ಧರ್ಮ ಮಾರ್ಗದಲ್ಲಿ ನಡೆದರೆ ಶಾಂತಿ, ನೆಮ್ಮದಿ: ಶಿವರಾತ್ರಿದೇಶಿಕೇಂದ್ರ ಸ್ವಾಮೀಜಿ

KannadaprabhaNewsNetwork | Published : Nov 10, 2024 1:32 AM

ಸಾರಾಂಶ

ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ಮನುಷ್ಯ ಇಂದು ಸದೃಢನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮಿಕ ಭಕ್ತಿಯ ಬೇರುಗಳ ಜೊತೆ ಬದುಕುವ ಪ್ರವೃತ್ತಿ ರೂಢಿಸಿಕೊಂಡಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು.

ಕನ್ನಡಪ್ರಭ ವಾರ್ತೆ ಮಂಡ್ಯ

ಮನುಷ್ಯ ಭಕ್ತಿ, ಶ್ರದ್ಧೆ ಹಾಗೂ ಧರ್ಮ ಮಾರ್ಗದಲ್ಲಿ ನಡೆದಾಗ ಮಾತ್ರ ಶಾಂತಿ ಮತ್ತು ನೆಮ್ಮದಿ ಲಭ್ಯವಾಗುತ್ತದೆ ಎಂದು ಶ್ರೀಕ್ಷೇತ್ರ ಸುತ್ತೂರು ಮಠದ ಪೀಠಾಧ್ಯಕ್ಷ ಶ್ರೀಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಪ್ರಾಯಪಟ್ಟರು.

ನಗರದ ಕಲ್ಲಹಳ್ಳಿಯಲ್ಲಿ ನೂತನವಾಗಿ ನಿರ್ಮಿಸಲಾಗಿದ್ದ ಶ್ರೀಮಂಚಮ್ಮ ದೇವಿ ದೇವಸ್ಥಾನ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿ, ಪ್ರಾಚೀನ ಕಾಲದಿಂದಲೂ ಮನುಷ್ಯ ಶ್ರದ್ಧೆ, ಭಕ್ತಿ, ನಿಷ್ಠೆಯಿಂದ ದೇವರನ್ನು ಪೂಜಿಸಕೊಂಡು ಬರುತ್ತಿದ್ದಾನೆ. ಆದರೆ, ಇಂದು ಮನುಷ್ಯನಲ್ಲಿ ಶಾಂತಿ ಮತ್ತು ನೆಮ್ಮದಿ ಮಾಯವಾಗಿದೆ ಎಂದರು.

ಕಲ್ಲಹಳ್ಳಿ ಗ್ರಾಮಸ್ಥರು ಸುಂದರ ಶ್ರೀಮಂಚಮ್ಮ ದೇವಿ ದೇವಾಲಯವನ್ನು ನೂತನವಾಗಿ ನಿರ್ಮಿಸಿದ್ದಾರೆ. ಇದು ಒಳ್ಳೆಯ ಕೆಲಸ. ಮನಸ್ಸಿನಲ್ಲಿ ಅಸಮಾಧಾನ ಹಾಗೂ ಕ್ಲೇಷ ಉಂಟಾದಾಗಾ ನೀವು ನಂಬಿರುವ ಭಗವಂತನ ಸ್ಮರಣೆಯಲ್ಲಿ ಭಾಗಿಯಾದರೆ ನೆಮ್ಮದಿ ಪ್ರಾಪ್ತವಾಗುತ್ತದೆ. ನಂಬಿಕೆ ಮತ್ತು ವಿಶ್ವಾಸದಿಂದ ಭಗವಂತನನ್ನು ಪ್ರಾರ್ಥಿಸಬೇಕು. ನಮ್ಮ ನಡೆ ಧರ್ಮ ಮಾರ್ಗದಲ್ಲಿರಬೇಕು ಎಂದರು.

ಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನದ ಫಲವಾಗಿ ಮನುಷ್ಯ ಇಂದು ಸದೃಢನಾಗಿದ್ದಾನೆ. ಇಂತಹ ಸಂದರ್ಭದಲ್ಲಿ ಆಧ್ಯಾತ್ಮಿಕ ಭಕ್ತಿಯ ಬೇರುಗಳ ಜೊತೆ ಬದುಕುವ ಪ್ರವೃತ್ತಿ ರೂಢಿಸಿಕೊಂಡಲ್ಲಿ ಜೀವನದಲ್ಲಿ ಎದುರಾಗುವ ಸಮಸ್ಯೆಗಳನ್ನು ಸುಲಭವಾಗಿ ನಿವಾರಿಸಿಕೊಳ್ಳಬಹುದು ಎಂದರು.

