ಪಂಚೇಂದ್ರಿಗಳ ಗುಲಾಮನಾದರೆ ಉದ್ಧಾರ ಅಸಾಧ್ಯ: ಸ್ವಾಮೀಜಿ

KannadaprabhaNewsNetwork | Published : Mar 7, 2025 12:52 AM

ಸಾರಾಂಶ

ರಾಜಕಾರಣಿಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸಾಹಿತಿಗಳು, ಸಮಾಜ ಸುಧಾಕರು ಏನಾಗಿದ್ದಾರೆ. ಎಲ್ಲರೂ ಯಾವುದೋ ಒಂದು ಇಂದ್ರಿಯಗಳ ದಾಸರಾಗಿ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದಿದ್ದಾರೆ.

- "ಶರಣ ಸಿರಿ " ಪ್ರಶಸ್ತಿ ಪ್ರದಾನ- ಜಿಲ್ಲಾ ಯುವ ವೇದಿಕೆ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ- - - ಕನ್ನಡಪ್ರಭ ವಾರ್ತೆ ದಾವಣಗೆರೆ ರಾಜಕಾರಣಿಗಳ ಬಗ್ಗೆ ಮಾತನಾಡುವ ಅಗತ್ಯವಿಲ್ಲ. ಸಾಹಿತಿಗಳು, ಸಮಾಜ ಸುಧಾಕರು ಏನಾಗಿದ್ದಾರೆ. ಎಲ್ಲರೂ ಯಾವುದೋ ಒಂದು ಇಂದ್ರಿಯಗಳ ದಾಸರಾಗಿ ತಮ್ಮ ವ್ಯಕ್ತಿತ್ವ ಹಾಳು ಮಾಡಿಕೊಳ್ಳುತ್ತಿದ್ದಾರೆ ಎಂದು ಸಾಣೇಹಳ್ಳಿಯ ತರಳಬಾಳು ಶಾಖಾ ಮಠದ ಡಾ.ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ನುಡಿದರು.

ನಗರದ ವಿದ್ಯಾನಗರದ ಕುವೆಂಪು ಕನ್ನಡ ಭವನದಲ್ಲಿ ಗುರುವಾರ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕದಿಂದ ಹಮ್ಮಿಕೊಂಡಿದ್ದ "ಶರಣ ಸಿರಿ " ಪ್ರಶಸ್ತಿ ಪ್ರದಾನ ಹಾಗೂ ಜಿಲ್ಲಾ ಯುವ ವೇದಿಕೆ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದ ದಿವ್ಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಬಸವ ಪರಂಪರೆಯಲ್ಲಿ ಹೋಗುವ ಜನ ತಮ್ಮ ಇಂದ್ರಿಯಗಳಿಗೆ ಬಲಿಯಾಗದೇ ಅವುಗಳನ್ನು ಉದಾತ್ತೀಕರಣಗೊಳಿಸಿಕೊಳ್ಳಬೇಕು ಎಂದರು.

ಮನುಷ್ಯ ಪಂಚೇಂದ್ರಿಗಳ ಗುಲಾಮನಾದರೆ ಉದ್ಧಾರವಾಗಲು ಸಾಧ್ಯವಿಲ್ಲ. ಸಮಾಜಕ್ಕೆ ಇಂದು ಮಾರ್ಗದರ್ಶನ ಮಾಡುವಂಥ ಸ್ವಾಮಿಗಳೇ ದಾರಿಬಿಟ್ಟಿದ್ದಾರೆ. ಶರಣ ಪರಂಪರೆಯ ಬೇರುಗಳನ್ನು ಮಕ್ಕಳ ಮನಸ್ಸಿನಲ್ಲಿ ಆಳವಾಗಿ ಬೇರೂರಿಸುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶರಣ ಸಾಹಿತ್ಯ ಪರಿಷತ್ತಿನಿಂದ ಮಕ್ಕಳ ಶರಣ ಸಾಹಿತ್ಯ ಪರಿಷತ್ತನ್ನು ತುರ್ತಾಗಿ ಆರಂಭಿಸಿದರೆ, ಎಲ್ಲ ರೀತಿಯ ಬೆಂಬಲ ನೀಡಲಾಗುವುದು. ಶರಣ ತತ್ವವು ಬರೀ ಲಾಂಛನವಾಗದೇ ನಿಜವಾಗಿಯೂ ಕಾರ್ಯರೂಪಕ್ಕೆ ಬರಬೇಕಿದೆ. ಬಸವ ಅನುಯಾಯಿಗಳ ನಡೆ-ನುಡಿ ಒಂದಾಗಬೇಕಿದೆ ಎಂದು ಹೇಳಿದರು.

ಬಸವತತ್ವವು ಅನುಯಾಯಿಗಳ ಬದುಕನ್ನು ಬದಲಾಯಿಸಬೇಕು. ಪ್ರತಿಯೊಬ್ಬರಲ್ಲಿ ಇರುವ ಅವಗುಣ, ಅಪಸ್ವರಗಳನ್ನು ದೂರ ಮಾಡಬೇಕು. ಎಲ್ಲರನ್ನೂ ಸನ್ಮಾರ್ಗದ ಕಡೆಗೆ ಕರೆದೊಯ್ಯಬೇಕು. ಇಷ್ಟಲಿಂಗ ಧಾರಣೆ, ಕಾಯಕ ಶ್ರದ್ಧೆ ಹಾಗೂ ದಾಸೋಹ ಪ್ರಜ್ಞೆ ಬೆಳೆಸಿಕೊಳ್ಳಬೇಕು. ಗಂಧ ಮತ್ತು ವಿಭೂತಿಯು ಶರಣ ಪರಂಪರೆಯ ಪ್ರತೀಕವಾಗಿದ್ದು, ಕುಂಕುಮಕ್ಕಿಂತ ಇವುಗಳನ್ನು ಧರಿಸುವುದು ಸೂಕ್ತ ಎಂದರು.

