ಗ್ರಾಮದಲ್ಲಿ ಅಶಾಂತಿ ಉಂಟಾದರೆ ಅರಣ್ಯ ಇಲಾಖೆ ಹೊಣೆ

KannadaprabhaNewsNetwork | Published : Oct 5, 2024 1:32 AM

ಸಾರಾಂಶ

ಹನೂರು ತಾಲೂಕಿನ ಆಲಂಬಾಡಿ ಗ್ರಾಮದಲ್ಲಿ ಅರಣ್ಯ ಇಲಾಖೆಯವರು ರೈತ ಸಂಘದ ನಾಮಫಲಕ ತೆರವುಗೊಳಿಸಲು ಮುಂದಾಗಿರುವುದನ್ನು ರೈತ ಮುಖಂಡರು ವಿರೋಧಿಸಿದರು.

ಕನ್ನಡಪ್ರಭ ವಾರ್ತೆ ಹನೂರು ಆಲಂಬಾಡಿ ಗ್ರಾಮದಲ್ಲಿ ರೈತ ಸಂಘದ ನಾಮಫಲಕ ತೆರವುಗೊಳಿಸಲು ಮಂದಾದ ಅರಣ್ಯಾಧಿಕಾರಿಗಳ ಕ್ರಮವನ್ನು ರೈತ ಸಂಘ ವಿರೋಧಿಸಿದ್ದು, ಗ್ರಾಮದಲ್ಲಿ ಅಶಾಂತಿ ಉಂಟಾದರೆ ಅರಣ್ಯ ಇಲಾಖೆಯವರು ಹೊಣೆಯಾಗುತ್ತಾರೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಜಿಲ್ಲಾ ಉಪಾಧ್ಯಕ್ಷ ಗೌಡೇಗೌಡ ಎಚ್ಚರಿಸಿದ್ದಾರೆ.ಹನೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗೋಪಿನಾಥಂ ಗ್ರಾಪಂ ವ್ಯಾಪ್ತಿಯ ಆಲಂಬಾಡಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ರಾಜ್ಯ ರೈತ ಸಂಘ ಗ್ರಾಮ ಘಟಕದ ನಾಮಫಲಕವನ್ನು ತೆರವುಗೊಳಿಸಲು ಮುಂದಾದಾಗ ಗ್ರಾಮಸ್ಥರು ಹಾಗೂ ಮಹಿಳೆಯರು ವಿರೋಧಿಸಿದ್ದರಿಂದ ಅವರನ್ನು ಅವ್ಯಾಚ್ಯ ಶಬ್ದಗಳಿಂದ ನಿಂದಿಸಿ ಗ್ರಾಮಸ್ಥರಿಗೆ ಬೆದರಿಕೆ ಒಡ್ಡಿದ್ದಾರೆ.

ಡಿಸಿಎಫ್‌ಗೆ ಮನವರಿಕೆ:

ಸೆ.20ರಂದು ಗ್ರಾಮದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರ ಅವರ ನೇತೃತ್ವದಲ್ಲಿ ಗ್ರಾಮ ಘಟಕವನ್ನು ಉದ್ಘಾಟನೆ ಮಾಡಿ ಗ್ರಾಮದ ಸ್ಥಿತಿಗತಿಯ ಬಗ್ಗೆ ಕೊಳ್ಳೇಗಾಲ ಡಿಸಿಎಫ್‌ ಕಚೇರಿಯಲ್ಲಿ ಹಿರಿಯ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಟ್ಟಿದ್ದರೂ ಸಹ ಮತ್ತೆ ತಿಂಗಳು ಕಳೆಯುವಷ್ಟರಲ್ಲಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳಿಂದ ಗ್ರಾಮಸ್ಥರಿಗೆ ಬೆದರಿಕೆ ಮತ್ತು ನಾಮಫಲಕ ತೆರವುಗೊಳಿಸಲು ಮುಂದಾಗಿರುವುದು ರಾಜ್ಯ ರೈತ ಸಂಘ ತೀವ್ರವಾಗಿ ಖಂಡಿಸಿದೆ.ಒಕ್ಕಲಬ್ಬಿಸಲು ಹುನ್ನಾರ ಆರೋಪ:

