ಮಹಿಳಾ ಕಾಲೇಜಿನ ಸಾಂಸ್ಕೃತಿಕ ಕಾರ್ಯಕ್ರಮ ಸಮಾರೋಪ
ವಿದ್ಯಾರ್ಥಿನಿಯರು ಫೇಸ್‌ಬುಕ್, ಇನ್‌ಸ್ಟಾಗ್ರಾಂ ನಂತಹ ಸಾಮಾಜಿಕ ಜಾಲತಾಣಗಳ ವ್ಯಾಮೋಹಕ್ಕೆ ತುತ್ತಾಗದೆ ತಮ್ಮ ಜವಾಬ್ದಾರಿಯನ್ನು ಅರಿತು ಭವಿಷ್ಯವನ್ನು ರೂಪಿಕೊಳ್ಳಬೇಕು ಎಂದು ಹಾಸನ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಟಿ.ಸಿ.ತಾರಾನಾಥ ಕಿವಿಮಾತು ಹೇಳಿದರು.
ನಗರದ ಎಂ.ಜಿ.ರಸ್ತೆಯಲ್ಲಿನ ಮಹಿಳಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಾಂಸ್ಕೃತಿಕ ವೇದಿಕೆ, ರೆಡ್ ಕ್ರಾಸ್, ಸ್ಕೌಟ್ಸ್ ಮತ್ತು ಗೈಡ್ಸ್, ಎನ್‌ಸಿಸಿ, ಎನ್‌ಎಸ್‌ಎಸ್ ಮತ್ತು ಕ್ರೀಡಾ ಚಟುವಟಿಕೆಗಳ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ‘ಎಲ್ಲಿ ಬೆಳಕು ಇರುತ್ತದೋ ಅಲ್ಲಿ ಕತ್ತಲೆಗೆ ಅವಕಾಶವಿಲ್ಲ, ಎಲ್ಲಿ ಜ್ಞಾನವಿರುತ್ತದೋ ಅಲ್ಲಿ ಅಜ್ಞಾನಕ್ಕೆ ಅವಕಾಶವಿಲ್ಲ. ಹೀಗಾಗಿ ಹೆಣ್ಣುಮಕ್ಕಳು ವಿದ್ಯೆ ಕಲಿತರೆ ಅವರ ಇಡೀ ಕುಟುಂಬ ಶಿಕ್ಷಿತರಾಗುತ್ತದೆ’ ಎಂದು ಹೇಳಿದರು.‘ಜ್ಞಾನ ಮತ್ತು ಕ್ರಿಯಾಶಕ್ತಿ ಸಮ್ಮಿಲನಗೊಂಡು ವಿದ್ಯಾರ್ಥಿಗಳು ಇಚ್ಛೆ ಪಟ್ಟರೆ ಸಾಧನೆ ಸಾಧ್ಯವಾಗಲಿದೆ. ಹೀಗಾಗಿ ವಿದ್ಯಾರ್ಥಿ ಜೀವನದಲ್ಲಿ ವಿಶಾಲವಾದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಶ್ರಮಪಟ್ಟರೆ ಅಸಾಧ್ಯ ಎಂಬ ಪದವೇ ಇರುವುದಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ಕಾರ್ಯಪ್ರವೃತ್ತರಾಗಬೇಕು’ ಎಂದು ಹೇಳಿದರು.
ಕೆಲವರು ಬದುಕಿದ್ದರೂ ಸತ್ತಂತೆ, ಇನ್ನು ಕೆಲವರು ಸತ್ತರೂ ಬದುಕಿದ್ದಂತೆ, ಹೀಗಾಗಿ ವಿದ್ಯಾರ್ಥಿಗಳು ತಮ್ಮ ಹೆಸರು ಸಮಾಜದಲ್ಲಿ ಉಳಿಯುವಂತ ರೀತಿಯಲ್ಲಿ ಕೆಲಸವನ್ನು ಮಾಡಬೇಕು. ಸೇವಾ ಮನೋಭಾವವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಹೆಣ್ಣುಮಕ್ಕಳ ಮೇಲೆ ಶೋಷಣೆ ಮತ್ತು ಕ್ರೌರ್ಯಗಳು ಹೆಚ್ಚಾಗುತ್ತಿದ್ದು, ಅದನ್ನು ದಿಟ್ಟವಾಗಿ ಎದುರಿಸಬೇಕು. ಪ್ರತಿಯೊಂದು ಹಂತದಲ್ಲೂ ಸಮಸ್ಯೆಯ ಸುಳಿಯಲ್ಲಿ ಸಿಲುಕುತ್ತಿದ್ದು, ಸರಿಯಾದ ರೀತಿಯಲ್ಲಿ ಹೆಜ್ಜೆಯನ್ನು ಇಡಬೇಕು. ಸರ್ಕಾರ ಮತ್ತು ಸಮಾಜ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಿದ್ದು, ಅದನ್ನು ಸರಿಯಾದ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳುವ ಮೂಲಕ ಸದೃಢ ಸಮಾಜವನ್ನು ಕಟ್ಟಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಸಾಧನೆಗೈದ ವಿದ್ಯಾರ್ಥಿನಿಯರನ್ನು ಸನ್ಮಾನಿಸಿ ಗೌರವಿಸಲಾಯಿತು.
ಸಾಂಸ್ಕತಿಕ ಕಾರ್ಯದರ್ಶಿ ಡಾ.ಎಚ್.ಎನ್.ಹರೀಶ್, ಎನ್‌ಸಿಸಿ ಸಂಚಾಲಕ ಎಂ.ಸಿ.ಗಿರೀಶ್, ಯುವ ರೆಡ್‌ಕ್ರಾಸ್ ಮಹಿಳಾ ಘಟಕ ಸಂಚಾಲಕ ಡಾ.ಎಚ್.ಎನ್.ವೆಂಕಟೇಶ್, ಸ್ಕೌಟ್ಸ್ ಮತ್ತು ಗೈಡ್ಸ್ ಸಂಚಾಲಕಿ ಶಿಲ್ಪಶ್ರೀ ಆರ್., ದೈಹಿಕ ಶಿಕ್ಷಣ ನಿರ್ದೇಶಕ ಜಿ.ಪಿ.ಯೋಗೇಶ್, ಕಾಲೇಜಿನ ಎಲ್ಲಾ ವಿಭಾಗದ ಮುಖ್ಯಸ್ಥರು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿನಿಯರು ಇದ್ದರು.