ಓಸಿ, ಸಿಸಿ ಇಲ್ಲದಿದ್ದರೆ ಸೋಲಾರ್‌ಗೂ ಅನುಮತಿ ಇಲ್ಲ?

KannadaprabhaNewsNetwork | Published : Jul 3, 2025 1:47 AMUpdated   : Jul 03 2025, 07:03 AM IST
Solar Park

ಸಾರಾಂಶ

ರಾಜ್ಯದಲ್ಲಿ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ (ಸಿಸಿ) ಹೊಂದಿರದ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆ 

 ನಂದಿಬೆಟ್ಟ :  ರಾಜ್ಯದಲ್ಲಿ ಸ್ವಾಧೀನಾನುಭವ ಪತ್ರ (ಓಸಿ) ಹಾಗೂ ನಿರ್ಮಾಣ ಕಾರ್ಯಾರಂಭ ಪತ್ರ (ಸಿಸಿ) ಹೊಂದಿರದ ವಾಣಿಜ್ಯ, ವಸತಿ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡದಿರುವುದರಿಂದ ಉಂಟಾಗಿರುವ ಸಮಸ್ಯೆಗಳ ಬಗ್ಗೆ ಸಂಪುಟ ಸಭೆಯಲ್ಲಿ ವಿಸ್ತೃತ ಚರ್ಚೆಯಾಗಿದ್ದು, ಸದ್ಯಕ್ಕೆ ಅಂತಹ ಕಟ್ಟಡಗಳಿಗೆ ವಿದ್ಯುತ್‌ ಸಂಪರ್ಕ ನೀಡುವುದಿಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ ಎಂದು ತಿಳಿದುಬಂದಿದೆ.