ತಲತಲಾಂತರದಿಂದ ನೂರಾರು ವರ್ಷಗಳಿಂದ ಈ ಭಾಗದಲ್ಲಿ ಕಾಡಂಚಿನ ಗ್ರಾಮಗಳಲ್ಲಿ ವಾಸಿಸುತ್ತಿರುವ ಜನರಿಗೆ ಮೂಲಭೂತ ಸೌಲಭ್ಯಗಳನ್ನು ನೀಡಬೇಕಾಗುತ್ತದೆ ಎನ್ನುವ ನಿಟ್ಟಿನಲ್ಲಿ ಅರಣ್ಯ ಅಧಿಕಾರಿಗಳು ಗ್ರಾಮಗಳ ನಿವಾಸಿಗಳಿಗೆ ನೋಟಿಸ್ ಜಾರಿಗೊಳಿಸಿ ಗ್ರಾಮಗಳನ್ನು ತೆರವುಗೊಳಿಸಲು ಹುನ್ನಾರ ಮಾಡುತ್ತಿರುವುದು ಖಂಡನೀಯವಾಗಿದೆ. ಹೀಗಾಗಿ ಅರಣ್ಯ ಅಧಿಕಾರಿಗಳು ಒಕ್ಕಲೆಬ್ಬಿಸುವ ಪ್ರಯತ್ನ ಮುಂದುವರಿಸಿದರೆ ಸಂಘಟನೆಯಿಂದ ಉಗ್ರ ಪ್ರತಿಭಟನೆಯನ್ನು ಗ್ರಾಮದಲ್ಲಿ ಹಮ್ಮಿಕೊಳ್ಳಲಾಗುತ್ತದೆ. ರಾಜ್ಯದ ಒಂದೆಡೆ ಅರಣ್ಯ ಇಲಾಖೆ ದಟ್ಟ ಅರಣ್ಯವನ್ನು ಬಂಡವಾಳ ಶಾಹಿಗಳ ಪರವಾಗಿ ಕಾನೂನು ಬದಲಾವಣೆ ಮಾಡಿ ಖನಿಜ ಸಂಪತ್ತನ್ನು ತೆಗೆಯಲು ಅನುವು ಮಾಡಿಕೊಟ್ಟಿದೆ. ಮತ್ತೊಂದೆಡೆ ಅರಣ್ಯದ ಜೀವನ ನಡೆಸುತ್ತಿರುವ ನಿವಾಸಿಗಳಿಗೆ ಕಿರುಕುಳ ಜೊತೆಗೆ ಅವ್ಯಾಚ ಶಬ್ದಗಳಿಂದ ನಿಂದಿಸಿ, ಗ್ರಾಮಸ್ಥರನ್ನು ಭಯಪಡಿಸುತ್ತಿರುವ ಅರಣ್ಯಾಧಿಕಾರಿಗಳ ಕಾರ್ಯವೈಖರಿ ಇದೇ ರೀತಿ ಮುಂದುವರಿದರೆ ರೈತ ಸಂಘಟನೆಯಿಂದ ಉಗ್ರ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಈ ಸಂದರ್ಭದಲ್ಲಿ ತಾಲೂಕು ಘಟಕದ ಅಧ್ಯಕ್ಷ ಅಮ್ಜದ್ ಖಾನ್ ಹಾಗೂ ರೈತ ಮುಖಂಡರು ರೈತ ಮಹಿಳೆಯರು ಆಲಂಬಾಡಿ ಹಾಗೂ ಸುತ್ತಮುತ್ತಲಿನ ಗ್ರಾಮದ ನಿವಾಸಿಗಳು ಉಪಸ್ಥಿತರಿದ್ದರು.

Share this article