ಕನ್ನಡಪ್ರಭ ವಾರ್ತೆ ಸಾಗರ
ಶ್ರೀಅಖಿಲ ಹವ್ಯಕ ಮಹಾಸಭಾ ಪಟ್ಟಣದ ರಾಘವೇಶ್ವರ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಶಿವಮೊಗ್ಗ ಜಿಲ್ಲಾ ಹವ್ಯಕ ಶಿಕ್ಷಕ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿ, ಎಲ್ಲ ನೌಕರರು ತಮ್ಮ ತಮ್ಮ ವೃತ್ತಿಯನ್ನು ಪ್ರೀತಿಸದಿದ್ದರೆ ಸಂತೃಪ್ತಿ ಸಿಗುವುದಿಲ್ಲ ಎಂದು ಹೇಳಿದರು.
ಸಂಬಳಕ್ಕಾಗಿ ದುಡಿತ, ಸಮಾಧಾನ ಮತ್ತು ಸಂಭ್ರಮಕ್ಕಾಗಿ ತುಡಿತ ಎನ್ನುವ ತಳಹದಿಯ ಮೇಲೆ ಶಿಕ್ಷಕರು ಕಾರ್ಯನಿರ್ವಹಿಸಬೇಕು. ಮಕ್ಕಳ ಮುಗ್ದತೆಯನ್ನು ಸಂಭ್ರಮಿಸುತ್ತಾ, ಅವರಲ್ಲಿ ಜ್ಞಾನದೀವಿಗೆಯನ್ನು ಬೆಳಗಿಸುತ್ತಾ ಸತ್ಪ್ರಜೆಗಳನ್ನಾಗಿ ರೂಪಿಸುವ ಅತ್ಯಂತ ಮಹತ್ವದ ಹೊಣೆಗಾರಿಕೆಯನ್ನು ಶಿಕ್ಷಕ ಸಮೂಹ ಸಮರ್ಥವಾಗಿ ನಿಭಾಯಿಸುತ್ತಿದೆ ಎಂದು ಹೇಳಿದರು.ಹಿಂದೆ ಶಿಕ್ಷಕರು ಭದ್ರತೆಯ ನೆರಳಿನಲ್ಲಿ ಬೋಧನೆ ಮಾಡುತ್ತಿದ್ದರು. ಆದರೆ ಇಂದು ಅಭದ್ರತೆ ಶಿಕ್ಷಕರನ್ನು ಕಾಡುತ್ತಿದೆ. ಮಕ್ಕಳಿಗೆ ಬುದ್ದಿಮಾತು ಹೇಳದಂತೆ ಬೆಳೆಸುವ ಸ್ಥಿತಿ ಶಿಕ್ಷಕ ಸಮೂಹದ್ದಾಗಿದೆ. ಸರ್ಕಾರ ಮತ್ತು ಜನಪ್ರತಿನಿಧಿಗಳ ವಾಸನೆಯಲ್ಲಿ ನಡೆಯುವ ಶಿಕ್ಷಕ ದಿನಾಚರಣೆಗಳು ಶಿಕ್ಷಕ ಸಮೂಹದ ಆಗುಹೋಗುಗಳ ಕುರಿತು ಚಿಂತನ ಮಂಥನ ನಡೆಯುವ ಬದಲು ಯಾರನ್ನೋ ಓಲೈಸುವ, ಮೆರೆಸುವ ಕಾರ್ಯಕ್ರಮವಾಗಿ ಮಾರ್ಪಾಡಾಗುತ್ತಿರುವುದು ವಿಪರ್ಯಾಸ ಎಂದು ಹೇಳಿದರು.
