The sacrifice of the martyred forest officials is immense.
ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಅರಣ್ಯ, ವನ್ಯಜೀವಿ ಮತ್ತು ನೈಸರ್ಗಿಕ ಸಂಪತ್ತನ್ನು ಸಂರಕ್ಷಿಸುವ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಾ ಹುತಾತ್ಮರಾದ ಅರಣ್ಯ ಇಲಾಖೆಯ ಅಧಿಕಾರಿ, ಸಿಬ್ಬಂದಿ ಹಾಗೂ ಅರಣ್ಯ ರಕ್ಷಕರ ತ್ಯಾಗವನ್ನು ಮರೆಯಲಾಗದು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಜಿ.ಎ. ಮಂಜುನಾಥ ಹೇಳಿದರು.ನಗರದ ಅರಣ್ಯ ಇಲಾಖೆಯು ನಗರದ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಅರಣ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುವುದು ಸಾಮಾನ್ಯ ವಿಷಯವೇನಲ್ಲ. ಅನೇಕ ಸಂಘರ್ಷಗಳು ಕಾಣುತ್ತವೆ. ಅರಣ್ಯದಲ್ಲಿನ ಕೆಲಸ ಕಚೇರಿಯಲ್ಲಿನ ಕೆಲಸಕ್ಕಿಂತ ಭಿನ್ನವಾದುದು ಎಂದರು.
ಕಾರ್ಯಕ್ಷೇತ್ರದಲ್ಲಿ ಎದುರಾಗುವ ಸಮಸ್ಯೆ-ಸವಾಲುಗಳನ್ನು ಎದುರಿಸಲು ಚಾಣಾಕ್ಷತೆ, ಕಠಿಣ ನಿರ್ಧಾರ, ಗಟ್ಟಿ ಗುಂಡಿಗೆ ಇರಬೇಕು. ನಾಲ್ಕು ಗೋಡೆಗಳ ನಡುವಿನ ಸಮಸ್ಯೆಯನ್ನು ಎದುರಿಸಬಹುದು. ಆದರೆ, ಹೊರಗಿನ ಸಮಸ್ಯೆಗಳ ಇತ್ಯರ್ಥಕ್ಕೆ ಕೌಶಲ್ಯ, ವೃತ್ತಿಪರತೆ ಇರಬೇಕು. ಇವೆಲ್ಲವೂ ಅರಿತಿದ್ದು, ಸಾವು-ನೋವುಗಳು ನಡೆಯುವುದು ಮನುಷ್ಯನ ಬದುಕನ್ನು ಆತಂಕಕ್ಕೆ ತಳ್ಳುತ್ತದೆ. ನೆಮ್ಮದಿ ಕಳೆದು ಹೋಗುತ್ತದೆ ಎಂದು ಹೇಳಿದರು.ಎಲ್ಲ ವಾಸ್ತವ ಸತ್ಯಗಳನ್ನು ಅರಿತ ನಾವು ಮೌಲಿಕವಾದ ವನ ಸಂಪತ್ತನ್ನು ಉಳಿಸಿ, ಬೆಳೆಸದೆ ಹೋದರೆ ಅದೊಂದು ಸಾಮಾಜಿಕ ದುರಂತವಲ್ಲದೇ ಮತ್ತೇನೂ ಅಲ್ಲ. ಅರಣ್ಯದ ನಾಶ ಎಂದರೆ ಅದು ಮನುಕುಲದ ವಿನಾಶವೇ ಸರಿ. ಅರಣ್ಯ ರಕ್ಷಣೆಯಲ್ಲಿ ಕಾರ್ಯನಿರತ 65 ಸಿಬ್ಬಂದಿ ಹುತಾತ್ಮರಾಗಿದ್ದು, ಅತ್ಯಂತ ನೋವಿನ ಸಂಗತಿ. ಅವರೆಲ್ಲರನ್ನು ಸ್ಮರಿಸಿಕೊಂಡು ಶ್ರದ್ಧಾಂಜಲಿ ಅರ್ಪಿಸುವುದು ಎಲ್ಲರ ಕರ್ತವ್ಯವಾಗಿದೆ ಎಂದರು.
ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಟಿ. ಹನುಮಂತಪ್ಪ ಮಾತನಾಡಿ, ಅರಣ್ಯ ಹುತಾತ್ಮರ ತ್ಯಾಗವು ಕೇವಲ ಇಲಾಖೆಯ ಕರ್ತವ್ಯನಿಷ್ಠೆಯ ಸಂಕೇತವಲ್ಲ; ಅದು ಪರಿಸರ ಸಂರಕ್ಷಣೆ, ಜೀವವೈವಿಧ್ಯ ರಕ್ಷಣೆ ಮತ್ತು ಭವಿಷ್ಯದ ಪೀಳಿಗೆಯ ಹಿತಕ್ಕಾಗಿ ಮಾಡಿದ ಸೇವೆಯ ಪ್ರತೀಕವಾಗಿದೆ ಎಂದರು.ಅರಣ್ಯ ಸಂರಕ್ಷಣೆಯಲ್ಲಿ ಎದುರಾಗುವ ಅಪಾಯಗಳು, ಕಾಡುಗಳ ಮಹತ್ವ ಹಾಗೂ ವನ್ಯಜೀವಿಗಳ ರಕ್ಷಣೆಯ ಅಗತ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕಾದುದು ಇಂದಿನ ತುರ್ತು ಅಗತ್ಯ. ಅರಣ್ಯ ಸಂಪತ್ತು ಮಾನವನಿಗೆ ಶುದ್ಧ ಗಾಳಿ, ನೀರು, ಮಳೆ, ಔಷಧೀಯ ಸಸ್ಯಗಳು ಹಾಗೂ ಜೀವವೈವಿಧ್ಯವನ್ನು ಒದಗಿಸುವ ಅರಣ್ಯವನ್ನು ರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ ಎಂದರು.
