ಒಗ್ಗೂಡಿ ನಡೆದರೆ ಸಂಸ್ಥೆ ಬೆಳೆಯಲು ಸಾಧ್ಯ

KannadaprabhaNewsNetwork | Published : Dec 23, 2023 1:46 AM

ಸಾರಾಂಶ

ನಾ ದೊಡ್ಡವ ಎನ್ನುವ ಅಹಂಭಾವ ಬಿಟ್ಟು ನಾವು, ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದರೆ ಶಿಕ್ಷಣ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ಬುಧವಾರ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ 85ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ನುಡಿದರು.

ಕನ್ನಡಪ್ರಭ ವಾರ್ತೆ ತಾಳಿಕೋಟೆ

ನಾ ದೊಡ್ಡವ ಎನ್ನುವ ಅಹಂಭಾವ ಬಿಟ್ಟು ನಾವು, ನಮ್ಮದು ಎಂಬ ಭಾವನೆ ಪ್ರತಿಯೊಬ್ಬರಲ್ಲಿ ಮೂಡಿದರೆ ಶಿಕ್ಷಣ ಸಂಸ್ಥೆ ಇನ್ನೂ ಹೆಮ್ಮರವಾಗಿ ಬೆಳೆದು ನಿಲ್ಲಲಿದೆ ಎಂದು ಶ್ರೀ ಖಾಸ್ಗತೇಶ್ವರ ಮಠದ ಬಾಲ ಶಿವಯೋಗಿ ಶ್ರೀ ಸಿದ್ದಲಿಂಗ ದೇವರು ನುಡಿದರು.

ಬುಧವಾರ ಪಟ್ಟಣದ ವೀರಶೈವ ವಿದ್ಯಾವರ್ಧಕ ಸಂಘದ 85ನೇ ವರ್ಷದ ವಾರ್ಷಿಕ ಸರ್ವ ಸಾಧಾರಣ ಸಭೆಯಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಸದ್ಯ ಈ ಭಾಗದಲ್ಲಿ ಶಿಕ್ಷಣ ಸಂಸ್ಥೆಯಲ್ಲಿಯೇ ಅತೀ ಹೆಚ್ಚು ಹೆಮ್ಮರವಾಗಿ ಬೆಳುದಿರುವುದು ಶ್ರೀ ಖಾಸ್ಗತೇಶ್ವರ ಶಿಕ್ಷಣ ಸಂಸ್ಥೆ. ರಾಜ್ಯದಲ್ಲಿಯೇ ಮಾದರಿ ಸಂಸ್ಥೆಯಾಗಿ ಬೆಳೆಯಲು ಎಲ್ಲ ಸಿಬ್ಬಂದಿ ಮತ್ತು ಆಡಳಿತ ಮಂಡಳಿ ಒಗ್ಗೂಡಿಕೊಂಡು ಹೆಜ್ಜೆ ಹಾಕಬೇಕು. ಸಂಸ್ಥೆಯನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯುವ ಮನೋಭಾವ ಪ್ರತಿಯೊಬ್ಬರಲ್ಲಿ ಬರಬೇಕು. ಅಂದಾಗ ಮಾತ್ರ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯವಾಗಲಿದೆ ಎಂದರು.

ಶ್ರೀ ಖಾಸ್ಗತರ, ವಿರಕ್ತಶ್ರೀಗಳ ಆಶೀರ್ವಾದ ಈ ಶಿಕ್ಷಣ ಸಂಸ್ಥೆಯ ಮೇಲೆ ಸದಾ ಇದೆ. ಇಲ್ಲಿ ಕಲಿಯುತ್ತಿರುವ ಮಕ್ಕಳಲ್ಲಿ ಹಲವಾರು ಮಕ್ಕಳು ದೇಶದ ಉನ್ನತ ಸ್ಥಾನದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಸಂಸ್ಥೆಯ ಹೆಸರನ್ನು ದೇಶವ್ಯಾಪಿ ಪಸರಿಸಿದ್ದಾರೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಶಿಕ್ಷಣಕ್ಕೆ ಅವಶ್ಯವಿರುವ ಮತ್ತಷ್ಟು ಕೋರ್ಸ್‌ಗಳನ್ನು ಆರಂಭಿಸಿ ವಿದ್ಯಾರ್ಥಿಗಳ ಬಾಳಿಗೆ ಬೆಳಕಾಗಲಿ ಎಂದು ಆಶಿಸಿದರು.

