ಹಾನಗಲ್ಲ: ಸುಮ್ಮ ಸುಮ್ಮನೆ ತಡವಿದರೆ ಹಿಂದೂ ಸುಮ್ಮನಿರಲ್ಲ, ಹಿಂದುತ್ವ ಹತ್ತಿಕ್ಕಿದಷ್ಟು ಪುಟಿದೇಳುತ್ತದೆ, ಧರ್ಮಕ್ಕೆ ಧಕ್ಕೆ ಬಂದರೆ ವಿರೋಧಿಗಳನ್ನು ನಾಶ ಮಾಡಲು ಸಿದ್ಧ ಎಂದು ಹಿರೇಹಡಗಲಿ ಸಮತಾ ಮಠದ ಅಭಿನವ ಹಾಲವೀರಪ್ಪಾಜಿ ಸ್ವಾಮೀಜಿ ಎಚ್ಚರಿಸಿದರು.
ಅಗಡಿ ಅಕ್ಕಿಮಠದ ಗುರುಲಿಂಗ ಶ್ರೀಗಳು ಮಾತನಾಡಿ, ವಿಘ್ನನಿವಾರಕನಿಗೆ ವಿಘ್ನ ಒಡ್ಡುವ ಯತ್ನ ಫಲಿಸದು. ಹಿಂದೂ ಕಾರ್ಯಕ್ರಮಗಳಿಗೆ ಅಡ್ಡಿ ಮಾಡುವ ಸಂಪ್ರದಾಯ ಒಳ್ಳೆಯದಲ್ಲ. ಹಿಂದುತ್ವಕ್ಕೆ ಜಯ ಶತ ಸಿದ್ಧ. ಹಿಂದು ಧರ್ಮಕ್ಕೆ ಸನಾತನ ಇತಿಹಾಸವಿದೆ. ಧರ್ಮಕ್ಕಾಗಿ ಹಿಂದುಗಳೆಲ್ಲ ಒಟ್ಟಾಗಿರೋಣ ಎಂದರು.
ಬಮ್ಮನಹಳ್ಳಿ ಶಿವಯೋಗೀಶ್ವರ ಸ್ವಾಮೀಜಿ, ಅಕ್ಕಿಆಲೂರು ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಹಿಂದೂ ಸಮಾಜಕ್ಕೆ ನ್ಯಾಯ ಸಿಗಲು ನಮ್ಮೆಲ್ಲರ ಒಟ್ಟಾರೆ ಹೋರಾಟ ಬೇಕು. ಭಾರತ ಹಿಂದೂ ರಾಷ್ಟ್ರ. ಹಿಂದು ಹಬ್ಬಗಳಿಗಷ್ಟೇ ತೊಡಕು ಮಾಡುವ ಸರ್ಕಾರಗಳ ಉದ್ದೇಶ ಅರ್ಥವಾಗುತ್ತಿಲ್ಲ. ಹಿಂದುತ್ವ ಹಾಗೂ ದೇಶಭಕ್ತಿಗೆ ಧಕ್ಕೆ ಮಾಡುವ ಯತ್ನ ಒಳ್ಳೆಯದಲ್ಲ ಎಂದರು.ವಿರಾಟ ಹಿಂದು ಮಹಾಗಣಪತಿ ಸಂಘಟನೆ ಸಂಚಾಲಕ ರವಿ ಪುರೋಹಿತ ಪ್ರಾಸ್ತಾವಿಕ ಮಾತನಾಡಿದರು. ಕೂಡಲದ ಗುರುಮಹೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು, ಬಾಳೂರು ಅಡವಿಸ್ವಾಮಿ ಮಠದ ಕುಮಾರಮಹಾಸ್ವಾಮಿಗಳು ಹಾಗೂ ಅಭಿನವ ಕುಮಾರಸ್ವಾಮಿಗಳು, ಅಕ್ಕಿಆಲೂರು ಶಿವಬಸವಮಹಾಸ್ವಾಮಿಗಳು, ಗುಂಡೂರಿನ ಸೇವಾಲಾಲ ಗುರುಪೀಠದ ತಿಪ್ಪೇಶ್ವರ ಮಹಾಸ್ವಾಮಿಗಳು, ತಿಳವಳ್ಳಿ ನಿರಂಜನ ಮಹಾಸ್ವಾಮಿಗಳು, ಗುಬ್ಬಿ ನಂಜುಂಡ ಪಂಡಿತಾರಾಧ್ಯ ಶಿವಾಚಾರ್ಯರು ಸಮ್ಮುಖವಹಿಸಿದ್ದರು. ಹಿಂದೂ ಧ್ವಜ ಅಭಿಯಾನ ಸಮಿತಿ ಅಧ್ಯಕ್ಷ ಸಿದ್ದಲಿಂಗಣ್ಣ ಕಮಡೊಳ್ಳಿ, ಮಾಜಿ ಶಾಸಕ ಶಿವರಾಜ ಸಜ್ಜನ ಹಾಗೂ ಗಣ್ಯರು, ಯುವ ಕಾರ್ಯಕರ್ತರು, ಮಹಿಳೆಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.
ನಿರ್ಬಂಧ ತೆರವು: ಅಕ್ಟೋಬರ್ ೪ರಂದು ಗಣಪತಿ ವಿಸರ್ಜನೆ ಧರ್ಮಸಭೆಗೆ ಬರಬೇಕಾದ ಹಿರೇಹಡಗಲಿ ಸಮತಾ ಮಠದ ಅಭಿನವ ಹಾಲವೀರಪ್ಪಾಜಿ ಸ್ವಾಮೀಜಿಗಳಿಗೆ ಜಿಲ್ಲಾಡಳಿತ ನಿರ್ಬಂಧ ಹೇರಿತ್ತು. ಸಮಿತಿ ಆ ಕಾರಣಕ್ಕಾಗಿ ಸ್ವಾಮೀಜಿ ಆಗಮನದವರೆಗೆ ಗಣಪತಿ ವಿಸರ್ಜನೆ ಇಲ್ಲ ಎಂದು ಘೋಷಣೆ ಮಾಡಿತ್ತು. ಶ್ರೀಗಳ ಮೇಲಿನ ನಿರ್ಬಂಧ ತೆರವಾದ ಕಾರಣ ಅ.೭ರಂದು ಸಂಜೆ ಧರ್ಮ ಸಭೆ ನಡೆಯಿತು.