ನಿಮ್ಮ ಆಸಕ್ತಿದಾಯಕ ಕ್ಷೇತ್ರವನ್ನು ಮಕ್ಕಳಿಗೆ ಬೋಧಿಸುವ ಹಕ್ಕು ಸಹ ಮೊಟಕುಗೊಳಿಸಲಾಗುತ್ತಿದೆ. ಇದೆಲ್ಲದರ ನಡುವೆ ಶಿಕ್ಷಕ ವೃತ್ತಿಯೊಂದು ಜೀವಂತ ಉದ್ಯೋಗವಾಗಿದೆ. ಭವಿಷ್ಯಕ್ಕಾಗಿ ಮಕ್ಕಳನ್ನು ಪ್ರೀತಿಸಬೇಕು. ನಮ್ಮ ಸಂಸ್ಕೃತಿಯನ್ನು ಮಕ್ಕಳ ಮೂಲಕ ಬೆಳೆಸಬೇಕು. ಪ್ರತಿಭೆಯನ್ನು ಕಮರಿಸುತ್ತಿರುವ ರಿಯಾಲಿಟಿ ಶೋಗಳೇ ಸತ್ಯವೆಂದು ಭ್ರಮಿಸಿರುವ ಮಕ್ಕಳ ಮನಸ್ಸಿನಲ್ಲಿ ಅಕ್ಷರ ಬಿತ್ತಿ ಅವರು ಸನ್ಮಾರ್ಗದತ್ತ ಒಯ್ಯುವ ಕೆಲಸವನ್ನು ಶಿಕ್ಷಕ ಸಮೂಹ ಕಾಯಾವಾಚಾಮನಸಾ ಮಾಡಬೇಕು ಎಂದು ಹೇಳಿದರು.ಹೊಸದಿಗಂತ ಪತ್ರಿಕೆ ಪ್ರಧಾನ ಸಂಪಾದಕ ವಿನಾಯಕ ಭಟ್ ಮೂರೂರು ಮಾತನಾಡಿ, ಹಿಂದೆ ಶಿಷ್ಯರು ತಮ್ಮ ಗುರುಗಳನ್ನು ಶಾಲಾರಂಭಕ್ಕೆ ತಳಿರು ತೋರಣ ಹಾಕಿ ಬರಮಾಡಿಕೊಳ್ಳುತ್ತಿದ್ದರು. ಈಗ ಪರಿಸ್ಥಿತಿ ಬದಲಾಗಿದ್ದು, ಶಿಕ್ಷಕರೆ ತೋರಣ ಕಟ್ಟಿ ಶಾಲೆಯ ಬಾಗಿಲಿನಲ್ಲಿ ಮಕ್ಕಳಿಗೆ ಕೈಮುಗಿದು ಒಳಗೆ ಬನ್ನಿ ಎಂದು ಕರೆಯುವ ಸ್ಥಿತಿ ನಿರ್ಮಾಣವಾಗಿದೆ. ಮಕ್ಕಳ ಹಕ್ಕು ರಕ್ಷಣೆ ಬಗ್ಗೆ ಒತ್ತು ಕೊಡುವ ಭರಾಟೆಯಲ್ಲಿ ಶಿಕ್ಷಕ ಸಮೂಹದ ಹಕ್ಕು ಕಿತ್ತುಕೊಳ್ಳಲಾಗುತ್ತಿದೆ. ಶಾಲೆಗಳಲ್ಲಿ ಪಾಠ ಸಿಗುತ್ತಿದೆಯೆ ಹೊರತು ಜ್ಞಾನ ಸಿಗುತ್ತಿಲ್ಲ. ಅಂಕವನ್ನು ಮಾನದಂಡವಾಗಿ ಇರಿಸಿಕೊಂಡು ನೀಡುವ ಶಿಕ್ಷಣ, ಅದನ್ನು ಪಡೆಯುವ ಮಕ್ಕಳು ಯಾವತ್ತೂ ಜ್ಞಾನವಂತರಾಗಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿದರು.
ಅಧ್ಯಕ್ಷತೆ ವಹಿಸಿದ್ದ ಅಖಿಲ ಹವ್ಯಕ ಮಹಾಸಭಾ ಅಧ್ಯಕ್ಷ ಡಾ.ಗಿರಿಧರ ಕಜೆ ಮಾತನಾಡಿ, ಮನೆಗಳಲ್ಲಿ ಶ್ರೀಮಂತಿಕೆ ಇಲ್ಲದೆ ಹೋದರೂ ಜ್ಞಾನದಲ್ಲಿ ಹವ್ಯಕ ಸಮೂಹ ಶ್ರೀಮಂತವಾಗಿದೆ. ಶೈಕ್ಷಣಿಕ ಕ್ಷೇತ್ರವನ್ನು ಶ್ರೀಮಂತಗೊಳಿಸುವಲ್ಲಿ ಹವ್ಯಕ ಶಿಕ್ಷಕ ಸಮೂಹದ ಕೊಡುಗೆ ಅನನ್ಯವಾದುದು ಎಂದು ಹೇಳಿದರು.ಕೇಂದ್ರ ಸಾಂಬಾರು ಮಂಡಳಿ ನಿರ್ದೇಶಕರಾಗಿ ನೇಮಕವಾಗಿರುವ ಪ್ರಸನ್ನ ಕೆರೆಕೈ ಅವರನ್ನು ಸನ್ಮಾನಿಸಲಾಯಿತು. ಮಹಾಸಭಾದ ಉಪಾಧ್ಯಕ್ಷರಾದ ಆರ್.ಎಂ.ಹೆಗಡೆ ಬಾಳೆಸರ, ಶ್ರೀಧರ್ ಭಟ್ ಕೆಕ್ಕಾರು, ಪ್ರಧಾನ ಕಾರ್ಯದರ್ಶಿ ವೇಣು ವಿಘ್ನೇಶ ಸಂಪಾ ಉಪಸ್ಥಿತರಿದ್ದರು. ತಿಮ್ಮಪ್ಪ ಎಂ.ಎಂ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ದತ್ತಾತ್ರೇಯ ಭಟ್ ವಂದಿಸಿದರು. ಗಜಾನನ ಎಂ.ಎನ್., ಸುಬ್ರಹ್ಮಣ್ಯ ನಿರೂಪಿಸಿದರು.