ಕೊಪ್ಪಳ: ಜಿಲ್ಲಾ ಪೊಲೀಸ್ ವತಿಯಿಂದ ಸೋಮವಾರ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಸ್ವತ್ತಿನ ಅಪರಾಧ ಪ್ರಕರಣಗಳಲ್ಲಿ ವಶಪಡಿಸಿಕೊಂಡ ವಸ್ತುಗಳನ್ನು ವಾರಸುದಾರರಿಗೆ ಹಿಂದಿರುಗಿಸುವ ಮತ್ತು ಪೊಲೀಸ್ ಕುಟುಂಬದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಜರುಗಿತು.
ಬಳಿಕ ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶೇ. 90ಕ್ಕೂ ಅಧಿಕ ಅಂಕಗಳನ್ನು ಪಡೆದ ಪೊಲೀಸ್ ಕುಟುಂಬದ ಸುಮಾರು 53 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ, ಪ್ರೋತ್ಸಾಹಿಸಿದರು.
ಜಿಲ್ಲೆಯಲ್ಲಿ ಸ್ವತ್ತು ಕಳುವಾದ 252 ಪ್ರಕರಣಗಳು ವರದಿಯಾಗಿದ್ದು, ಅವುಗಳಲ್ಲಿ 104 ಪ್ರಕರಣಗಳನ್ನು ಪತ್ತೆ ಮಾಡಿ ಕಳುವಾದ ಮಾಲಿನ ಪೈಕಿ ಒಟ್ಟು ₹1,82,45,960 ಮೌಲ್ಯದ ಮಾಲನ್ನು ವಶಪಡಿಸಿಕೊಳ್ಳುವಲ್ಲಿ ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ ಎಂದರು.ಸೈಬರ್ ಅಪರಾಧಗಳಲ್ಲಿ ಪತ್ತೆಯಾದ ₹33,49,662, ಸಿ.ಇ.ಐ.ಆರ್. ಪೋರ್ಟಲ್ ಮೂಲಕ ಪತ್ತೆ ಹಚ್ಚಲಾದ 1905 ಮೊಬೈಲ್‌ಗಳು, 988.960 ಗ್ರಾಂ ಚಿನ್ನದ ಆಭರಣಗಳು, 10 ಕೆಜಿ ಬೆಳ್ಳಿ ಆಭರಣಗಳು, ₹43,33,830 ನಗದು, 6 ನಾಲ್ಕು ಚಕ್ರ ವಾಹನಗಳು, 3 ತ್ರಿಚಕ್ರ ವಾಹನಗಳು ಹಾಗೂ 34 ದ್ವಿಚಕ್ರ ವಾಹನಗಳನ್ನು ವಾರಸುದಾರರಿಗೆ ಹಿಂತಿರುಗಿಸಲಾಗಿದೆ ಎಂದರು.
ಮಾದಕ ವಸ್ತುಗಳ ವಿರುದ್ಧ ಸಮರ "ಆಪರೇಷನ್ ರೈಸ್ ಮತ್ತು ಬೇಡ ಬ್ರೋ " ಎಂಬ ಧ್ಯೇಯವಾಕ್ಯದೊಂದಿಗೆ ರಾಜ್ಯ ಸರ್ಕಾರದ ಆದೇಶದಂತೆ ನಶೆ ಮುಕ್ತ ಕರ್ನಾಟಕದ ಅಭಿಯಾನವನ್ನು ರಾಜ್ಯದ ಪೊಲೀಸ್ ಇಲಾಖೆಯಿಂದ ಹಮ್ಮಿಕೊಂಡಿದ್ದು, ಯುವ ಜನತೆಗೆ ಮಾದಕ ವ್ಯಸನದ ದುಷ್ಪರಿಣಾಮದ ಅರಿವು ಮೂಡಿಸಲಾಗುತ್ತಿದೆ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಮ್ ಎಲ್. ಅರಸಿದ್ದಿ ಮಾತನಾಡಿ, 2025 ಜ. 1ರಿಂದ 2026 ಜೂ. 30ರ ವರೆಗೆ ಪತ್ತೆ ಮಾಡಿದ ಸ್ವತ್ತುಗಳನ್ನು ಮರಳಿಸಲಾಗಿದೆ ಎಂದರು. ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್. ಹೇಮಂತ್ ಕುಮಾರ್, ಕೊಪ್ಪಳ ಡಿವೈಎಸ್ಪಿ ಮುತ್ತಣ್ಣ ಸವರಗೋಳ, ಗಂಗಾವತಿ ಡಿವೈಎಸ್ಪಿ ಜೆ. ನ್ಯಾಮನಗೌಡರ, ಸೈಬರ್ ವಿಭಾಗದ ಡಿವೈಎಸ್ಪಿ ಸಿದ್ದಲಿಂಗಪ್ಪಗೌಡ, ಡಿಎಆರ್ ಡಿವೈಎಸ್ಪಿ ಶಶಿಧರಯ್ಯ ಹಿರೇಮಠ ಇದ್ದರು. ಕೆ.ಎಚ್. ಕಳಕಬಂಡಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.