ಕನ್ನಡಪ್ರಭ ವಾರ್ತೆ ನಾಗಮಂಗಲ
ಅಂತರಂಗದಲ್ಲಿ ಘನ ಸಂಪತ್ತಿದ್ದರೆ ಬಹಿರಂಗದಲ್ಲಿ ಸಾಧನೆ ಸಾಧ್ಯ. ಇಲ್ಲವಾದರೆ ಭೋಳೆತನವಾಗುತ್ತದೆ. ಪ್ರತಿಯೊಬ್ಬರೂ ಸಮಾಜದ ಪರಿಧಿಗೆ ಬಂದಾಗ ನೈಜ ಬದುಕಿನ ಅನಾವರಣವಾಗುತ್ತದೆ ಎಂದು ಮಂಡ್ಯ ಜಿಪಂ ನಿವೃತ್ತ ಸಿಇಒ ಯಾಲಕ್ಕಿಗೌಡ ಅಭಿಪ್ರಾಯಪಟ್ಟರು.ಪಟ್ಟಣದ ಶ್ರೀಆದಿಚುಂಚನಗಿರಿ ಕಲಾ ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಬಿಜಿಎಸ್ ಸಭಾಂಗಣದಲ್ಲಿ ಪ್ರಥಮ ವರ್ಷದ ಬಿ.ಎ.ವಿದ್ಯಾರ್ಥಿಗಳಿಗೆ ದ್ವಿತೀಯ ಮತ್ತು ಅಂತಿಮ ಬಿಎ ಪದವಿ ವಿದ್ಯಾರ್ಥಿಗಳು ಆಯೋಜಿಸಿದ್ದ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಸನ್ನಿವೇಶವನ್ನು ಅವಲೋಕಿಸಿದಾಗ ಬಾಲಕಿಯರಲ್ಲಿ ಆತ್ನಸ್ಥೈರ್ಯ ಮತ್ತು ಬಾಲಕರಲ್ಲಿ ಕೀಳರಿಮೆ ಹೆಚ್ಚಾಗುತ್ತಿದೆ. ಪೋಷಕರು ಅಪಾರ ನಂಬಿಕೆ ಭರವಸೆಯೊಂದಿಗೆ ನಿಮ್ಮನ್ನು ಓದಿಸಿ ಬೆಳೆಸುತ್ತಾರೆ. ಅದಕ್ಕೆ ತಕ್ಕಂತೆ ನಿಮ್ಮ ಜವಾಬ್ದಾರಿ ಮತ್ತು ಕರ್ತವ್ಯವನ್ನು ಅರಿತು ಅತ್ಯಂತ ಪ್ರಾಮಾಣಿಕತೆಯಿಂದ ಸಾಧನೆಯ ಗುರಿಯೊಂದಿಗೆ ವಿದ್ಯೆ ಕಲಿಯಬೇಕು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಕಲಾ ವಿಭಾಗದ ವಿದ್ಯಾರ್ಥಿಗಳಿಗೆ ಅವಕಾಶ ಹೇರಳವಾಗಿವೆ. ಪದವಿ ವ್ಯಾಸಂಗದಲ್ಲಿಯೇ ನಿಮ್ಮ ಗುರಿಯ ಬಗ್ಗೆ ಸ್ಪಷ್ಟತೆ ಇರಬೇಕು. ಓದುವ ಜೊತೆಗೆ ಬುದ್ಧಿಯು ಬೇಕು. ಶ್ರದ್ಧೆ ಮತ್ತು ಭಕ್ತಿಯಿಂದ ಕಲಿತ ವಿದ್ಯೆ ನಾವು ಸಮಾಜದಲ್ಲಿ ಹೇಗೆ ಬದುಕಬೇಕೆಂಬ ಮಾರ್ಗದರ್ಶನ ನೀಡುತ್ತದೆ. ಹಾಗಾಗಿ ವಿದ್ಯಾರ್ಥಿಗಳು ಇಷ್ಟಪಟ್ಟು ಓದಬೇಕು ಎಂದರು.