ಅರಣ್ಯ ಹುತಾತ್ಮರನ್ನು ಸ್ಮರಿಸುವ ಈ ಸಂದರ್ಭದಲ್ಲಿ ಅವರ ಧೈರ್ಯ, ಪ್ರಾಮಾಣಿಕತೆ, ಕರ್ತವ್ಯನಿಷ್ಠೆ ಮತ್ತು ತ್ಯಾಗದ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಸಂಕಲ್ಪ ಮಾಡಬೇಕು. ಅರಣ್ಯ ಸಿಬ್ಬಂದಿಯ ಸೇವೆಗೆ ಗೌರವ ಸಲ್ಲಿಸುವುದರ ಜೊತೆಗೆ, ಅರಣ್ಯ ನಾಶ, ಅಕ್ರಮ ಬೇಟೆ ಮತ್ತು ಅವ್ಯಾಹತವಾಗಿ ಅಕ್ರಮವಾಗಿ ಮರಗಳ ಹನನ ಮಾಡುವುದರ ವಿರುದ್ಧ ಸಮಾಜ ಜಾಗೃತವಾಗಬೇಕು. ಹುತಾತ್ಮರ ಕುಟುಂಬಕ್ಕೆ ಇಲಾಖೆ ನೆರವಾಗಿದೆ. ಸರ್ಕಾರವೂ ಕಾನೂನು ಬದ್ಧವಾಗಿ ನೆರವಿಗೆ ಬರಲಿದೆ. ಅಂತೆಯೇ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಸಹಕಾರ ನಿರಂತರವಾಗಿದ್ದು, ಅಧಿಕಾರಿ-ಸಿಬ್ಬಂದಿಯಲ್ಲಿ ಆತ್ಮವಿಶ್ವಾಸ ಮತ್ತು ಬಲತುಂಬುವ ಮೂಲಕ ಪ್ರಕೃತಿ ನೈಜ ರಕ್ಷಣೆಗೆ ಸಹಕರಿಸುವಂತೆ ಅವರು ಮನವಿ ಮಾಡಿದರು.ಕಾರ್ಯಕ್ರಮದಲ್ಲಿ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಸನ್ನಕೃಷ್ಣ ಪಟಗಾರ್ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹುತಾತ್ಮ ಹೆಸರನ್ನು ವಾಚಿಸಿ ಸ್ಮರಿಸಿದರು. ಮೂರು ವಿಶಾಲ ತೋಪುಗಳನ್ನು ಹಾರಿಸುವ ಮೂಲಕ ಹಾಗೂ ಪುಷ್ಪಗುಚ್ಛ ಅರ್ಪಿಸುವ ಮೂಲಕ ಹುತಾತ್ಮ ಅರಣ್ಯ ಸಿಬ್ಬಂದಿಗೆ ಗೌರವ ಸಲ್ಲಿಸಲಾಯಿತು.
ಕಾರ್ಯಕ್ರಮದಲ್ಲಿ ಕಾರ್ಯ ಯೋಜನೆ ಮತ್ತು ಭೂ-ಮಾಪನ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಗಣಪತಿ ಕೆ., ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ, ಎಸ್ಪಿ ಬಿ.ನಿಖಿಲ್, ಜಿಪಂ ಸಿಇಒ ಎನ್. ಹೇಮಂತ್ ಸೇರಿ ಅರಣ್ಯ ಇಲಾಖೆಯ ವಿವಿಧ ವೃಂದದ ಅಧಿಕಾರಿ-ಸಿಬ್ಬಂದಿ, ಹುತಾತ್ಮರ ಕುಟುಂಬದ ಸದಸ್ಯರು, ಗಣ್ಯರು ಉಪಸ್ಥಿತರಿದ್ದರು.----------------
ಪೊಟೋ: 11ಎಸ್‌ಎಂಜಿಕೆಪಿ01ಶಿವಮೊಗ್ಗದ ಅರಣ್ಯ ಇಲಾಖೆಯು ನಗರದ ಶ್ರೀಗಂಧದ ಕೋಠಿಯಲ್ಲಿರುವ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಆವರಣದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನಾಚರಣೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಅಧ್ಯಕ್ಷ ನ್ಯಾ.ಜಿ.ಎ. ಮಂಜುನಾಥ ಪುಷ್ಪನಮನ ಸಲ್ಲಿಸಿದರು.