ಶಿವಮೊಗ್ಗ: ಸೋಮಾರಿತನ ಇದ್ದರೆ ಏನನ್ನೂ ಮಾಡಲು ಸಾಧ್ಯವಿಲ್ಲ. ನಾವು ಎಷ್ಟೇ ಓದಿರಲಿ, ಏನೇ ಸಾಧನೆ ಮಾಡಿರಲಿ, ನಮ್ಮಲ್ಲಿ ಸೋಮಾರಿತನ ಜೊತೆಗೂಡಿದಾಗ ಏನನ್ನೂ ಮಾಡಲು ಸಾಧ್ಯವಿಲ್ಲ ಎಂದು ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಜಗದ್ಗುರು ಡಾ.ನಿರ್ಮಲಾನಂದನಾಥ ಸ್ವಾಮೀಜಿ ಹೇಳಿದರು.
ಆದಿಚುಂಚನಗಿರಿ ಮಹಾಸಂಸ್ಥಾನ ಆರಂಭಗೊಂಡು ಐವತ್ತು ವರ್ಷ ಆಗಿದ್ದು, ಕೇವಲ ಮಠದ, ಸಮಾಜದ ಕಾರ್ಯಕ್ಕೆ ಸೀಮಿತವಾಗದೆ, ನಮ್ಮ ಮಕ್ಕಳಿಗೆ ಅತ್ಯುತ್ತಮವಾದ ಶಿಕ್ಷಣ ನೀಡಬೇಕೆಂಬ ಉದ್ದೇಶದಿಂದ ಆರಂಭಗೊಂಡ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ನಿಜವಾಗಿಯೂ ಈಗ ರಾಜ್ಯಾದ್ಯಂತ ಲಕ್ಷಾಂತರ ಸಾಧಕರನ್ನು ಹೊರತಂದಿದೆ. ಲಕ್ಷಾಂತರ ಮಕ್ಕಳು ಇಲ್ಲಿ ಕಲಿಯುತ್ತಿದ್ದಾರೆ ಎಂದರು.
ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ ಮೊಟ್ಟ ಮೊದಲ ಬಾರಿಗೆ ಖಾಸಗಿ ರೂಪದಲ್ಲಿ ಕೃಷಿ ವಿಜ್ಞಾನ ಕಾಲೇಜನ್ನು ಆರಂಭಿಸಿದ್ದು, ಅದರ ಮೂಲಕ ನಿತ್ಯ ನಿರಂತರ ಕೃಷಿ ಸಂಶೋಧನೆಗಳು ಹೆಚ್ಚುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ ಎಂದರು.45 ವರ್ಷಗಳ ಹಿಂದೆ ಸ್ವಾಮಿ ವಿವೇಕಾನಂದರು ಬಡ ಭಾರತದ ಬಗ್ಗೆ ಅತ್ಯಂತ ವಿವರಣಾತ್ಮಕವಾಗಿ ಹೊಗಳಿದ್ದರು. ಅದು ಈಗ ಸಾಧನೆಯಾಗಿದೆ. ಬಡಭಾರತವಾಗಿದ್ದ ನಮ್ಮ ದೇಶ ಇಂದು ವಿಶ್ವದಲ್ಲೇ ನಾಲ್ಕನೇ ಪ್ರಮುಖ ರಾಷ್ಟ್ರವಾಗಿರುವುದು ನಮ್ಮೆಲ್ಲರ ಹಿರಿಮೆಯ ಸಂಗತಿ. ತಾಯಿ ಹಾಗೂ ಹೆಣ್ಣು ಮಕ್ಕಳಿಗೆ ಗೌರವ ಕೊಡುವ ಭಾರತ ಇಡೀ ವಿಶ್ವದಲ್ಲೇ ಎಲ್ಲ ದೇಶಗಳಿಗೂ ಮಾದರಿಯಾಗಿದೆ ಎಂದು ಹೇಳಿದರು.
ಡಾ.ನಿರ್ಮಲಾನಂದನಾಥ ಶ್ರೀ
ಸಾಮಾಜಿಕ ಮತ್ತು ಶೈಕ್ಷಣಿಕ ಕ್ಷೇತ್ರದಿಂದ ಗುಂಡಪ್ಪ ಗೌಡ, ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಿಂದ ಪ್ರೊ.ಕೆ.ಪುಟ್ಟ ರಂಗಪ್ಪ, ವಕೀಲ ಅಶೋಕ್ ಜಿ.ಭಟ್, ಉದ್ಯಮಿ ಎಂ.ಜಿ.ಬಾಲಕೃಷ್ಣ, ರಾಜ್ಯ ಮತ್ತು ಕೇಂದ್ರ ಸರ್ಕಾರದ ವಿಶೇಷ ಅಧಿಕಾರಿ ಡಿ.ರವಿಕುಮಾರ್, ಕೃಷಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ, ಡಾ.ಎಸ್.ವಿ.ಸುರೇಶ್, ಎಂ.ನಾಗರಾಜ್ ಅವರ ಸಾಧನೆಯನ್ನು ಪರಿಗಣಿಸಿ ಬುಧವಾರ ಪರಮ ಪೂಜ್ಯರಿಂದ ಗೌರವಿಸಲಾಯಿತು. ಇದೇ ವೇಳೆ ಕೃಷಿ ವಿಜ್ಞಾನ ಕ್ಷೇತ್ರದಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ಪಡೆದ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳಿಗೆ ಪೂಜ್ಯರಿಂದ ಸನ್ಮಾನಿಸುವ ಕಾರ್ಯಕ್ರಮವೂ ನಡೆಯಿತು.