ಕಿಕ್ಕೇರಿ: ಜನನ, ಮರಣದ ನಡುವಿನ ಜೀವನದಲ್ಲಿ ಕನಿಷ್ಠ ಕಾನೂನು ಅರಿತು ಬದುಕಿದರೆ ನೆಮ್ಮದಿ ಬದುಕು ಸಾಧ್ಯವಾಗಲಿದೆ ಎಂದು ಪ್ರಾಂಶುಪಾಲ ಎಸ್.ದೊರೆಸ್ವಾಮಿ ತಿಳಿಸಿದರು.
ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಏರ್ಪಡಿಸಿದ್ದ ವಿಶ್ವ ಮಾನವ ಹಕ್ಕು ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ಶಿಕ್ಷಣ ಮಕ್ಕಳ ಹಕ್ಕಾಗಿದೆ. ಓದುವ ಕೈಯಲ್ಲಿ ಪುಸ್ತಕದ ಬದಲು ದುಡಿಯವ ಕೈಗಳಾಗಿ ಬಳಸಿಕೊಳ್ಳುವುದು ಅಪರಾಧ. ಮಕ್ಕಳ ಭವಿಷ್ಯಕ್ಕೆ ಶಿಕ್ಷಣ ಕಡ್ಡಾಯ. ಶಿಕ್ಷಣದಿಂದ ಸುಶಿಕ್ಷಿತರಾಗಿ ಯುವಕರು ಬದುಕಬಹುದು ಎಂದರು.ಬಾಬಾ ಸಾಹೇಬ್ ಡಾ.ಅಂಬೇಡ್ಕರ್ ಅವರ ಸಂವಿಧಾನ ಬದುಕಿಗೆ ಭಗವದ್ಗೀತೆಯಾಗಿ. ಕಾನೂನು ಗೌರವಿಸದೆ ಯಾರು ಬದುಕಲು ಸಾಧ್ಯವಾಗಲಾರದು. ಬದುಕಿನ ಕಹಿ ಉಂಡು ಬಡತನ, ವರ್ಣಬೇಧದಂತಹ ಹಲವು ಕಹಿ ಸಂಕಷ್ಟಗಳನ್ನು ಅನುಭವಿಸಿ ಅಪ್ಪಟ ಚಿನ್ನವಾಗಿ ಬೆಳೆದವರು ಬಾಬಾ ಸಾಹೇಬ ಅಂಬೇಡ್ಕರ್. ಇವರ ಸಮ ಸಮಾಜದ ದೂರದೃಷ್ಟಿ ಫಲವಾಗಿ ವಿಶ್ವವೇ ಮೆಚ್ಚುವ ಸಂವಿಧಾನ ನಮ್ಮದಾಗಿದೆ ಎಂದರು.
ಕನಿಷ್ಠವಾದರೂ ಮೂಲ ಕಾನೂನು ಅರಿಯಲು ವಿದ್ಯಾರ್ಥಿಗಳು ಮುಂದಾಗಬೇಕು. ಶಿಕ್ಷಣ ಹಕ್ಕು, ಉದ್ಯೋಗ, ಬದುಕುವ ಹಕ್ಕು, ಹಿರಿಯ ನಾಗರಿಕರನ್ನು ಗೌರವಿಸುವ, ಸಾಮಾಜಿಕ ಆಸ್ತಿ ಸಂರಕ್ಷಣೆ, ಮೌಢ್ಯ ಬಿತ್ತಿ ವಂಚಿಸುವ, ಮೋಸ, ವಂಚನೆ ಮಾಡಿ ಬದುಕುವ ಅಸಂಖ್ಯಾತ ಸಮಸ್ಯೆಗಳ ಪರಿಹಾರಕ್ಕೆ ಸಂವಿಧಾನದಡಿ ಕಾನೂನಿನಲ್ಲಿ ಪರಿಹಾರ, ಶಿಕ್ಷೆ ಎಲ್ಲವೂ ಇದೆ. ಸಂವಿಧಾನ ಹಕ್ಕುಗಳನ್ನು ತಿಳಿಯಬೇಕು ಎಂದರು.ಮಕ್ಕಳನ್ನು ವಿದ್ವಂಸಕ ಕೃತ್ಯಕ್ಕೆ ಬಳಸಿಕೊಳ್ಳುವುದು. ಹೋಟೆಲ್, ಕಾರ್ಖಾನೆಗಳಲ್ಲಿ ದುಡಿಸಿಕೊಳ್ಳುವುದು ಅಪರಾಧ. ಮಕ್ಕಳ ಶಿಕ್ಷಣ ಹಕ್ಕು, ಭವಿಷ್ಯ ಕಸಿಯದಂತೆ ನೋಡಿಕೊಳ್ಳಬೇಕು. ಸುಶಿಕ್ಷಿತ ಸಮಾಜ ನಿರ್ಮಾಣಕ್ಕೆಅಡ್ಡಿಪಡಿಸುವ ಪ್ರತಿಯೊಬ್ಬರಿಗೂ ಶಿಕ್ಷೆ ಇದೆ ಎಂದು ಎಚ್ಚರಿಸಿದರು.
ಎನ್‌ಎಸ್‌ಎಸ್ ಘಟಕಾಧಿಕಾರಿ ಜಿ.ಎಸ್.ಕುಮಾರಸ್ವಾಮಿ, ಉಪನ್ಯಾಸಕರಾದ ಎನ್. ರವೀಂದ್ರ, ಇ.ಎಂ. ಮಂಜುನಾಥ್, ಎಸ್.ಡಿ.ಹರೀಶ್, ಎಂ.ವಿನಾಯಕ, ಜಿ.ರಮೇಶ್, ಎನ್.ಎ.ನಾಗೇಶ್, ಚಂದ್ರಿಕಾ, ವರಲಕ್ಷ್ಮೀ, ಫಜಲ್ ಖಾನ್ ಭಾಗವಹಿಸಿದ್ದರು.