ಮಾರ್ಚ್‌ವರೆಗೆ ಮಳೆಯಾಗದಿದ್ದರೆ ಭರ್ಜರಿ ಮಾವಿನ ಫಸಲು

KannadaprabhaNewsNetwork |  
Published : Feb 06, 2026, 01:15 AM IST
ಸಿಕೆಬಿ-1 ಭರ್ಜರಿ ಹೂ ಬಿಟ್ಟಿರುವ ಮಾವಿನ ಮರಗಳು | Kannada Prabha

ಸಾರಾಂಶ

ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಆಗಲೇ ಹೂ ಬಿಟ್ಟು, ಕೆಲವೆಡೆ ಕಾಯುವ ಕಚ್ಚುವ ಹಂತವನ್ನೂ ತಲುಪಿದೆ.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಜಿಲ್ಲೆಯ ಪ್ರಮುಖ ತೋಟಗಾರಿಕೆ ಬೆಳೆಯಾಗಿರುವ ಮಾವು ಬೆಳೆ ಈ ಬಾರಿ ಬೆಳೆಗಾರರಲ್ಲಿ ಹೆಚ್ಚಿನ ನಿರೀಕ್ಷೆ ಮೂಡಿಸಿದ್ದು, ಭರ್ಜರಿ ಫಸಲು ಕೈಸೇರುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.

ಜಿಲ್ಲೆಯ ಮಾವಿನ ತೋಟಗಳ ಗಿಡಗಳ ತುಂಬ ಹೂವು ನಳನಳಿಸುತ್ತಿವೆ. ಮೈತುಂಬ ಹೂವು ಅರಳಿ ನಿಂತಿರುವುದು ಬೆಳೆಗಾರರು, ವ್ಯಾಪಾರಿಗಳಲ್ಲಿ ಖುಷಿ, ಆತ್ಮವಿಶ್ವಾಸ ಹೆಚ್ಚಿಸಿದೆ. ಜಿಲ್ಲೆಯಲ್ಲಿ ಸುಮಾರು 10 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಈ ಬಾರಿ ಆಗಲೇ ಹೂ ಬಿಟ್ಟು, ಕೆಲವೆಡೆ ಕಾಯುವ ಕಚ್ಚುವ ಹಂತವನ್ನೂ ತಲುಪಿದೆ. ಹೀಗಾಗಿ ರೈತರು ಈಗಿನಿಂದಲೇ ಎಚ್ಚರಿಕೆಯಿಂದ ಮಾವಿನ ಬೆಳೆಯನ್ನು ನೋಡಿಕೊಂಡರೆ ಉತ್ತಮ ಫಸಲು ಪಡೆಯುವ ವಿಫುಲ ಅವಕಾಶಗಳಿವೆ.

ವಾತವರಣ ವೈಪರೀತ್ಯದಿಂದ ಸಾಕಷ್ಟು ವರ್ಷದಿಂದ ಮಾವಿನ ಹೂವು ಹೇಳಿಕೊಳ್ಳುವಷ್ಟರ ಮಟ್ಟಿಗೆ ಕಾಣಿಸುತ್ತಿರಲಿಲ್ಲ. ಇನ್ನೂ ಫಸಲಿನ ವಿಷಯಕ್ಕೆ ಬಂದಲ್ಲಿ ಇದೇ ಕಥೆ ಎನ್ನಬಹುದು. ಹಲವು ವರ್ಷಗಳ ನಂತರ ಈ ತರಹದ ವಾತಾವರಣ ನಿರ್ಮಾಣವಾಗಿದೆ. ಡಿಸೆಂಬರ್‌ನಲ್ಲಿ ರಾತ್ರಿ ವಿಪರೀತ ಚಳಿ ಹಾಗೂ ಹಗಲು ಹೊತ್ತು ಚುರುಕಾದ ಬಿಸಿಲು ಮಾವಿನ ಬೆಳೆಗೆ ಅನುಕೂಲಕರವಾಗಿ ಗಿಡಗಳ ತುಂಬಾ ಹೂಗಳ ತೋರಣ ಕಟ್ಟಿದೆ. ಇದೀಗ ಜನವರಿ, ಫೆಬ್ರವರಿಯಲ್ಲೂ ಇದೇ ರೀತಿ ಮಾವಿಗೆ ಉತ್ತಮ ವಾತವರಣ ನಿರ್ಮಾಣವಾಗಿರುವುದರಿಂದ ಉತ್ತಮ ಫಸಲು ಕೈಸೇರುವ ಸಾಧ್ಯತೆಯಿದೆ ಎಂದು ತೋಟಗಾರಿಕೆ ಇಲಾಖೆ ಕೂಡ ಹೇಳುತ್ತಿದೆ. ಇದೇ ರೀತಿಯಲ್ಲಿ ಮುಂದುವರಿದರೆ ಮಾರುಕಟ್ಟೆಗೆ ಹೆಚ್ಚಿನ ಪ್ರಮಾಣದಲ್ಲಿ ಮಾವು ಆವಕವಾಗುವ ಸಾಧ್ಯತೆಯಿದೆ.

