ರಾಜಕೀಯದಲ್ಲಿ ರಾಜೀಯಾಗಿದ್ದರೆ ನಾನೆಲ್ಲೋ ಇರ್ತಿದ್ದೆ: ವಾಟಳ್ ನಾಗರಾಜ್

KannadaprabhaNewsNetwork |  
Published : May 29, 2024, 12:59 AM IST
28ಎಚ್ಎಸ್ಎನ್12 : ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕನ್ನಡಪರ ಹೋರಾಟಗಾರ ವಾಟಾಳ್‌ ನಾಗರಾಜ್‌. | Kannada Prabha

ಸಾರಾಂಶ

ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ, ನೊಂದ ಮಹಿಳೆಯರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ಶೋಷಣೆಗೊಳಗಾದ ಮಹಿಳೆಯರ ಪರವಾಗಿ ನಾನು ಹೋರಾಟ ಮಾಡುತ್ತೇನೆ. ಮೇ ೩೦ರ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ಪ್ರಜ್ವಲ್ ರನ್ನು ಈವರೆಗೆ ಬಂಧಿಸದಿರುವುದು ಸರ್ಕಾರದ ವೈಫಲ್ಯವಾಗಿದೆ.

ಕನ್ನಡಪ್ರಭ ವಾರ್ತೆ ಹಾಸನ

ವಿಧಾನಸೌಧದ ಗೌರವ ಕಾಪಾಡಲು, ಶಿಕ್ಷಕರ ಸಮಸ್ಯೆಗಳ ಬಗ್ಗೆ ಗಮನ ಸೆಳೆದು ಬೇಡಿಕೆಗಳನ್ನು ಈಡೇರಿಸಲು ವಿಧಾನ ಪರಿಷತ್ ಚುನಾವಣೆಯಲ್ಲಿ ನಾನು ಸರ್ಧಿಸುತ್ತಿದ್ದು, ಮೊದಲ ಪ್ರಾಶಸ್ತ್ಯದ ಮತ ನನಗೆ ಕೊಡಬೇಕೆಂದು ವಾಟಾಳ್‌ ನಾಗರಾಜ್ ಮನವಿ ಮಾಡಿದರು ಹಾಗೂ ಪ್ರಜ್ವಲ್ ರೇವಣ್ಣರಿಂದ ಮಹಿಳೆಯರಿಗೆ ಅನ್ಯಾಯವಾಗಿದ್ದು, ಶೋಷಣೆಗೊಳಗಾದವರ ಪರ ಹೋರಾಟ ಮಾಡಲಾಗುವುದು ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ನಾನು ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸುತ್ತಿದ್ದೇನೆ. ನಾನು ಗೆಲುವಿಗಿಂತ ಸೋಲೇ ಹೆಚ್ಚು ಕಂಡಿದ್ದು, ರಾಜಕೀಯದಲ್ಲಿ ರಾಜಿ ಮಾಡಿಕೊಂಡಿದ್ದರೆ ನಾನು ಏನು ಬೇಕಾದರೂ ಆಗಬಹುದಿತ್ತು. ನನ್ನನ್ನು ಕ್ಯಾಬಿನೆಟ್ ಗೆ ನಾಮನಿರ್ದೇಶಿತನಾಗಿ ತೆಗೆದುಕೊಳ್ಳಲು ದೇವರಾಜ್ ಅರಸು ಸಾಕಷ್ಟು ಪ್ರಯತ್ನಿಸಿದ್ದರು. ವಿಧಾನ ಪರಿಷತ್ ಒಂದು ಗೌರವದ ಸ್ಥಾನವಾಗಿ ಕಾಣಬೇಕು. ಈ ನಿಟ್ಟಿನಲ್ಲಿ ದಕ್ಷಿಣ ಶಿಕ್ಷಕರ ಕ್ಷೇತ್ರದಿಂದ ನಾನು ಸ್ಪರ್ಧಿಸಿದ್ದೇನೆ. ಶಿಕ್ಷಕರ ಬೇಡಿಕೆಗಳು ಸಾಕಷ್ಟು ಇದ್ದು, ಶಿಕ್ಷಕರ ಪರವಾಗಿ ಪರಿಷತ್ ನಲ್ಲಿ ಹೋರಾಟ ಮಾಡಲು ನಾನು ಸಿದ್ಧನಿದ್ದೇನೆ. ನನ್ನನ್ನು ಬೆಂಬಲಿಸಿ ಮೊದಲ ಪ್ರಾಶಸ್ತ್ಯದ ಮತ ಕೊಡಿ ಎಂದು ಮನವಿ ಮಾಡಿದರು.ವಿಧಾನ ಪರಿಷತ್ ನಲ್ಲಿ ಉತ್ತಮ ವ್ಯಕ್ತಿತ್ವ ಇರುವ ಜನರು ಪ್ರಸ್ತುತ ಇಲ್ಲ. ವಿಧಾನಸಭಾದ ಗೌರವ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ. ಆದ್ದರಿಂದ ವಿಧಾನ ಪರಿಷತ್ ಗೆ ಸ್ಪರ್ಧಿಸಿದರೆ ಒಳ್ಳೆಯದಾಗಬಹುದು ಎಂದು ತೀರ್ಮಾನಿಸಿ ಕಣದಲ್ಲಿರುವುದಾಗಿ ಅವರು ಹೇಳಿದರು.

