ಉದ್ಯಮಿಗೆ ಸಾಲಕೊಟ್ಟು ಮನ್ನಾ ಮಾಡಿದರೆ ದೇಶ ನಂ. ಒನ್‌ ಆಗಲ್ಲ

KannadaprabhaNewsNetwork | Published : Mar 9, 2025 1:47 AM

ಸಾರಾಂಶ

ಉದ್ಯಮಿಗಳಿಗೆ ಕೋಟ್ಯಾಂತರ ರು.ಸಾಲ ಕೊಟ್ಟು, ಬಳಿಕ ಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆ ನಂಬರ್ ಒನ್ ಆಗುತ್ತದೆ ಎಂಬುದು ತಪ್ಪು. ಯಾವ ದೇಶದಲ್ಲಿ ಬಡವರ ಆರ್ಥಿಕತೆ ಬೆಳೆಸುವ ಕೆಲಸವಾಗುತ್ತದೆಯೊ ಆ ದೇಶ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತದೆ ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.

ಕನ್ನಡಪ್ರಭ ವಾರ್ತೆ ರಾಮನಗರಉದ್ಯಮಿಗಳಿಗೆ ಕೋಟ್ಯಾಂತರ ರು.ಸಾಲ ಕೊಟ್ಟು, ಬಳಿಕ ಮನ್ನಾ ಮಾಡುವುದರಿಂದ ದೇಶದ ಆರ್ಥಿಕತೆ ನಂಬರ್ ಒನ್ ಆಗುತ್ತದೆ ಎಂಬುದು ತಪ್ಪು. ಯಾವ ದೇಶದಲ್ಲಿ ಬಡವರ ಆರ್ಥಿಕತೆ ಬೆಳೆಸುವ ಕೆಲಸವಾಗುತ್ತದೆಯೊ ಆ ದೇಶ ಆರ್ಥಿಕ ಶಕ್ತಿಯಾಗಿ ಬೆಳೆಯುತ್ತದೆ ಎಂದು ಚಿಂತಕ ಡಾ. ಬಂಜಗೆರೆ ಜಯಪ್ರಕಾಶ್ ಹೇಳಿದರು.ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ರಾಷ್ಟ್ರೀಯ ಜೀವನೋಪಾಯ ಅಭಿಯಾನ, ಜಿಲ್ಲಾ ಕೌಶಲ್ಯ ಮಿಷನ್, ಜಿಲ್ಲಾ ನಗರಾಭಿವೃದ್ಧಿ ಕೋಶ, ನಗರಸಭೆ ಆಶ್ರಯದಲ್ಲಿ ಆಯೋಜಿಸಿದ್ದ ಬೀದಿ ಬದಿ ವ್ಯಾಪಾರಸ್ಥರಿಗೆ ಗುರುತಿನ ಕಾರ್ಡ್ , ವ್ಯಾಪಾರ ಪ್ರಮಾಣ ಪತ್ರ ಹಾಗೂ ಛತ್ರಿ ವಿತರಣೆ, ಮತ್ತು ಸ್ವ ನಿಧಿ ಸೇ ಸಮೃದ್ಧಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕತೆಗೆ ಬಡ ಬೀದಿ ವ್ಯಾಪಾರಿಗಳು ಸೇರಿದಂತೆ ಜನ ಸಾಮಾನ್ಯರ ಕೊಡುಗೆ ದೊಡ್ಡದಿದೆ ಎಂದರು.ದೇಶದ ಆರ್ಥಿಕ ಚೈತನ್ಯ ವೇಗವಾಗಿ ಬೆಳೆಯಬೇಕಾದರೆ ಬಡ ಜನರಿಗೆ ಆರ್ಥಿಕ ಸವಲತ್ತು ನೀಡಬೇಕು. ಶ್ರೀಮಂತರಿಗೆ ಯಾವುದೇ ರೂಪದಲ್ಲಿ ನೀಡುವ ಧನ ಸಹಾಯ ನೀಡಿದರೂ ಅವರು ಹೊಸ ಆರ್ಥಿಕ ಚಟುವಟಿಕೆಯಲ್ಲಿ ಭಾಗವಹಿಸುವುಲ್ಲ. ಅದೇ ಬಡವರಿಗೆ ಆರ್ಥಿಕ ನೆರವು ನೀಡಿದರೆ ಆ ಹಣ ಚಲಾವಣೆಗೆ ಬರುವಂತೆ ಮಾಡಿ ಆರ್ಥಿಕತೆ ಬಲಗೊಳ್ಳುವಂತೆ ಮಾಡುತ್ತಾರೆ ಎಂದು ಹೇಳಿದರು.