ಆಧುನಿಕತೆ ಮತ್ತು ತಂತ್ರಜ್ಞಾನದ ಬೆಳವಣಿಗೆಯಿಂದ ಮನುಷ್ಯರು ಸೃಷ್ಟಿಕರ್ತ ಹಾಗೂ ಹೆತ್ತವರನ್ನು ಮರೆಯುವ ಸ್ಥಿತಿ ನಿರ್ಮಾಣವಾಗಿದೆ. ಬದಲಾವಣೆ ಕಾಲಘಟ್ಟದಲ್ಲಿ ವ್ಯಕ್ತಿಗಳ ಭಾವನೆಯೂ ಬದಲಾವಣೆಯಾಗಿದೆ. ಇಂತಹ ಸಂದರ್ಭದಲ್ಲಿ ನೂತನ ದೇವಾಲಯ ನಿರ್ಮಿಸಿ ಭಗವಂತನ ಸ್ಮರಣೆ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಮಂಡ್ಯ ನಗರ ವ್ಯಾಪ್ತಿಯಲ್ಲಿ ಕಲ್ಲಹಳ್ಳಿ ಹಾಗೂ ಹೊಸಹಳ್ಳಿ ಗ್ರಾಮಗಳು ಮೇರು ಶಿಖರವಿದ್ದಂತೆ. ಈ ಗ್ರಾಮಗಳ ಅಭಿವೃದ್ಧಿಯ ಜೊತೆ ಧಾರ್ಮಿಕತೆ, ಶ್ರೀಮಂತಿಕೆಯನ್ನೂ ಸಾಕಾರಗೊಳಿಸಲು ನೂತನ ದೇವಾಲಯ ನಿರ್ಮಾಣ ಸಮಯೋಚಿತವಾಗಿದೆ ಎಂದರು.

ಶಾಸಕ ಪಿ.ರವಿಕುಮಾರ್ ಮಾತನಾಡಿ, ಕಡಿಮೆ ಅವಧಿಯಲ್ಲಿ ಸುಂದರವಾದ ದೇವಾಲಯ ನಿರ್ಮಾಣಕ್ಕೆ ಹಾಗೂ ಲೋಕಾರ್ಪಣೆಗೆ ಗ್ರಾಮಸ್ಥರೆಲ್ಲ ಒಗ್ಗೂಡಿ ಧಾರ್ಮಿಕ ಕಾರ್‍ಯ ಯಶಸ್ವಿಗೊಳಿಸಿರುವುದು ಉತ್ತಮ ಕಾರ್‍ಯ ಎಂದರು.

ಆದಿಚುಂಚನಗಿರಿ ಮಠದ ಪ್ರಧಾನ ಕಾರ್ಯದರ್ಶಿ ಪುರುಷೋತ್ತಮಾನಂದನಾಥ ಸ್ವಾಮೀಜಿ, ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ, ಮೈಷುಗರ್ ಅಧ್ಯಕ್ಷ ಸಿ.ಡಿ.ಗಂಗಾಧರ್, ಪಿಇಟಿ ಅಧ್ಯಕ್ಷ ಕೆ.ಎಸ್.ವಿಜಯ್ ಆನಂದ್, ಉದ್ಯಮಿ ಸ್ಟಾರ್ ಚಂದ್ರು, ರವಿಬೋಜೇಗೌಡ, ಸಿ.ತ್ಯಾಗರಾಜು, ಶ್ರೀಮಂಚಮ್ಮ ದೇವಸ್ಥಾನ ಟ್ರಸ್ಟ್ ಗೌರವಾಧ್ಯಕ್ಷ ಕೆ.ಎಲ.ಶಿವರುದ್ರ, ಅಧ್ಯಕ್ಷ ಕೆ.ರಾಮಲಿಂಗಯ್ಯ, ಪ್ರಧಾನ ಕಾರ್ಯದರ್ಶಿ, ಕೆ.ಎಸ್.ಆನಂದ, ಖಜಾಂಜಿ ಕೆ.ಜಿ.ಮೋಹನ್‌ಕುಮಾರ್, ಕಾರ್ಯದರ್ಶಿ ಕೆ.ಸಿ.ರವೀಂದ್ರ, ಪದಾಧಿಕಾರಿಗಳು, ದೇವಸ್ಥಾನದ ಟ್ರಸ್ಟಿಗಳು, ಕಲಹಳ್ಳಿ ಗ್ರಾಮದ ಮುಖಂಡರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಇದೇ ವೇಳೆ ಸಹಸಾರು ಮಂದಿಗೆ ಅನ್ನಸಂತರ್ಪಣೆ ನಡೆಯಿತು.

Share this article