ಹಾಸನದಲ್ಲಿ ಮಹಿಳೆಯರಿಗೆ ಅನ್ಯಾಯವಾಗಿದೆ, ನೊಂದ ಮಹಿಳೆಯರಿಗೆ ಸೂಕ್ತ ಪರಿಹಾರ ಸಿಗಬೇಕಾಗಿದೆ. ಶೋಷಣೆಗೊಳಗಾದ ಮಹಿಳೆಯರ ಪರವಾಗಿ ನಾನು ಹೋರಾಟ ಮಾಡುತ್ತೇನೆ. ಮೇ ೩೦ರ ಹೋರಾಟಕ್ಕೆ ನಮ್ಮ ಬೆಂಬಲ ಕೂಡ ಇದೆ. ಪ್ರಜ್ವಲ್ ರನ್ನು ಈವರೆಗೆ ಬಂಧಿಸದಿರುವುದು ಸರ್ಕಾರದ ವೈಫಲ್ಯವಾಗಿದೆ ಎಂದರು.

ಸರ್ಕಾರ ತನ್ನ ಜವಾಬ್ದಾರಿಯಿಂದ ಹಿಂದೆ ಸರಿಯಲು ಸಾಧ್ಯವಿಲ್ಲ. ಇದು ಇಡೀ ರಾಜ್ಯವೇ ತಲೆ ತಗ್ಗಿಸುವ ಘಟನೆಯಾಗಿದೆ. ಸರ್ಕಾರವು ಈ ಪ್ರಕರಣದಲ್ಲಿ ವೈಫಲ್ಯವಾಗಿರುವುದರಿಂದ ಇಡೀ ಸಂಪುಟವೇ ರಾಜೀನಾಮೆ ಕೊಟ್ಟಿದ್ದರೆ ಒಂದು ಘನತೆ ಬರುತ್ತಿತ್ತು ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪಾರ್ಥ ಸಾರಥಿ, ರಾಘವೇಂದ್ರ, ಕನ್ನಡಪರ ಹೋರಾಟಗಾರ ಗೋಪಾಲಕೃಷ್ಣ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಪಿಎಲ್‌ ಮಾನದಂಡ ಬದಲಿಗೆ ಮುಂದಾದ ರಾಜ್ಯ
ಸರ್ಕಾರಿ ಶಾಲೆಗೆ ಶೀಘ್ರ 11000 ಶಿಕ್ಷಕರ ನೇಮಕ : ಮಧು