ಉತ್ತಮವಾಗಿ ಹೂಬಿಟ್ಟ ಮರಗಳು:2022 ರಿಂದಲೂ ಒಂದಿಲ್ಲೊಂದು ವಾತವರಣ ವೈಪರೀತ್ಯದಿಂದಾಗಿ ಮಾವು ಹೂ ಬಿಡುವ ಪ್ರಮಾಣ ಕುಸಿತವಾಗುತ್ತಿತ್ತು. ಇದರಿಂದ ಕೊನೆಯಲ್ಲಿ ಮಾರುಕಟ್ಟೆ ಪ್ರವೇಶಿಸುವ ಜಿಲ್ಲೆಯ ಮಾವು ಪ್ರಮಾಣ ಮತ್ತಷ್ಟು ಇಳಿಕೆ ಕಾಣುವಂತಾಗಿತ್ತು. ಈ ಬಾರಿ ಪರಿಸ್ಥಿತಿ ಬದಲಾಗಿದೆ. ಮಾವಿಗೆ ಉತ್ತಮ ವಾತವರಣ ಲಭ್ಯವಿದೆ.

ಇದರಿಂದ ಜಿಲ್ಲೆಯ ನಾನಾ ತಾಲೂಕುಗಳಲ್ಲಿನ ಮಾವಿನ ತೋಟಗಳು ಹೂಗಳಿಂದ ಅಲಂಕೃತಗೊಂಡಿದ್ದು, ಮಾವು ವ್ಯಾಪಾರಿಗಳು ತೋಟಗಳ ಖರೀದಿಯಲ್ಲೂ ಕೂಡ ಹೆಚ್ಚಾಗಿ ಮುಂದೆ ಬರುವ ಸಾಧ್ಯತೆಯಿದೆ. ಇಲಾಖೆ ಕೂಡ ಹೂಗಳ ರಕ್ಷಣೆ, ಕಾಯಿಗಳ ರಕ್ಷಣೆ ಬಗ್ಗೆ ಕೈತರಿಗೆ ಸಲಹೆಗಳನ್ನು ನೀಡುವ ಕೆಲಸವನ್ನು ನಿರಂತರವಾಗಿ ಮಾಡುತ್ತಿದೆ. ಜಿಕೆವಿಕೆ ವತಿಯಿಂದಲೂ ಮಾವಿನ ರಕ್ಷಣೆ ಬಗ್ಗೆ ಇಳುವರಿ ಹೆಚ್ಚಿಸುವ ಬಗ್ಗೆ ವಿಜ್ಞಾನಿಗಳು ಆಗಿಂದಾಗಲೇ ಸಲಹೆಗಳನ್ನು ನೀಡುತ್ತಾ ಬರುತ್ತಿದ್ದಾರೆ.

ನಿರೀಕ್ಷೆ ಮೂಡಿಸಿದ ಫಸಲು:

ಜಿಲ್ಲೆಯಲ್ಲಿ ಪ್ರಸಕ್ತ ಮಾವಿನ ಬೆಳೆಯಲ್ಲಿ ತಳಿವಾರು ನೋಡುವುದಾದರೆ ಬಾದಾಮಿ ತಳಿಯಲ್ಲಿ ಶೇ. 70, ಮಲ್ಲಿಕಾ ತಳಿಯಲ್ಲಿ ಶೇ.80, ನೀಲಂ, ತಳಿಯಲ್ಲಿ ಶೇ.70, ತೋತಾಪುರಿ ತಳಿಯಲ್ಲಿ ಶೇ.80 ಮತ್ತು ಇತರೆ ತಳಿಗಳಲ್ಲಿ ಶೇ.75ರಷ್ಟು ಹೂ ಬಿಟ್ಟಿದ್ದು, ಮುಂದಿನ ಹಂತಗಳಲ್ಲಿ ಬರುವ ಯಾವುದೇ ರೋಗಳು ಬೆಳೆಗೆ ತಾಗದಂತೆ ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.

