ದೇವಾಲಯದಲ್ಲಿ ಮೂರ್ತಿ ಇದ್ದರೆ ದೇವಾಲಯಕ್ಕೆ, ಅಡುಗೆಯಲ್ಲಿ ಉಪ್ಪು ಇದ್ದರೆ ಅಡುಗೆಗೆ ಬೆಲೆ ಬರುತ್ತದೆ. ಮಾನವನಲ್ಲಿ ಮಾನವೀಯತೆ ಇದ್ದರೆ ಮಾತ್ರ ಮಾನವನಿಗೆ ಬೆಲೆ ಇರುತ್ತದೆ. ಬಾಹ್ಯದಿಂದ ಅಂದವಾಗಿದ್ದರೆ ಸಾಲದು ಅಂತರಂಗದಲ್ಲಿ ಅಂದವಾಗಿದ್ದರೆ ಮಾನವನಾಗಲು ಸಾಧ್ಯ ಎಂದು ಜಮಂಡಿಯ ಓಲೇಮಠದ ಆನಂದ ದೇವರು ನುಡಿದರು.
ಕನ್ನಡಪ್ರಭ ವಾರ್ತೆ ಜಮಖಂಡಿ
ದೇವಾಲಯದಲ್ಲಿ ಮೂರ್ತಿ ಇದ್ದರೆ ದೇವಾಲಯಕ್ಕೆ, ಅಡುಗೆಯಲ್ಲಿ ಉಪ್ಪು ಇದ್ದರೆ ಅಡುಗೆಗೆ ಬೆಲೆ ಬರುತ್ತದೆ. ಮಾನವನಲ್ಲಿ ಮಾನವೀಯತೆ ಇದ್ದರೆ ಮಾತ್ರ ಮಾನವನಿಗೆ ಬೆಲೆ ಇರುತ್ತದೆ. ಬಾಹ್ಯದಿಂದ ಅಂದವಾಗಿದ್ದರೆ ಸಾಲದು ಅಂತರಂಗದಲ್ಲಿ ಅಂದವಾಗಿದ್ದರೆ ಮಾನವನಾಗಲು ಸಾಧ್ಯ ಎಂದು ಜಮಂಡಿಯ ಓಲೇಮಠದ ಆನಂದ ದೇವರು ನುಡಿದರು.
ತಾಲೂಕಿನ ಹುಲ್ಯಾಳ ಗ್ರಾಮದ ಗುರುದೇವಾಶ್ರಮ ಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳು 4ನೇ ಭಾನುವಾರ ಹಮ್ಮಿಕೊಳ್ಳುವ ಶ್ರೀಗುರುದೇವ ಸತ್ಸಂಗ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮೊದಲು ಮಾನವನಾಗು ವಿಷಯ ಕುರಿತು ಅನುಭಾವ ಹಂಚಿಕೊಂಡು ಆಶೀರ್ವಚನ ನೀಡಿದರು.
ಯಾರನ್ನೂ ದ್ವೇಷಿಸಬಾರದು. ಸ್ವಾರ್ಥಪರ ಪ್ರೀತಿ ಇಟ್ಟುಕೊಳ್ಳಬಾರದು. ಬೆಂಕಿ ಹಚ್ಚಿದವರ ಮನೆಗೂ ಜ್ಯೋತಿ ಹಚ್ಚುವ ಕೆಲಸ ಮಾಡುವವರ ಮನೆಯನ್ನೂ ಸಹ ಭಗವಂತ ಬೆಳಗುತ್ತಾನೆ. ಭಗವಂತನ ಕ್ಯಾಮೆರಾ ಕಣ್ಣು ಸದಾ ನೋಡುತ್ತಿರುತ್ತದೆ ಎಂಬ ಅರಿವು ಇಟ್ಟುಕೊಂಡು ಸ್ನೇಹಭಾವದಿಂದ ಬದುಕಿದರೇ ಭಗವಂತನ ಆಶೀರ್ವಾದ ಆಗುತ್ತದೆ ಎಂದು ತಿಳಿಸಿದರು.