ಅಧ್ಯಕ್ಷತೆ ವಹಿಸಿದ್ದ ವೀ.ವಿ.ಸಂಘದ ಅಧ್ಯಕ್ಷ ವಿರುಪಾಕ್ಷಯ್ಯ ಹಿರೇಮಠ(ಹಂಪಿಮುತ್ಯಾ) ಮಾತನಾಡಿ, ಕಳೆದ 10 ವರ್ಷಗಳಲ್ಲಿ ಸಂಸ್ಥೆಯಲ್ಲಿ ಸಾಕಷ್ಟು ಬದಲಾವಣೆ ತರುವುದರೊಂದಿಗೆ ವಿದ್ಯಾರ್ಥಿಗಳಿಗಾಗಿ ಬಿಎಸ್‌ಇ ಮತ್ತು ಬಿಇಡಿ ಕೋರ್ಸ್‌ ಪ್ರಾರಂಬಿಸಿದ್ದೇವೆ. ಇದರಿಂದ ನೂರಾರು ಮಕ್ಕಳಿಗೆ ಅನುಕೂಲವಾಗಿದೆ. ಮುಂದಿನ ದಿನಗಳಲ್ಲಿ ವೈದ್ಯಕೀಯಕ್ಕೆ ಸಂಬಂಧಿಸಿದ ಕೋರ್ಸ್‌ಗಳನ್ನು ಪ್ರಾರಂಭಿಸಿ ಹೆಚ್ಚಿನ ಸೌಲಭ್ಯ ಒದಗಿಸಲಾಗುವುದು ಎಂದರು...

ಸಭೆಯಲ್ಲಿ ದಿ.30-12-2022ರ ವಾರ್ಷಿಕ ಸರ್ವ ಸಾಧಾರಣ ಸಭೆಯ ನಿರ್ಣಗಳನ್ನು ಓದಿ ದೃಢೀಕರಿಸಲಾಯಿತು, 31-03-2023ನೇ ವರ್ಷಕ್ಕೆ ಕೊನೆಗೊಳ್ಳುವ ಲೆಕ್ಕ ಪರಿಶೋಧಕರಿಂದ ಪರಿಶೋಧಸಲ್ಪಟ್ಟಿರುವ ಸಂಘದ ಆಯ-ವ್ಯಯ, ಸಾಲದ ಜಿಂದಗಿ ಪತ್ರಿಕೆ ಹಾಗೂ ಆಡಳಿತ ಮಂಡಳಿಯವರು ಒಪ್ಪಿಸುವ ವರದಿ ಸ್ವೀಕರಿಸಿ ಮಂಜೂರಿ ಕೊಡಲಾಯಿತು.

ಶ್ರೀ ಖಾಸ್ಗತೇಶ್ವರ ಕಲಾ ಹಾಗೂ ವಿಜ್ಞಾನ ಮಹಾವಿದ್ಯಾಲಯ, ಎಸ್.ಕೆ.ಶಿಕ್ಷಣ ಮಹಾವಿದ್ಯಾಲಯ(ಬಿಇಡಿ), ಎಸ್.ಕೆ. ಪದವಿಪೂರ್ವ ಮಹಾ ವಿದ್ಯಾಲಯ, ಎಸ್.ಕೆ. ಬಾಲಕರ ಪ್ರೌಢಶಾಲೆ, ವಿವಿಎಸ್ ಮಹಿಳಾ ಪದವಿ ಪೂರ್ವ ಕಾಲೇಜು, ಎಸ್.ಕೆ.ಪೂರ್ವ ಪ್ರಾಥಮಿಕ, ಪ್ರಾಥಮಿಕ(ಆಂಗ್ಲ ಮತ್ತು ಕನ್ನಡ) ಮಾಧ್ಯಮ ಶಾಲೆ, ನಿಂಗಪ್ಪ ಎನ್. ಬೋಳಶೆಟ್ಟಿ, ಕೈಗಾರಿಕಾ ತರಬೇತಿ ಸಂಸ್ಥೆ, ಎಸ್.ಕೆ. ಅನುದಾನಿತ ವಸತಿ ನಿಲಯ, ವೀರಶೈವ ವಿಧ್ಯಾವರ್ಧಕ ಸಂಘದ 2023-24ನೇ ಸಾಲಿನ ಯೋಜನೆಗಳ ಅಂದಾಜು ಪತ್ರಿಕೆಗಳನ್ನು ಓದಿ ಮಂಜೂರು ಕೊಡಲಾಯಿತು.

ಕಾರ್ಯಕ್ರಮಕ್ಕೂ ಮುಂಚೆ ಸಂಸ್ಥೆಯ ಮಾಜಿ ಕಾರ್ಯದರ್ಶಿಗಳಾದ ಬಿ.ಎಸ್. ಗಬಸಾವಳಗಿ, ಬಸರಡ್ಡಿ ಭಂಟನೂರ ಅವರ ನಿಧನಕ್ಕೆ ಎರಡು ನಿಮಿಷ ಮೌನ ಆಚರಿಸಿ ಗೌರವ ಸಲ್ಲಿಸಲಾಯಿತು.

Share this article