ವಿದ್ಯಾರ್ಥಿಗಳು ಪದವಿ ತರಗತಿಯಲ್ಲಿಯೇ ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ಸ್ಪಷ್ಟ ಮಾಹಿತಿ ಇಟ್ಟುಕೊಳ್ಳಬೇಕು. ವಿಜ್ಞಾನ ಗಣಿತ ವಿಷಯಗಳು ಎಸ್‌ಎಸ್‌ಎಲ್‌ಸಿ ತತ್ಸಮಾನ ವಿಷಯಗಳೇ ಆಗಿವೆ. ಮೊದಲು ನೀವು ಗುರಿಯನ್ನು ನಿರ್ಧರಿಸಿದರೆ ಅದನ್ನು ಸಾಕಾರಗೊಳಿಸಲು ನೂರು ದಾರಿ ಸಿಗುತ್ತವೆ ಎಂದರು.ಕಲಾ ವಿಭಾಗದ ವಿದ್ಯಾರ್ಥಿಗಳು ಸಮಾಜದಲ್ಲಿ ಸಂವಹನ ಸಾಧಿಸುವುದು ಸುಲಭ. ಸಾಮಾಜಿಕ ಜಾಲತಾಣ ಇಂದು ಯುವಪೀಳಿಗೆಯನ್ನು ತಮ್ಮ ಗುರಿಯಿಂದ ವಿಮುಖರನ್ನಾಗಿಸುತ್ತಿದೆ. ಹಾಗಾಗಿ ಸಮಯಪಾಲನೆ ಸಮಯದ ಸದ್ವಿನಿಯೋಗ ವಿದ್ಯಾರ್ಥಿಗಳಲ್ಲಿ ಬಹು ಮುಖ್ಯ ಎಂದರು.
ಸರ್ಕಾರದ ಯೋಜನೆ, ಗ್ರಾಪಂ ಕಾರ್ಯ ವೈಖರಿ ಸೇರಿದಂತೆ ಹತ್ತಾರು ಬಗೆಯ ಜ್ವಲಂತ ಸಮಸ್ಯೆಗಳ ಕುರಿತು ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಯಾಲಕ್ಕಿಗೌಡ ಸಂವಾದದ ಮೂಲಕ ಉತ್ತರಿಸಿದರು.ಕಾಲೇಜಿನ ಪ್ರಾಂಶುಪಾಲ ಡಾ.ಎಚ್.ಎಸ್.ರವೀಂದ್ರ ಮಾತನಾಡಿ, ವಾದದಿಂದ ಅಹಂಕಾರ ಸಂವಾದದಿಂದ ಸೃಜನಶೀಲ ವಿಚಾರ ಸೃಷ್ಟಿ ಆಗುತ್ತದೆ. ನಮ್ಮ ನಡವಳಿಕೆ ಪ್ರಾಮಾಣಿಕವಾಗಿರಬೇಕು. ಬದಲಾವಣೆ ಬಯಸುವ ನಾವು ಮೊದಲು ಪ್ರಾಮಾಣಿಕವಾಗಿ ಬದಲಾಗಬೇಕು. ವಿದ್ಯಾರ್ಥಿಗಳ ನೈಜ ನಡೆ ಮಾತುಗಳಿಂದ ಅವರ ಬದುಕು ಸುಂದರವಾಗಿ ಅನಾವರಣವಾಗುತ್ತದೆ ಎಂದರು.
ಸಮಾರಂಭದಲ್ಲಿ ಆಂಗ್ಲಭಾಷ ಉಪನ್ಯಾಸಕ ಎ.ರಘುನಾಥ್ ಸಿಂಗ್ ಮತ್ತು ಸಮಾಜಶಾಸ್ತ್ರವಿಭಾಗದ ಮುಖ್ಯಸ್ಥೆ ಬಿ.ಎಚ್.ಕಾವ್ಯ ಕಾರ್ಯಕ್ರಮ ಕುರಿತು ಮಾತನಾಡಿದರು. ಕಾಲೇಜಿನ ಉಪನ್ಯಾಸಕರು ಹಾಗೂ ಸಿಬ್ಬಂದಿ ಇದ್ದರು.