ರಸ್ತೆ ಬದಿ ವ್ಯಾಪಾರದಿಂದ ಲಕ್ಷಾಂತರ ಜನರ ಕುಟುಂಬ ನಡೆಯುತ್ತಿದೆ. ಮಧ್ಯಮ ವರ್ಗದವರು, ಕಾರ್ಮಿಕರು ಬೀದಿ ಬದಿ ವ್ಯಾಪಾರಿಗಳನ್ನೇ ಅವಲಂಬಿಸಿದ್ದಾರೆ. ದೊಡ್ಡ ನಗರಗಳ ಆರ್ಥಿಕ ವಹಿವಾಟು ಬೀದಿ ವ್ಯಾಪಾರಿಗಳಿಂದಲೇ ನಡೆಯುತ್ತದೆ. ರಸ್ತೆ ಬದಿ ವ್ಯಾಪಾರಿಗಳು ಹಣಕಾಸಿನ ದೃಷ್ಟಿಯಿಂದ ಕಡಿಮೆ ಇದ್ದರೂ ಸಾರ್ವಜನಿಕರಿಗೆ ದೊಡ್ಡ ಸಂಖ್ಯೆಯಲ್ಲಿ ಸಲ್ಲುವ ಮೂಲಕ ದೇಶದ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬುತ್ತಿದ್ದಾರೆ ಎಂದು ತಿಳಿಸಿದರು.ಮರ ಸದಾ ಹಸಿರಾಗಿದ್ದು ಫಲ-ಪುಷ್ಪ ಕೊಡಬೇಕಾದರೆ ಅದರ ಬುಡಕ್ಕೆ ನೀರೆರೆಯಬೇಕೇ ಹೊರತು ನೆತ್ತಿಗಲ್ಲ. ಅದೇ ರೀತಿ, ದೇಶದ ಬುಡ ಅಥವಾ ಬೇರುಗಳಾಗಿರುವ ಜನಸಾಮಾನ್ಯರ ಆರ್ಥಿಕತೆಗೆ ನೀರೆರೆಯುವ ಕೆಲಸವಾದಾಗ ಮಾತ್ರ ಭಾರತ ಅಭಿವೃದ್ಧಿಯ ಶಿಖರ ತಲುಪುತ್ತದೆ. ಇದನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು ಜನಸಾಮಾನ್ಯರ ಆರ್ಥಿಕತೆ ಮತ್ತು ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸಿವೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.ನೀವು ಪಾವತಿಸಿದ ತೆರಿಗೆ ಹಣದಿಂದ ಸರ್ಕಾರ ಉಚಿತ ಸೌಲಭ್ಯಗಳನ್ನು ಕೊಡುತ್ತದೆಯೇ ಹೊರತು, ಬೇರೆಲ್ಲಿಂದಲೋ ತಂದು ಕೊಡುವುದಿಲ್ಲ. ವ್ಯಾಪಾರಿಗಳು ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ತಪ್ಪದೆ ಪಡೆಯಬೇಕು. ನಿಮ್ಮ ಮಕ್ಕಳು ನಿಮ್ಮಂತೆಯೇ ವ್ಯಾಪಾರಿಗಳಾಗಬಾರದು. ಅವರನ್ನು ಚನ್ನಾಗಿ ಓದಿಸಿ ಉನ್ನತ ಸ್ಥಾನಕ್ಕೇರುವಂತೆ ಮಾಡಬೇಕು ಎಂದು ಬಂಜಗೆರೆ ಜಯಪ್ರಕಾಶ್ ಕಿವಿಮಾತು ಹೇಳಿದರು.ನಗರಸಭೆ ಅಧ್ಯಕ್ಷ ಕೆ.ಶೇಷಾದ್ರಿ (ಶಶಿ) ಮಾತನಾಡಿ, ಬೆಳಿಗ್ಗೆಯಿಂದ ರಾತ್ರಿವರೆಗೆ ಬಿಸಿಲು, ಮಳೆ, ಗಾಳಿ, ಧೂಳು ಲೆಕ್ಕಿಸದೆ ಪ್ರಾಮಾಣಿಕವಾಗಿ ಕೆಲಸ ಮಾಡುವುದರ ಜತೆಗೆ, ಆರ್ಥಿಕತೆಗೆ ಶಕ್ತಿ ತುಂಬುವ ಕೆಲಸವನ್ನು ಬೀದಿ ವ್ಯಾಪಾರಿಗಳು ಮಾಡುತ್ತಿದ್ದಾರೆ ಎಂದರು.