅನುದಾನವನ್ನು ಪತ್ರಿಕೆಗಳ ಮೂಲಕ ನಾನು, ಶಾಸಕ ಡಾ.ಮಂತರ್‌ ಗೌಡ ಶ್ವೇತಪತ್ರದಂತೆ ಜನರ ಮುಂದಿಟ್ಟಿದ್ದೇವೆ. ಕಾವೇರಿ ಸಂಕ್ರಮಣದಂದು ಸಾರ್ವತ್ರಿಕ ರಜೆ ಘೋಷಿಸುವಂತೆ ಸಿಎಂಗೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.ವಿರಾಜಪೇಟೆ ನಗರ ಯೂತ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಶಬೀರ್‌ ಕುಂಚದಲ್ಲಿ ಮೂಡಿಬಂದ ಸಿದ್ದರಾಮಯ್ಯ ಅವರ ಭಾವಚಿತ್ರವನ್ನು ಸಿದ್ದರಾಮಯ್ಯ ಅವರಿಗೆ ಉಡುಗೊರೆಯಾಗಿ ನೀಡಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ವರ್ತಮಾನದೆಡೆಗೆ ಸಂಶೋಧನಾಸಕ್ತಿ ಕೇಂದ್ರಿತವಾಗಲಿ: ಡಾ. ಗಿರೀಶ ಕುಮಾರ
ಆಹಾರ ಸುರಕ್ಷತೆ: 9 ಪ್ರಕರಣಗಳಲ್ಲಿ ₹1.30 ಲಕ್ಷ ದಂಡ