ಚನ್ನಗಿರಿ ತಾಲೂಕು ಗುಳ್ಳೇಹಳ್ಳಿ ಗ್ರಾಮದ ಕೃಷಿಕ ಎಚ್.ಎಸ್. ಮಲ್ಲಿಕಾರ್ಜುನಪ್ಪ ಶರಣಸಿರಿ ಪ್ರಶಸ್ತಿ ಸ್ವೀಕರಿಸಿ ಮಾತನಾಡಿ, ತಂದೆ-ತಾಯಿಯ ಸಂಸ್ಕಾರದಿಂದ ಪ್ರತಿ ಸೋಮವಾರ ಗಣಸಹಸ್ರ ನಾಮಾವಳಿ ಪಾರಾಯಣ ಮಾಡಿಕೊಂಡು ಬಂದಿದ್ದೇನೆ. ಸತ್ಯ-ಶುದ್ಧ ಕಾಯಕದ ಮೂಲಕ ಬದುಕು ರೂಪಿಸಿಕೊಂಡಿದ್ದೇನೆ. ಪ್ರಶಸ್ತಿಯು ನನ್ನ ಜವಾಬ್ದಾರಿ ಹೆಚ್ಚಿಸಿದೆ. ಈಗಾಗಲೇ ಶರಣ ಸಾಹಿತ್ಯ ಪರಿಷತ್ತಿಗೆ ತಂದೆ-ತಾಯಿ ಹೆಸರಿನಲ್ಲಿ ಅಲ್ಪಮೊತ್ತದ ದತ್ತಿ ಸ್ಥಾಪಿಸಿದ್ದು, ಹೊಸದಾಗಿ ₹1 ಲಕ್ಷ ದತ್ತಿ ನೀಡುವುದಾಗಿ ಘೋಷಿಸಿದರು.

ಚಿಂತಕ ಡಾ.ಬಸವರಾಜ ನೆಲ್ಲಿಸರ ಬಸವಣ್ಣನವರ ಬಹುಮುಖ ವ್ಯಕ್ತಿತ್ವ ಎಂಬ ವಿಷಯವಾಗಿ ಮಾತನಾಡಿ, ಜನಪದರ ವಿಚಾರಗಳು ಶರಣರ ವಚನಗಳಲ್ಲಿ ಹಾಸು ಹೊಕ್ಕಾಗಿವೆ. ಜನಪದ ಸಾಹಿತ್ಯದ ಮೇಲೆ ಬಸವಣ್ಣ ಪ್ರಭಾವ ಬೀರಿರುವುದನ್ನು ಕಾಣಬಹುದು. ಬಸವಣ್ಣನವರು ಜನಪದರಂತೆಯೇ ಕ್ರಿಯಾಶೀಲನೆ, ವೈಚಾರಿಕತೆಯಿಂದ ಬದುಕಿನಿಂದ ಕಲಿತು, ಸಮಾಜದ ಮೇಲೆ ಪ್ರಯೋಗ ಮಾಡಿದವರು. ಸರಳ ಭಾಷೆಯಲ್ಲಿ ಜನರಿಗೆ ಸಮೂಹಪ್ರಜ್ಞೆ ಕಲಿಸಿದವರು ಎಂದರು.

ಪರಿಷತ್ತು ರಾಜ್ಯಾಧ್ಯಕ್ಷ ಡಾ. ಸಿ.ಸೋಮಶೇಖರ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ದತ್ತಿ ದಾನಿ ಗಾಯತ್ರಿ ಸಿದ್ದೇಶ್ವರ ಉದ್ಘಾಟಿಸಿದರು. ಗೌರವ ಸಲಹೆಗಾರ ಎಚ್.ಕೆ.ಲಿಂಗರಾಜು, ಜಿಲ್ಲಾಧ್ಯಕ್ಷ ಕೆ.ಬಿ.ಪರಮೇಶ್ವರಪ್ಪ, ಕದಳಿ ಮಹಿಳಾ ವೇದಿಕೆಯ ಪ್ರಮೀಳ ನಟರಾಜ್, ಗಾಯತ್ರಿ ವಸ್ತ್ರದ್, ಎನ್.ಎಸ್.ರಾಜು, ಆರ್.ಸಿದ್ದೇಶಪ್ಪ ಇತರರು ಭಾಗವಹಿಸಿದ್ದರು.

ಕಾರ್ಯಕ್ರಮದಲ್ಲಿ ಡಾ.ಶಿವರಾಜ್ ಕಬ್ಬೂರು ಮತ್ತು ತಂಡದವರಿಗೆ ರಾಜ್ಯ ಯುವ ವೇದಿಕೆ ಸಂಚಾಲಕ ಪ್ರಕಾಶ್ ಎಸ್.ಅಂಗಡಿ ಸೇವಾ ದೀಕ್ಷೆ ಬೋಧಿಸಿದರು.

- - - -6ಕೆಡಿವಿಜಿ39.ಜೆಪಿಜಿ:

ದಾವಣಗೆರೆಯಲ್ಲಿ ಕೃಷಿಕ ಎಚ್.ಎಸ್.ಮಲ್ಲಿಕಾರ್ಜುನಪ್ಪನವರಿಗೆ ಶರಣ ಸಿರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

Share this article