ಜಗತ್ತಿನಲ್ಲಿ ಒಳ್ಳೆಯದನ್ನು ಮಾಡುವವರಿಗೆ ಒಳ್ಳೆಯದು, ಕೆಟ್ಟದ್ದನ್ನು ಮಾಡುವವರಿಗೆ ಕೆಟ್ಟದ್ದನ್ನು ಜಗತ್ತು ಕೊಡುತ್ತದೆ. ಆ ನಿಟ್ಟಿನಲ್ಲಿ ಜಗತ್ತು ವಿಜಯಪುರದ ಗೋಲಗುಮ್ಮಟ ಇದ್ದಂತೆ ಎಂದರು.
ಗುರುದೇವಾಶ್ರಮದ ಹರ್ಷಾನಂದ ಸ್ವಾಮೀಜಿ ನೇತೃತ್ವ ವಹಿಸಿ ಮಾತನಾಡಿ, ಅತಿಯಾಸೆ ಮತ್ತು ದುರಾಸೆ ಬಿಟ್ಟರೆ ಮಾನವರಾಗಲು ಸಾಧ್ಯ. ಪುಸ್ತಕಗಳನ್ನು ಓದುವುದರಿಂದ ಮಾನವರಾಗಬಹುದು. ಪುಸ್ತಕಗಳು ಮಾನವರನ್ನಾಗಿಸುತ್ತವೆ ಎಂದು ಆಶೀರ್ವಚನ ನೀಡಿದರು.
ಬಸವಜ್ಯೋತಿ ಶಿಕ್ಷಣ ಸಮೂಹ ಸಂಸ್ಥೆಗಳ ಆಡಳಿತಾಧಿಕಾರಿ ಪ್ರೊ.ಬಸವರಾಜ ಕಡ್ಡಿ ಮಾತನಾಡಿ, ಸತ್ಯ, ಸಮತೆ, ಪ್ರಾಮಾಣಿಕತೆ, ಸಹಕಾರ, ವೈಚಾರಿಕತೆ, ನಯವಿನಯ ಎಂಬ ಸಂಸ್ಕಾರಗಳನ್ನು ಹೊಂದಿದಾಗ ಅಂತರಂಗ ಪರಿಶುದ್ಧವಾಗಿ ಬಹಿರಂಗ ಕ್ರಿಯೆಗಳು ಪರಿಶುದ್ಧಗೊಳ್ಳುತ್ತವೆ. ಆಗ ದೈವತ್ವದ ಅನುಭವವಾಗಿ ಮಾನವ ಶರಣನಾಗುತ್ತಾನೆ ಎಂದರು.
ಪಶುವೈದ್ಯ ಡಾ.ಹನಮಂತ ಬಟಕುರ್ಕಿ ಅವರು ವಿರಚಿತ ಅನುಭವದ ಅಮೃತವಾಣಿ ಆಧುನಿಕ ವಚನಗಳ ಕೃತಿ ಲೋಕಾರ್ಪಣೆ ಮಾಡಲಾಯಿತು. ನಿವೃತ್ತ ಶಿಕ್ಷಕ ಗುರುನಾಥ ಸುತಾರ ಕೃತಿ ಪರಿಚಯಿಸಿದರು.
ಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸುಗೌಡ ಪಾಟೀಲ, ಸಿದ್ದು ಉಪ್ಪಲದಿನ್ನಿ, ಪರಮೇಶ್ವರ ತೇಲಿ, ಶಿವಾನಂದ ಬಾಡನವರ, ರವಿ ಹುಲ್ಯಾಳ ಸಂಗೀತ ಸೇವೆ ಸಲ್ಲಿಸಿದರು. ಬಸವಜ್ಯೋತಿ ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿ, ಅತಿಥಿಗಳನ್ನು ಪರಿಚಯಿಸಿದರು. ಸಂಗಮೇಶ ತೆಲಸಂಗ ನಿರೂಪಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.