ವ್ಯಾಪಾರಿಗಳು ಪಾದಚಾರಿ ಮಾರ್ಗ ಹಾಗೂ ರಸ್ತೆ ಅತಿಕ್ರಮಿಸಿಕೊಂಡಿದ್ದಾರೆ. ಅವರನ್ನು ತೆರವುಗೊಳಿಸಿ ಎಂಬ ಒತ್ತಡ ನನಗೆ ಬಂತು. ಆದರೆ, ನಿಮ್ಮ ಬದುಕಿಗೆ ತೊಂದರೆಯಾಗದಂತೆ ನಿಮ್ಮ ಸಹಕಾರದೊಂದಿಗೆ ಬೀದಿ ವ್ಯಾಪಾರಕ್ಕೆ ಉತ್ತಮ ಅವಕಾಶ ಕಲ್ಪಿಸುವ ದೃಢಸಂಕಲ್ಪ ಮಾಡಿದ್ದೇವೆ ಎಂದು ಹೇಳಿದರು.ವ್ಯಾಪಾರಿಗಳು ಸ್ವಚ್ಛತೆಗೆ ಒತ್ತು ನೀಡಬೇಕು. ತಾವಿರುವ ಜಾಗವನ್ನು ಒತ್ತುವರಿ ಮಾಡಬಾರದು. ಶಾಶ್ವತ ಅಂಗಡಿಯ ಕಟ್ಟಡ ನಿರ್ಮಿಸದೆ ತಳ್ಳುಗಾಡಿಯಲ್ಲಿ ವ್ಯಾಪಾರ ಮಾಡಬೇಕು. ಅದಕ್ಕಾಗಿ, ವ್ಯಾಪಾರದ ಸ್ಥಳದಲ್ಲಿ ಪಟ್ಟಿ ಹಾಕಲಾಗುತ್ತದೆ. ಅದನ್ನು ಮೀರಿದರೆ ಕ್ರಮ ಖಚಿತ. ನಿಮ್ಮ ಬೇಡಿಕೆಯಂತೆ ವ್ಯಾಪಾರಕ್ಕೆ ಪರ್ಯಾಯ ಸ್ಥಳ ಹುಡುಕುವ ಪ್ರಕ್ರಿಯೆ ನಡೆಯುತ್ತಿದೆ. ಫುಡ್ ಕೋರ್ಟ್ ಸ್ಥಾಪಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ತಿಳಿಸಿದರು.ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ ಮಾತನಾಡಿ, ರಾಜಕಾರಣಿ ತನ್ನನ್ನು ಬಿಟ್ಟು ಜನರ ಉದ್ಧಾರದ ಬಗ್ಗೆ ಆಲೋಚನೆ ಮಾಡುವ ರಾಜಕಾರಣಿಗಳು ಬೇಕು. ಆ ನಿಟ್ಟಿನಲ್ಲಿ ಶೇಷಾದ್ರಿ ಕೆಲಸ ಮಾಡುತ್ತಿದ್ದಾರೆ. ನೀವು ಸ್ವಚ್ಛತೆ ಕಾಪಾಡಿಕೊಂಡರೆ ನಗರ ಸ್ವಚ್ಛವಾಗಿರುತ್ತದೆ ಎಂದರು.ಗಣೇಶ್ ಜ್ಯುವೆಲರ್ಸ್ ಮಾಲೀಕ ಲಕ್ಷ್ಮಣ್ ರಸ್ತೆ ಬದಿ ವ್ಯಾಪಾರಿಗಳಿಗೆ ವೈಯಕ್ತಿಕವಾಗಿ ವ್ಯಾಪಾರದ ಛತ್ರಿಗಳನ್ನು ಉಚಿತವಾಗಿ ವಿತರಣೆ ಮಾಡಿದರು. ಜತೆಗೆ ಗುರುತಿನ ಚೀಟಿ ವಿತರಿಸಲಾಯಿತು.ಕೆಎಂಎಫ್ ಅಧ್ಯಕ್ಷ ಪಿ.ನಾಗರಾಜು ಮಾತನಾಡಿದರು. ನಗರಸಭೆ ಉಪಾಧ್ಯಕ್ಷೆ ಆಯಿಷಾ ಬಾನು, ಸ್ಥಾಯಿ ಸಮಿತಿ ಅಧ್ಯಕ್ಷ ಫೈರೋಜ್ ಪಾಷ, ಸದಸ್ಯರಾದ ನಿಜಾಮುದ್ದೀನ್, ನರಸಿಂಹ, ಪಾರ್ವತಮ್ಮ, ಸೋಮಶೇಖರ್ (ಮಣಿ), ಆಯುಕ್ತ ಜಯಣ್ಣ, ಮುಖಂಡ ಅತಾ ಉಲ್ಲಾ, ಬೀದಿ ಬದಿ ವ್ಯಾಪಾರಿಗಳ ಸಂಘದ ಅಧ್ಯಕ್ಷ ಬೈರಲಿಂಗಯ್ಯ, ಮಹದೇವಯ್ಯ ಉಪಸ್ಥಿತರಿದ್ದರು.

Share this article