ನಾವು ಪರಿಸರ ಉಳಿಸಿದರೆ ಅದು ನಮ್ಮನ್ನು ಉಳಿಸುತ್ತದೆ

KannadaprabhaNewsNetwork | Published : Jun 10, 2024 12:32 AM

ಸಾರಾಂಶ

ಚಿತ್ರದುರ್ಗದ ಜೋಗಿಮಟ್ಟಿ ರಸ್ತೆಯಲ್ಲಿನ ಯಂಗಮ್ಮನ ಕಟ್ಟೆ ಬಡಾವಣೆಯಲ್ಲಿನ ನೀಲಾದ್ರಿ ನೇಸರ ಕ್ಷೇಮಾಭೀವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮವನ್ನು ಬಿಜೆಪಿ ಯುವ ಮುಖಂಡ ರಘುಚಂದನ್‌ ಸಸಿ ನೆಡುವ ಮೂಲಕ ಚಾಲನೆ ಉದ್ಘಾಟಿಸಿದರು.

ಕನ್ನಡಪ್ರಭ ವಾರ್ತೆ ಚಿತ್ರದುರ್ಗ

ನಾವು ಪರಿಸರ ಉಳಿಸಿದರೆ ಅದು ನಮ್ಮನ್ನು ಮುಂದಿನ ದಿನದಲ್ಲಿ ಉಳಿಸುತ್ತದೆ. ಹಾಗಾಗಿ ಮರ ಕಡಿಯುವುದಕ್ಕಿಂತ ಸಸಿ ನೆಡುವ ಕೆಲಸವಾಗಬೇಕಿದೆ ಎಂದು ಬಿಜೆಪಿ ಯುವ ಮಖಂಡ ರಘುಚಂದನ್ ಹೇಳಿದರು.

ನಗರದ ಜೋಗಿಮಟ್ಟಿ ರಸ್ತೆಯಲ್ಲಿನ ಯಂಗಮ್ಮನ ಕಟ್ಟೆ ಬಡಾವಣೆಯಲ್ಲಿನ ನೀಲಾದ್ರಿ ನೇಸರ ಕ್ಷೇಮಾಭೀವೃದ್ಧಿ ಸಂಘದ ಆಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಮಾತನಾಡಿ, ಇಂದಿನ ದಿನಮಾನದಲ್ಲಿ ಸಸಿ ನೆಡಲು ಬನ್ನಿ ಎಂದು ಕರೆಯುವವರು ಕಡಿಮೆಯಾಗಿದ್ದಾರೆ. ದೇವಸ್ಥಾನಕ್ಕೆ ಸಹಾಯ ಮಾಡಿ, ರಸ್ತೆ ಮಾಡಿಸಿಕೊಡಿ ಎಂದು ಕೇಳುವವರ ಸಂಖ್ಯೆ ಹೆಚ್ಚಾಗಿದೆ. ಈ ಸಮಯದಲ್ಲಿ ನೀಲಾದ್ರಿ ನೇಸರ ಕ್ಷೇಮಾಭೀವೃದ್ಧಿ ಸಂಘದವರು ವಿಶ್ವ ಪರಿಸರ ದಿನಾಚರಣೆ ಮಾಡುತ್ತಿರುವುದು ಸಂತೋಷದ ಸಂಗತಿ ಎಂದರು.

ಇಂದಿನ ದಿನಮಾನದಲ್ಲಿ ಕಲುಷಿತವಾದ ಗಾಳಿ ಮತ್ತು ನೀರು ಸೇವನೆ ಮಾಡುವುದರ ಮೂಲಕ ನಮ್ಮ ಬದುಕು ದುಸ್ಥಿರವಾಗಿದೆ. ವಾರಕ್ಕೊಮ್ಮೆ ವೈದ್ಯರನ್ನು ಭೇಟಿ ಮಾಡುವ ಪ್ರಸಂಗ ಬರುತ್ತಿದೆ. ಆದರೆ ಉತ್ತಮ ಪರಿಸರ ಇದ್ದರೆ ಇವೆಲ್ಲಾ ತಪ್ಪುತ್ತದೆ. ಈ ಹಿನ್ನೆಲೆ ಪರಿಸರ ಉಳಿಸಿ ಬೆಳಸುವ ಕಾರ್ಯಕ್ಕೆ ನಾವೆಲ್ಲರು ಸಹಾ ಮುಂದಾಗಬೇಕಿದೆ ಎಂದರು,

ಚಿತ್ರದುರ್ಗದಲ್ಲಿ ರಸ್ತೆ ಅಗಲೀಕರಣ ಮಾಡುವ ನೆಪದಲ್ಲಿ ಹಲವಾರು ಹಳೆಯ ಮರ ಕಡಿದಿದ್ದಾರೆ. ಮತ್ತೇ ಅವು ಅಷ್ಟು ಬೆಳೆಯಲು ಹಲವಾರು ವರ್ಷ ಬೇಕಾಗುತ್ತದೆ. ಮರಗಳ ಕಡಿಯವುವಿಕೆಯಿಂದ ಬಿಸಿಲಿನ ತಾಪಮಾನ ಹೆಚ್ಚಾಗುತ್ತದೆ. ಮಳೆಯ ಪ್ರಮಾಣ ಕಡಿಮೆಯಾಗುತ್ತದೆ. ಇಲ್ಲಿ ನೀವು ಮಾಡಿದ ಕಾರ್ಯ ಉತ್ತಮವಾಗಿದ್ದು ಇದು ಚಿತ್ರದುರ್ಗದ ಜನತೆಗೆ ಮಾದರಿಯಾಗಲಿ, ಇದಕ್ಕೆ ನಾನೂ ಸಹಾ ಕೈಜೋಡಿಸಿ 1000 ಸಸಿ ಕೂಡಿಸುತ್ತೇನೆ, ಅಲ್ಲದೆ ಇಲ್ಲಿ ಕೊಳವೆ ಬಾವಿ ಹಾಕಿಸುವಂತೆ ಸಂಘದವರು ಮನವಿ ಮಾಡಿದ್ದಾರೆ ಅದಕ್ಕೂ ಸಹಾ ಸಹಕಾರ ನೀಡುತ್ತೇನೆ ಎಂದು ಭರವಸೆ ನೀಡಿದರು.

