ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ
ಪಟ್ಟಣದ ಹೇಮಗಿರಿ ರಸ್ತೆಯ ಶ್ರೀಚೌಡೇಶ್ವರಿ ದೇವಾಲಯದಲ್ಲಿ ತಾಯಿ ಚೌಡೇಶ್ವರಿ ಅಮ್ಮನವರ ದೇವಾಲಯದ 8ನೇ ವರ್ಷದ ವಾರ್ಷಿಕೋತ್ಸವ ಸಂಭ್ರಮದಿಂದ ನಡೆಯಿತು.ದೊಡ್ಡಬಳ್ಳಾಪುರದ ತಪಸಿಹಳ್ಳಿಯ ನೇಕಾರ ತೊಗಟವೀರ ಗುರು ಪೀಠದ ಪೀಠಧ್ಯಕ್ಷ ಶ್ರೀದಿವ್ಯ ಜ್ಞಾನನಂದಗಿರಿ ಸ್ವಾಮೀಜಿ ಸಾನಿಧ್ಯದಲ್ಲಿ ತಾಯಿ ಚೌಡೇಶ್ವರಿ ದೇವಿ ಶಿಲಾ ಮೂರ್ತಿಗೆ ವಿಶೇಷ ಪೂಜೆ ಹಾಗೂ ಉತ್ಸವ ಮೂರ್ತಿ ಪ್ರಾಕಾರೋತ್ಸವ ಆಚರಣೆಗಳು ನಡೆದವು.
ಈ ವೇಳೆ ದಿವ್ಯ ಜ್ಞಾನಾನಂದ ಸ್ವಾಮೀಜಿ ಮಾತನಾಡಿ, ಇಂದಿನ ಒತ್ತಡದ ಜೀವನದಲ್ಲಿ ದೇವರು ಮತ್ತು ಧರ್ಮದ ಮಾರ್ಗದಲ್ಲಿ ಸಾಗುವುದರಿಂದ ಮನಸ್ಸಿಗೆ ಶಾಂತಿ, ನೆಮ್ಮದಿ ದೊರಕುತ್ತದೆ. ದೈವ ಕೃಪೆಯಿಂದ ಹಿಡಿದ ಕಾರ್ಯದಲ್ಲಿ ಯಶಸ್ಸು ದೊರೆಕುತ್ತದೆ ಎಂದರು.ಸಾಧನೆ ಮಾಡಲು ಭಕ್ತಿ ಮಾರ್ಗ ತುಸು ಕಷ್ಟವಾದರೂ ಧರ್ಮದ ಮಾರ್ಗದಲ್ಲಿಯೇ ಸಾಗಿ ಗುರಿ ಮುಟ್ಟಬೇಕು. ಭಗವಂತನ ಒಲುಮೆಗೆ ಆಡಂಬರದ ಪೂಜೆ ಪುರಸ್ಕಾರಗಳು ಬೇಕಾಗಿಲ್ಲ. ನಿಜವಾದ ಭಕ್ತಿ ಹಾಗೂ ಶ್ರದ್ಧೆಯಿಂದ ಪೂಜಿಸಿ ಆರಾಧಿಸಿದರೆ ಭಗವಂತನು ಒಲಿಯುತ್ತಾನೆ. ಆದ್ದರಿಂದ ಮಾನವನು ತನ್ನಲ್ಲಿನ ಕೀಳರಿಮೆ ಅಳಿಸಿಹಾಕಿ ಸಮಾಜಮುಖಿಯಾಗಿ ಮುನ್ನಡೆಯಬೇಕು ಎಂದರು.
