ಕೊಪ್ಪಳ: ತಾಲೂಕಿನ ಹಲುವಾಗಲಿ ಸೀಮಾದ ತುಂಗಭದ್ರಾ ನದಿಯ ಹಿನ್ನೀರು ಪ್ರದೇಶದಲ್ಲಿ ಕಾನೂನುಬಾಹಿರವಾಗಿ ಮರಳು ಸಂಗ್ರಹಿಸಿ ಕಳ್ಳತನ ಮಾಡಲು ಯತ್ನಿಸುತ್ತಿದ್ದ ದಂಧೆಕೋರರ ಜಾಲಕ್ಕೆ ಗಣಿ ಮತ್ತು ಭೂವಿಜ್ಞಾನ ಇಲಾಖೆ ಹಾಗೂ ಅಳವಂಡಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಹಲುವಾಗಲಿ ಸೀಮಾದ ತುಂಗಭದ್ರಾ ನದಿ ಪಾತ್ರದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಕಳ್ಳಸಾಗಣೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿಗಳು, ಅಳವಂಡಿ ಪೊಲೀಸ್ ಠಾಣೆಯ ಪಿಎಸ್‌ಐ ಹಾಗೂ ಕಂದಾಯ ಇಲಾಖೆಯ ಅಧಿಕಾರಿಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಿದರು.
ಶನಿವಾರ ಮಧ್ಯಾಹ್ನ 2.45ರ ಸುಮಾರಿಗೆ ಅಧಿಕಾರಿಗಳ ತಂಡ ಹಲುವಾಗಲಿ ಸೀಮಾದ ಹೊಲವೊಂದರ ಸಮೀಪವಿರುವ ತುಂಗಭದ್ರಾ ನದಿ ಪಾತ್ರದಲ್ಲಿ ದಾಳಿ ಮಾಡಿದಾಗ ಬೃಹತ್ ಪ್ರಮಾಣದಲ್ಲಿ ಮರಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅಧಿಕಾರಿಗಳ ವಾಹನ ಬರುತ್ತಿದ್ದಂತೆ ದಂಧೆಕೋರರು ಅಲ್ಲಿಂದ ಪರಾರಿಯಾಗಿದ್ದಾರೆ.ಜಪ್ತಿಯಾದ ಮರಳಿನ ವಿವರ: ಒಟ್ಟು ಸುಮಾರು 3000 ಮೆಟ್ರಿಕ್ ಟನ್ ಮರಳನ್ನು ಜಪ್ತಿ ಮಾಡಲಾಗಿದ್ದು, ಇದರ ಅಂದಾಜು ಮೌಲ್ಯ ₹2,40,000 ಆಗಿದೆ. ಸ್ಥಳದಲ್ಲಿ ಹಾಜರಿದ್ದ ಅಳವಂಡಿ ಕಂದಾಯ ನಿರೀಕ್ಷಕರು ಹಾಗೂ ಗ್ರಾಮ ಸಹಾಯಕರ ಸಮ್ಮುಖದಲ್ಲಿ ಕಂದಾಯ ಮತ್ತು ಪೊಲೀಸ್ ಇಲಾಖೆ ಜಂಟಿ ಪಂಚನಾಮೆ ನಡೆಸಿದ್ದಾರೆ. ಮರಳಿನ ದಾಸ್ತಾನನ್ನು ಅಳವಂಡಿ ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.