ಪರಿಸರವಾದಿ ಎಚ್.ಎಸ್.ಕೆ.ಸ್ವಾಮಿ ಮಾತನಾಡಿ, ವಿದೇಶಿ ವಸ್ತ್ರಗಳಿಗೆ ಮಾರು ಹೋಗಿ ಗಾಂಧೀಜಿ ತಿಳಿಸಿದ ಖಾದಿ ಬಳಕೆ ಮಾಡುತ್ತಿಲ್ಲ. ಇದರಿಂದ ಹಲವಾರು ಜನ ಸಂಕಷ್ಟಕ್ಕೆ ಈಡಾಗುತ್ತಿದ್ದಾರೆ. ಅದೇ ನಾವು ಖಾದಿ ಬಳಕೆ ಮಾಡಿದರೆ ನಮ್ಮ ದೇಹಕ್ಕೂ ತಂಪು, ಇದನ್ನು ನಿರ್ಮಾಣ ಮಾಡಿದವರ ಹೊಟ್ಟೆಯೂ ಸಹಾ ತುಂಬುತ್ತದೆ. ಪ್ಲಾಸ್ಟಿಕ್‌ ಬಳಕೆ ಪೂರ್ಣ ಪ್ರಮಾಣದಲ್ಲಿ ನಿಷೇಧ ಮಾಡಿ ಹೂರಗಡೆ ಹೋಗುವಾಗ ಕೈ ಚೀಲ ತೆಗೆದುಕೊಂಡು ಹೋಗಬೇಕು. ಮನೆ ಕಸ ಎಲ್ಲೆಂದರಲ್ಲಿ ಬಿಸಾಕದೆ ನಗರಸಭೆ ವಾಹನಕ್ಕೆ ನೀಡಿ, ಇದರಿಂದ ಪರಿಸರ ಉಳಿಸಿದಂತೆ ಆಗುತ್ತದೆ. ಒಮ್ಮೆ ಬಳಸಿದ ವಸ್ತು ಕಸವೆಂದು ಭಾವಿಸಬೇಡಿ ಅದರಿಂದ ಪುನರ್ ಬಳಕೆ ಮಾಡುವ ಬಗ್ಗೆ ಅಲೋಚನೆ ಮಾಡಿ, ಮನೆಯಲ್ಲಿ ಮಹಿಳೆಯರು ಮನಸ್ಸು ಮಾಡಿದರೆ ಅಸಾಧ್ಯ ಎನ್ನುವುದು ಯಾವುದ ಇಲ್ಲ ಎಲ್ಲವು ಸಾಧ್ಯವಾಗುತ್ತದೆ ಎಂದರು.

ನೀಲಾದ್ರಿ ನೇಸರ ಕ್ಷೇಮಾಭೀವೃದ್ದಿ ಸಂಘದ ಅಧ್ಯಕ್ಷ ವಿಜಯಕುಮಾರ್ ಮಾತನಾಡಿ, ಈ ಸಂಘವನ್ನು 4 ಬಡಾವಣೆಯವರು ಸೇರಿ ನಿರ್ಮಾಣ ಮಾಡಲಾಗಿದೆ. ಇಲ್ಲಿ 42 ಮನೆಗಳಿದ್ದು 180 ಜನರಿದ್ದಾರೆ. ಉತ್ತಮ ಪರಿಸರ ನಿರ್ಮಾಣ ಮಾಡಬೇಕೆಂದು ಈ ಕಾರ್ಯಕ್ರಮ ರೂಪಿಸಲಾಗಿದೆ. ಇದಲ್ಲದೆ ವಿಶ್ವ ತಾಯಂದಿರ ದಿನ, ತಂದೆಯಂದಿರ ದಿನ, ಹುಟ್ಟು ಹಬ್ಬ, ವಿವಾಹ ವಾರ್ಷಿಕ ದಿನ, ಮಕ್ಕಳ ದಿನಾಚರಣೆ ಸೇರಿ ವಿವಿಧ ರೀತಿಯ ಕಾರ್ಯಕ್ರಮ ನಡೆಸಲಾಗುತ್ತಿದೆ. ಇಲ್ಲಿ ಸುಮಾರು 4 ಎಕರೆ ವಿಸ್ತಿರ್ಣದಲ್ಲಿ ಪಾರ್ಕ ಇದೆ ಅದನ್ನು ಉತ್ತಮ ಪಡಿಸಬೇಕಂದು ಯೋಜನೆ ರೂಪಿಸಲಾಗಿದೆ ಎಂದರು.

ಸಂಘದ ಮಹಿಳಾ ಘಟಕದ ಅಧ್ಯಕ್ಷೆ ನಳಿನಿ, ರಾಮಪ್ಪ ಇದ್ದರು, ವಾಣಿ ಪ್ರಾರ್ಥಿಸಿದರು, ಸಂಘದ ಗೌರವಾಧ್ಯಕ್ಷ ಯಶವಂತ ಸ್ವಾಗತಿಸಿದರು.

Share this article