ಕನ್ನಡಪ್ರಭ ವಾರ್ತೆ ಚಾಮರಾಜನಗರ ಚಿಕ್ಕಲ್ಲೂರು, ಕುರುಬನ ಕಟ್ಟೆ, ಕಪ್ಪಡಿ ಹಾಗೂ ಬೊಪ್ಪೇಗೌಡನಪುರ ಜಾತ್ರೆಗಳು ಸರ್ಕಾರದ ಅಧೀನದಲ್ಲಿ ನಡೆಸುವ ಮೂಲಕ ಅಲ್ಲಿನ ಜಾತ್ರೆಯಲ್ಲಿ ಬರುವ ಆದಾಯವನ್ನು ಸರ್ಕಾರ ಭಕ್ತರಿಗೆ ಮೂಲಸೌಲಭ್ಯಗಳನ್ನು ಕಲ್ಪಿಸಿಕೊಡಲು ಬಳಕೆ ಮಾಡಿಕೊಳ್ಳಲಿ ಎಂದು ಸರ್ಕಾರಿ ಅಧಿನಿಯಮಗಳ ಜಾರಿಗಾಗಿ ಕಾವಲು ಸಮಿತಿಯ ಅಧ್ಯಕ್ಷ ಎಲ್ ನಾಗಣ್ಣ ಒತ್ತಾಯಿಸಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಭವನದಲ್ಲಿ ನಡೆದ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಕ್ಕಲೂರಿನ ಜಾತ್ರೆಯಲ್ಲಿ ನಡೆಯುತ್ತಿದ್ದ ಪ್ರಾಣಿಬಲಿ ವಿರುದ್ಧ ಪ್ರಾಣಿ ದಯಾಸಂಘದ ದಯಾನಂದಸ್ವಾಮೀಜಿ ಹೈಕೋರ್ಟ್‌ನಲ್ಲಿ ೨೦೧೭ರಲ್ಲಿ ಮಧ್ಯಂತರ ತಡೆಯಾಜ್ಞೆ ತಂದು ಅಧಿಕಾರಿಗಳ ಸಹಕಾರದೊಂದಿಗೆ ಪ್ರಾಣಿ ಬಲಿ ನಿಷೇಧಿಸಿದ್ದಾರೆ. ಅಂದಿನಿಂದಲೇ ಈ ಜಾತ್ರೆಯು ಶಾಂತಿಯುತವಾಗಿ ನಡೆಯುತ್ತಾ ಬಂದಿದೆ ಆದರೂ ಈ ಜಾತ್ರೆಯು ಮುಜರಾಯಿ ಇಲಾಖೆಗೆ ಒಳಪಡದೆ ಖಾಸಗಿ ವ್ಯಕ್ತಿಗಳ ವಶದಲ್ಲಿದೆ. ಇದರಿಂದ ದೇವಸ್ಥಾನ ಅಭಿವೃದ್ದಿಯಾಗುತ್ತಿಲ್ಲ. ಸಂಬಂಧಪಟ್ಟ ಇಲಾಖೆಗಳು ಕ್ರಮ ಜರುಗಿಸದೆ ಸುಮ್ಮನಿರುವುದು ಕಾನೂನಿಗೆ ವಿರುದ್ದವಾಗಿದೆ ಎಂದರು.ಈ ದೇವಸ್ಥಾನಗಳ ವ್ಯಾಪ್ತಿಯಲ್ಲಿ ನಡೆಯುವ ಜಾತ್ರೆಗೆ ಸಕಲಮೂಲ ಸೌಲಭ್ಯಗಳನ್ನು ಸರ್ಕಾರ ವಹಿಸಿಕೊಳ್ಳುತ್ತಿದೆ. ಭಕ್ತಾಧಿಗಳಿಗೆ ಎಲ್ಲಾ ರೀತಿಯ ಸೌಕರ್ಯಗಳು ಸರ್ಕಾರವೇ ನೀಡುತ್ತಿದ್ದು, ಇನ್ನು ಅಲ್ಲಿ ಭಕ್ತರಿಂದ ಬರುವ ಆದಾಯವು ಖಾಸಗಿ ವ್ಯಕ್ತಿಗಳ ಪಾಲಾಗುತ್ತಿದೆ. ಇದು ತಪ್ಪಬೇಕು. ದೇವಸ್ಥಾನ ಅಭಿವೃದ್ದಿಗಾಗಿ ಸರ್ಕಾರ ಕೂಡಲೇ ಮುಜರಾಯಿ ಇಲಾಖೆಗೆ ಒಳಪಡಿಸಬೇಕು ಎಂದು ಎಲ್. ನಾಗಣ್ಣ ಆಗ್ರಹಿಸಿದರು.
ಮಾಜಿ ರಾಜ್ಯಪಾಲ ಶ್ರೀ ಬಿ.ರಾಚಯ್ಯ ಅವರು ಚಾಮರಾಜನಗರ ಜಿಲ್ಲೆಗೆ ಅಪಾರ ಕೊಡುಗೆ ನೀಡಿದ್ದು, ಜಿಲ್ಲಾ ಕೇಂದ್ರದಲ್ಲಿರುವ ಜೋಡಿ ರಸ್ತೆಗೆ ಬಿ.ರಾಚಯ್ಯ ಜೋಡಿ ರಸ್ತೆ ಎಂದು ನಾಮಕರಣ ಮಾಡುವ ಜೊತೆಗೆ ಈ ರಸ್ತೆಯ ಅಭಿವೃದ್ದಿಗೆ ಕೋಟ್ಯಾಂತರ ರೂ.ಗಳನ್ನು ಸರ್ಕಾರ ನೀಡಿದೆ. ಕೂಡಲೇ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿ ರಾಚಯ್ಯ ಅವರ ಪುತ್ಥಳಿ ನಿರ್ಮಿಸಿ, ಸ್ವಾಗತ ಕಮಾನ್ ಅಳವಡಿಸಬೇಕೆಂದು ಅವರು ನಗರಸಭೆ ಹಾಗೂ ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಸಮಿತಿಯ ನಿರ್ದೇಶಕರಾದ ಎ.ಜೆ.ಸೋಮನಾಥ್, ಎಸ್.ಪಂಚಾಕ್ಷರಿ, ಕಾನೂನು ಸಲಹೆಗಾರ ಎಂ.ರಾಮಕೃಷ್ಣ ಇದ್ದರು.