ಒಂದೊಮ್ಮೆ ಅಂತಹ ನಿಯಮ ಉಲ್ಲಂಘಿಸಿ ಕಟ್ಟಡ ಕಟ್ಟಿರುವವರು ಎಸ್ಕಾಂಗಳ ವಿದ್ಯುತ್‌ ಸಂಪರ್ಕ ಬೇಡ ಎಂದು ಸೋಲಾರ್‌ ಅವಡಿಕೆ ಮಾಡಿಕೊಳ್ಳಲು ಮುಂದಾದರೂ ಸರ್ಕಾರದ ಅನುಮತಿ ಅಗತ್ಯ. ಅಂತಹ ಕಟ್ಟಡಗಳಿಗೆ ಸೋಲಾರ್‌ ಅಳವಡಿಕೆಗೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟವಾಗಿ ತಿಳಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ಸಚಿವ ಈಶ್ವರ ಖಂಡ್ರೆ ಅವರು, ಸುಪ್ರೀಂ ಕೋರ್ಟ್‌ ಆದೇಶ ಪಾಲನೆ ಕಾರಣ ನೀಡಿ ವಿದ್ಯುತ್‌, ನೀರಿನ ಸಂಪರ್ಕಕ್ಕೆ ಏಕಾಏಕಿ ಓಸಿ ಹಾಗೂ ಸಿಸಿ ಕಡ್ಡಾಯಗೊಳಿಸಲಾಗಿದೆ. ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬಹುತೇಕ ಆಸ್ತಿಗಳು ಕಂದಾಯ ಹಾಗೂ ಬಿ ಖಾತಾ ನಿವೇಶನಗಳು. ಅವುಗಳಲ್ಲಿ ಕಟ್ಟಡ ನಿರ್ಮಾಣ ಮಾಡಲು ನಕ್ಷೆ ಮಂಜೂರಾತಿ ನೀಡುವಂತಿಲ್ಲ. ನಕ್ಷೆ ಮಂಜೂರಾತಿ ಇಲ್ಲದ ಕಟ್ಟಡಗಳಿಗೆ ಓಸಿ ಹಾಗೂ ಸಿಸಿ ನೀಡಲು ಅವಕಾಶವಿಲ್ಲ. ಓಸಿ, ಸಿಸಿ ಇಲ್ಲದಿದ್ದರೆ ನೀವು ವಿದ್ಯುತ್‌ ನೀಡಲ್ಲ ಎನ್ನುತ್ತಿದ್ದೀರಿ. ಇದರಿಂದ ಸಾಲ ಮಾಡಿ ಲಕ್ಷಾಂತರ ರು. ಖರ್ಚು ಮಾಡಿ ಮನೆಗಳನ್ನು ಕಟ್ಟಿಕೊಂಡಿರುವ ಬಡವರು, ಮಧ್ಯಮವರ್ಗದವರು ಅತಂತ್ರರಾಗಿದ್ದಾರೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ಹಲವು ಸದಸ್ಯರು ದನಿಗೂಡಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್‌ ಅವರು, ನಾವು ಸುಪ್ರೀಂ ಕೋರ್ಟ್‌ ಆದೇಶವನ್ನು ಉಲ್ಲಂಘಿಸಲು ಆಗುವುದಿಲ್ಲ. ನೇರವಾಗಿ ಅವಕಾಶ ನೀಡಿದರೆ ಕಟ್ಟಡ ನಿರ್ಮಾಣ ಉಲ್ಲಂಘನೆಗಳು ಮುಂದುವರೆಯುತ್ತವೆ. ಯಾರೇ ಆಗಲಿ ಮೊದಲು ಕಟ್ಟಡ ನಕ್ಷೆ ಮಂಜೂರಾತಿ ಪಡೆದು ನಿರ್ಮಾಣ ಮಾಡಬೇಕು. ಈ ಬಗ್ಗೆ ಹೇಗೆ ಪರಿಹಾರ ಕಲ್ಪಿಸಬಹುದು ಎಂಬ ಬಗ್ಗೆ ಮುಖ್ಯಕಾರ್ಯದರ್ಶಿ ಅವರಿಗೆ ಸೂಚಿಸಲಾಗಿದೆ. ಎಲ್ಲ ವರದಿ ಪಡೆದ ಬಳಿಕ ತೀರ್ಮಾನ ಮಾಡಬಹುದು. ಸದ್ಯಕ್ಕೆ ಅವಕಾಶ ಇಲ್ಲ ಎಂದು ಸ್ಪಷ್ಟಪಡಿಸಿದರು ಎನ್ನಲಾಗಿದೆ.

ಈ ವೇಳೆ ಸಚಿವ ಈಶ್ವರ್ ಖಂಡ್ರೆ ಅವರು, ನೀವು ಸಂಪರ್ಕ ಕೊಡದಿದ್ದರೆ ಅವರು ಸೋಲಾರ್‌ ಅಳವಡಿಕೆ ಮಾಡಿಕೊಳ್ಳುತ್ತಾರೆ ಎಂದರು.

ಆಗ ಡಿ.ಕೆ.ಶಿವಕುಮಾರ್‌, ಒಂದೊಮ್ಮೆ ಅವರು ಸೋಲಾರ್‌ ಸಂಪರ್ಕ ಪಡೆದರೂ ಅದಕ್ಕೂ ಇಂಧನ ಇಲಾಖೆ ಅನುಮತಿ ಬೇಕು. ಸೋಲಾರ್‌ನಿಂದ ಉತ್ಪಾದನೆಯಾದ ವಿದ್ಯುತ್‌ಗೆ ಗ್ರಿಡ್‌ ಸಂಪರ್ಕ ಬೇಕಾಗುತ್ತದೆ. ಇಲ್ಲದಿದ್ದರೆ ಅವರು ಹಗಲು ಮಾತ್ರ ವಿದ್ಯುತ್‌ ಬಳಸಬಹುದು. ಓಸಿ, ಸಿಸಿ ಇಲ್ಲದಿದ್ದರೆ ಸೋಲಾರ್ ಅಳವಡಿಕೆಗೂ ಅನುಮತಿ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದರು ಎಂದು ಮೂಲಗಳು ತಿಳಿಸಿವೆ.

PREV
Read more Articles on