ಯುಜಿಡಿ ದೂರಿಗೆ ಸ್ಪಂದಿಸದಿದ್ದರೆ ಕ್ರಮ ಎದುರಿಸಿ

KannadaprabhaNewsNetwork |  
Published : May 31, 2024, 02:20 AM IST
ಹುಬ್ಬಳ್ಳಿಯ ಮಹಾನಗರ ಪಾಲಿಕೆಯ ಆಯುಕ್ತರ ಸಭಾಭವನದಲ್ಲಿ ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಯಿತು. | Kannada Prabha

ಸಾರಾಂಶ

ಹೊಸೂರು ಕ್ರಾಸ್‌ನಲ್ಲಿ ಹಲವು ದಿನಗಳಿಂದ ಯುಜಿಡಿಯಲ್ಲಿ ತೊಂದರೆಯಾಗಿದ್ದರೂ ಸರಿಪಡಿಸದ ವಲಯ ಕಚೇರಿ-9ರ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಮುಂದೆ ಈ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದರೆ ಕ್ರಮ ಎದುರಿಸಿ.

ಹುಬ್ಬಳ್ಳಿ:

ಯುಜಿಡಿ ಕುರಿತು ಜನರಿಂದ ದೂರು ಬಂದ ತಕ್ಷಣ ಸಂಬಂಧಿಸಿದ ಎಂಜಿನಿಯರ್‌ಗಳಿಗೆ ಮಾಹಿತಿ ನೀಡಿದರೂ ಸ್ಪಂದಿಸದೆ ಇದ್ದಲ್ಲಿ ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಎಚ್ಚರಿಕೆ ನೀಡಿದರು.

ಗುರುವಾರ ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಹೊಸೂರು ಕ್ರಾಸ್‌ನಲ್ಲಿ ಹಲವು ದಿನಗಳಿಂದ ಯುಜಿಡಿಯಲ್ಲಿ ತೊಂದರೆಯಾಗಿದ್ದರೂ ಸರಿಪಡಿಸದ ವಲಯ ಕಚೇರಿ-9ರ ಎಂಜಿನಿಯರ್‌ ಅವರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಮುಂದೆ ಈ ರೀತಿ ಕರ್ತವ್ಯದಲ್ಲಿ ನಿರ್ಲಕ್ಷ್ಯತನ ತೋರಿದರೆ ಕ್ರಮ ಎದುರಿಸಿ ಎಂದು ಎಚ್ಚರಿಸಿದರು.

ಮುಖ್ಯ ರಸ್ತೆಗಳ ಎರಡೂ ಕಡೆ ಬಿದ್ದಿರುವ ಕಸ ವಿಲೇವಾರಿ ಮಾಡದೆ ಇರುವುದಕ್ಕೆ ಆರೋಗ್ಯ ನಿರೀಕ್ಷಕರನ್ನು ತರಾಟೆಗೆ ತೆಗೆದುಕೊಂಡ ಆಯುಕ್ತರು, ಸ್ವಚ್ಛತೆಗೆ ಆದ್ಯತೆ ನೀಡಿ. ನಿತ್ಯ ಕಸ ವಿಲೇವಾರಿ ಮಾಡಿ ಎಂದರು.

ಧಾರವಾಡದ ಯಾಲಕ್ಕಿ ಶೆಟ್ಟರ್ ಕಾಲನಿ ಪ್ರದೇಶಗಳಲ್ಲಿ ಆರೋಗ್ಯ ನಿರೀಕ್ಷಕರು ಉತ್ತಮ ಕಾರ್ಯನಿರ್ವಹಿಸಿರುವ ಕುರಿತು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ರೀತಿ ಎಲ್ಲ ಆರೋಗ್ಯ ನಿರೀಕ್ಷಕರು ಕಾರ್ಯನಿರ್ವಹಿಸಬೇಕು ಎಂದರು.

ಧಾರವಾಡದಲ್ಲಿ ಫುಟ್‌ಪಾತ್‌ ಅತಿಕ್ರಮಣಕಾರರನ್ನು ಮುಲಾಜಿಲ್ಲದೆ ತೆರೆವುಗೊಳಿಸುವಂತೆ ಸೂಚಿಸಿದ ಆಯುಕ್ತರು, ಈ ಕುರಿತು ಮಾಹಿತಿ ನೀಡುವಂತೆ ಆರೋಗ್ಯ ನಿರೀಕ್ಷಕ ಮಧುಕೇಶ್ವರ ರಾಯ್ಕರ್ ಹಾಗೂ ವಲಯ ಸಹಾಯಕ ಆಯುಕ್ತ ಪ್ರಹ್ಲಾದ ರೆಡ್ಡಿ ಅವರಿಗೆ ನಿರ್ದೇಶನ ನೀಡಿದರು. ಮಳೆಯಿಂದ ರಸ್ತೆಯಲ್ಲಿ ನೀರು ನಿಲ್ಲುವುದನ್ನು ಗುರುತಿಸಿ ನೀರು ಹರಿದು ಹೋಗುವಂತೆ ನೋಡಿಕೊಳ್ಳಲು ಕಾರ್ಯನಿರ್ವಾಹಕ ಅಭಿಯಂತರ ವಿಜಯಕುಮಾರಗೆ ತಿಳಿಸಿದರು.

ನಗರದಲ್ಲಿ ನಿಷೇಧಿತ ಪ್ಲಾಸ್ಟಿಕ್ ಬಳಕೆ ಆಗುತ್ತಿರುವುದು ಕಂಡುಬಂದಲ್ಲಿ ಸಂಬಂಧಿಸಿದ ಅಂಗಡಿಕಾರರಿಗೆ ದಂಡ ವಿಧಿಸಿ ಟ್ರೇಡ್ ಲೈಸನ್ಸ್ ರದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಎಲ್ಲೆಂದರಲ್ಲಿ ಅನಧಿಕೃತವಾಗಿ ಡಬ್ಬಾ ಅಂಗಡಿ ಇಟ್ಟುಕೊಂಡು ವ್ಯವಹಾರ ನಡೆಸುತ್ತಿರುವ ವಿರುದ್ಧ ಕ್ರಮಕೈಗೊಂಡು ಅವುಗಳನ್ನು ತೆರವುಗೊಳಿಸಿ ವರದಿ ನೀಡುವಂತೆ ವಲಯ ಸಹಾಯಕ ಆಯುಕ್ತರಿಗೆ ಡಾ. ಈಶ್ವರ ಸೂಚಿಸಿದರು.

ಈ ವೇಳೆ ಪಾಲಿಕೆ ಅಧಿಕಾರಿಗಳು ಪಾಲ್ಗೊಂಡಿದ್ದರು.

PREV

Recommended Stories

ಡೆಂಘೀ ವಿರುದ್ಧ ಹೋರಾಟಕ್ಕೆ ಯುರೋಪ್ - ಭಾರತ ವಿಜ್ಞಾನಿಗಳ ಮೈತ್ರಿ
2 ಕೋಟಿ ವಹಿವಾಟಿನ ಬೆಲ್ಲದ ಬ್ರ್ಯಾಂಡ್ ‘ಪಾವನಾ’ ಕಟ್ಟಿದ ಟೆಕಿ