ಮಾರ್ಚ್‌ವರೆಗೆ ಮಳೆ ಬೇಡ:

ಮಾವಿನ ಇಳುವರಿ ಹೆಚ್ಚಿಸುವ ಮತ್ತು ಸದ್ಯ ನಿರೀಕ್ಷಿಸಲಾದ ಮಾವು ಬೆಳೆ ಸಂರಕ್ಷಣೆ ವಿಚಾರದಲ್ಲಿ ಇದೀಗ ಉತ್ತಮ ವಾತವರಣವಿದೆ. ಇದೇ ರೀತಿಯ ವಾತಾವರಣ ಇನ್ನೆರಡು ತಿಂಗಳು ಮುಂದುವರಿದರೆ ಮಾವು ಉತ್ತಮ ಫಸಲು ಕೈಸೇರಲು ಅನುಕೂಲವಾಗುತ್ತದೆ. ಮಾರ್ಚ್ ತಿಂಗಳೊಳಗೆ ಮಳೆಯಾದರೆ ಹೂಗಳು ಉದುರುವ, ಕಾಯಿ ಉದುರುವ ಸಾಧ್ಯತೆ ಹೆಚ್ಚು. ಇದರಿಂದ ಮಾರ್ಚ್ ವೇಳೆ ಉತ್ತಮ ಫಸಲು ಕೈಸೇರುವ ನಿಟ್ಟಿನಲ್ಲಿ ಉತ್ತಮ ವಾತವರಣ ಅಗತ್ಯವಾಗಿದೆ. ಹೂಗಳು ಉದುರುವ ಪ್ರಮಾಣ ಕಡಿಮೆಯಾದಲ್ಲಿ ಇಳುವರಿ ಹೆಚ್ಚಲು ಅನುಕೂಲವಾಗುತ್ತದೆ. ಇನ್ನೂ ಜಿಲ್ಲೆಯಲ್ಲಿ 10,000 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ, ಮಾವಿನ ಬೆಳೆಯಿದ್ದು, ಇತ್ತೀಚಿನ ದಿನಗಳಲ್ಲಿಮಾವು ಬಗ್ಗೆ ಒಲವು ಮೂಡುತ್ತಿದೆ. ಜಿಲ್ಲೆಯಲ್ಲಿ ಮಾವು ಹೂ ಉತ್ತಮವಾಗಿ ಬಿಟ್ಟಿದೆ. ಭರ್ಜರಿ ಇಳುವರಿಯಾಗುವ ಸಾಧ್ಯತೆಯಿದೆ. ಮಾರ್ಚ್ ತಿಂಗಳವರೆಗೆ ಇದೇ ವಾತಾವರಣ ಮುಂದುವರಿದರೆ ಹೆಚ್ಚಿನ ಇಳುವರಿ ಕೈಸೇರಲಿದೆ. ಏಪ್ರಿಲ್‌ ತಿಂಗಳ ವೇಳೆಗೆ ವಿಮೆಗೂ ಕೂಡ ಅರ್ಜಿ ಸಲ್ಲಿಸಲು ಆರಂಭವಾಗುವ ಸಾಧ್ಯತೆಯಿದೆ.

ಮಾವಿನ ತೋಟಗಳಲ್ಲಿ ಈ ಬಾರಿ ಒಳ್ಳೆಯ ಹೂ ಬಿಟ್ಟಿದೆ. ಆದರೆ, ವಿಪರೀತ ಬಿಸಿಲು ಶುರುವಾಗಿದೆ. ಹೀಗಾಗಿ ಬಂದಿರುವ ಹೂ ಫಸಲಾಗಿ ಮಾರ್ಪಟ್ಟರೆ ಅಷ್ಟೇ ಸಾಕು. ಆದರೆ, ಮುಂದೆ ವಾತಾವರಣ ಏನಾಗುತ್ತೋ ನೋಡಬೇಕು. ಈ ಬಾರಿಯಾದರೂ ಮಾವು ಕೈಗೆ ಸಿಗುತ್ತಾ ನೋಡಬೇಕು.

ಸಿಕೆಬಿ-1 ಭರ್ಜರಿ ಹೂ ಬಿಟ್ಟಿರುವ ಮಾವಿನ ಮರಗಳು

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬ್ಯಾಲೆಟ್‌ ಪೇಪರಲ್ಲೇ ಪಂಚಾಯ್ತಿ ಚುನಾವಣೆಗೆ ಸರ್ಕಾರ ಮಸೂದೆ
ಅಕ್ರಮ ಬಾಂಗ್ಲಾದೇಶಿಯರ ಪತ್ತೆಗೆ ರಾಜ್ಯಾದ್ಯಂತ ಬೇಟೆ