ಇದೇ ವೇಳೆ ಕವಿ ಮಾರೇನಹಳ್ಳಿ ಲೋಕೇಶ್ ವಿರಚಿತ ಶ್ರೀಚಾಮುಂಡೇಶ್ವರಿ ಭಕ್ತಿ ಗೀತೆಗಳ ಕುರಿತ ಪುಸ್ತಕವನ್ನು ಸ್ವಾಮೀಜಿ ಬಿಡುಗಡೆ ಮಾಡಿದರು. ಕವಿ ಮಾರೇನಹಳ್ಳಿ ಲೋಕೇಶ್ ಮಾತನಾಡಿ, ಶ್ರೀಚೌಡೇಶ್ವರಿ ಅಮ್ಮನವರ ದೇವಾಲಯದ ನೈಜ ಘಟನೆಗಳು ಹಾಗೂ ದೇವಿ ಶಕ್ತಿಯ ಕುರಿತ ವಿಷಯಗಳ ಕುರಿತು ಭಕ್ತಿ ಗೀತೆಗಳನ್ನು ರಚಿಸಲಾಗಿದೆ ಎಂದರು.ಭಕ್ತರು ಭಕ್ತಿ ಗೀತೆಗಳ ಪುಸ್ತಕ ಖರೀದಿ ಮಾಡಿ ದೇವಿಯ ಶಕ್ತಿಯ ಬಗ್ಗೆ ಅರಿವು ಹೊಂದುವ ಮೂಲಕ ಜ್ಞಾನವಂತರಾಗಿ ದ್ವೇಷ ಅಸೂಯೆಯನ್ನು ಹೊಡೆದೋಡಿಸಿ ಪ್ರೀತಿ ಪ್ರೇಮದಿಂದ ಕೂಡಿರುವ ಆರೋಗ್ಯವಂತ ಸಮಾಜದ ನಿರ್ಮಾಣಕ್ಕೆ ನಾಗರಿಕ ಸಮಾಜದ ಪ್ರತಿಯೊಬ್ಬರೂ ಕೈ ಜೋಡಿಸಿ ಕೆಲಸ ಮಾಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಶಾಸಕರ ಸಹೋದರ ಟಿಎಪಿಸಿಎಂಎಸ್ ನಿರ್ದೇಶಕ ಎಚ್.ಟಿ.ಲೋಕೇಶ್, ಸಮಾಜ ಸೇವಕ ಹೊಸಹೊಳಲು ಸೋಮಶೇಖರ್, ನೇಕಾರ ತೊಗಟವೀರ ಕ್ಷೇಮಾಭಿವೃದ್ಧಿ ಟ್ರಸ್ಟಿನ ಪದಾಧಿಕಾರಿಗಳಾದ ಕೆ.ಆರ್. ನಾಗರಾಜಶೆಟ್ಟಿ, ಸಂಘದ ಅಧ್ಯಕ್ಷ ಎಚ್.ಎಂ.ಚಂದ್ರಶೇಖರ್, ಕಾರ್ಯದರ್ಶಿ ಸುರೇಶ್, ನಿರ್ದೇಶಕರಾದ ಕುಮಾರಸ್ವಾಮಿ, ಕೆ.ಸಿ.ವಾಸು, ಕೆ.ಎಚ್.ರಾಮಕೃಷ್ಣ ಮಾಸ್ಟರ್, ಕೆ.ಎಸ್.ಮೋಹನಕುಮಾರ್, ಶಾರದಾ ಗೋಪಿಚಂದ್, ಪರಿಮಳ ನಾಗರಾಜಶೆಟ್ಟಿ, ಎಂಜಿನಿಯರ್ ವೆಂಕಟೇಶ್, ಕೆ.ಆರ್.ಪುಟ್ಟಸ್ವಾಮಿ, ಪ್ರೇಮಕೃಷ್ಣ, ಕೆ.ಎಚ್.ಗೋಪಾಲ್, ಟಿ.ಎಸ್. ಮಂಜುನಾಥ್, ಶ್ರೀರಂಗಪಟ್ಟಣ ರವಿ, ಅರ್ಚಕರಾದ ರವಿ ಶಾಸ್ತ್ರಿ ಸೇರಿದಂತೆ ನೂರಾರು ಭಕ್ತಾದಿಗಳು ಭಾಗವಹಿಸಿದ್ದರು. ದೇವಾಲಯ ವಾರ್ಷಿಕೋತ್ಸವದ ಅಂಗವಾಗಿ ಉಚಿತ ಅನ್ನದಾಸೋಹ ಪ್ರಸಾದ ವಿತರಿಸಲಾಯಿತು.