ಕನ್ನಡಪ್ರಭ ವಾರ್ತೆ ಹಲಗೂರು
ಅಜ್ಞಾನ, ಅಂಧಕಾರ, ಮೌಢ್ಯತೆ ತೊಲಗಿ ಎಲ್ಲರಲ್ಲೂ ವೈಜ್ಞಾನಿಕ ಮನೋಭಾವನೆಯ ಚಿಂತನೆ ಬರಬೇಕು ಎಂದು ಹಲಗೂರು ವೃತ್ತದ ಶಿಕ್ಷಣ ಸಂಯೋಜಕ ರವಿಕುಮಾರ್ ತಿಳಿಸಿದರು.ಕರ್ನಾಟಕ ಪಬ್ಲಿಕ್ ಶಾಲಾವರಣದ ಸಭಾಂಗಣದಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಅಂಗವಾಗಿ ಹೋಬಳಿಯ ವಿವಿಧ ಶಾಲೆಗಳಿಂದ ಹಮ್ಮಿಕೊಂಡಿದ್ದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಮಾತನಾಡಿ, ವಿಜ್ಞಾನದಲ್ಲಿ ನಾವು ಎಷ್ಟು ಮುಂದುವರಿದಿದ್ದೇವೋ ಅಷ್ಟೇ ಅಂಧಕಾರದಲ್ಲಿ ಇದ್ದೇವೆ ಎಂದು ಬೇಸರ ವ್ಯಕ್ತಪಡಿಸಿದರು.
ನಾವು ಶಾಲೆಗಳಿಗೆ ಹೋಗಿ ಜ್ಞಾನ ಬೆಳೆಸಿಕೊಳ್ಳುವ ಬದಲು ಜ್ಯೋತಿಷಿ, ಪುರೋಹಿತ, ಮಂತ್ರವಾದಿ, ತಂತ್ರವಾದಿಗಳ ಮನೆ ಬಾಗಿಲಿಗೆ ಹೆಚ್ಚು ಹೋಗುತ್ತಿದ್ದೇವೆ. ಅಂತವರಿಗೆ ಲಾಭ ಮಾಡಿಕೊಡುವ ಜೊತೆಗೆ ಶೋಷಣೆಗೆ ಒಳಗಾಗುತ್ತಿದ್ದೇವೆ ಎಂದು ಎಚ್ಚರಿಸಿದರು.ಜನರಲ್ಲಿ ಮೌಢ್ಯತೆ ,ಅಂಧಕಾರ, ಅಜ್ಞಾನವನ್ನು ತುಂಬುತ್ತಿದ್ದಾರೆ. ನಮ್ಮಲ್ಲಿ ನಂಬಿಕೆ ಇರಬೇಕೆ ಹೊರತು ಮೂಢನಂಬಿಕೆ ಇರಬಾರದು. ಮೌಢ್ಯತೆಯನ್ನು ಬಿಟ್ಟು ಇಂದಿನ ಮಕ್ಕಳೇ ನಾಳೆಯ ಪ್ರಜೆಗಳು ಎಂದು ತಿಳಿದು ವಿದ್ಯಾರ್ಥಿಗಳು ಭವಿಷ್ಯದ ವಿಜ್ಞಾನಿಗಳಾಗಲು ವೈಜ್ಞಾನಿಕ ಮನೋಭಾವನೆ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಹಲಗೂರು ಹೋಬಳಿಯ ಎಲ್ಲಾ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ವತಿಯಿಂದ ವಿಜ್ಞಾನದ ಕುರಿತು ಹಲವು ವಸ್ತುಗಳನ್ನು ಪ್ರದರ್ಶನಕ್ಕೆ ಇಟ್ಟಿದ್ದೀರಿ. ಕೇವಲ ನಾಲ್ಕು ದಿನಗಳ ಕಾಲಾವಕಾಶದಲ್ಲಿ ಎಲ್ಲಾ ಶಾಲೆಯ ಮುಖ್ಯೋಪಾಧ್ಯಾಯರು ಸಹ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತುಂಬಾ ಅಚ್ಚುಕಟ್ಟಾಗಿ ವಸ್ತುಗಳನ್ನು ತಯಾರಿಸಿ ಸುಮಾರು 100 ಮಾದರಿಗಳನ್ನು ಪ್ರದರ್ಶನಕ್ಕೆ ಇಟ್ಟಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.ಡಾ.ಎ.ಎಸ್.ನಾಗೇಶ್ ಮಾತನಾಡಿ, ವಿದ್ಯಾರ್ಥಿಗಳು ವ್ಯಾಸಂಗದ ವೇಳೆ ಒಂದು ನಿರ್ದಿಷ್ಟ ಗುರಿ ಇಟ್ಟುಕೊಂಡು ಸಾಧನೆಗೆ ಶ್ರಮ ಹಾಕಬೇಕು. ಇಂದು ವಿಜ್ಞಾನವಿಲ್ಲದೆ ಬದುಕು ಇಲ್ಲ. ವಿಜ್ಞಾನದಿಂದ ಪ್ರತಿಯೊಬ್ಬರ ಬದುಕು ಅಭಿವೃದ್ಧಿಯತ್ತ ಸಾಗಲು ಕಾರಣವಾಗಲಿ ಎಂದು ಬಯಸುತ್ತೇನೆ ಎಂದರು.
ಗ್ರಾಪಂ ಅಧ್ಯಕ್ಷೆ ಶಶಿಕಲಾ ಶ್ರೀನಿವಾಸಾಚಾರಿ, ನಿಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ವಿದ್ಯಾರ್ಥಿಗಳಾದ ಗೌತಮ್ ಮತ್ತು ಮುತ್ತುರಾಜ್ ತಯಾರಿಸಿದ ಹೈಡ್ರೋಲಿಕ್ ಮಿಸೈಲ್ ಲಾಂಚರ್ ಗೆ ಚಾಲನೆ ನೀಡಿ ವಿಜ್ಞಾನ ವಸ್ತು ಪ್ರದರ್ಶನವನ್ನು ಉದ್ಘಾಟಿಸಿದರು.ವಿದ್ಯಾರ್ಥಿಗಳು ಮೊಬೈಲ್ ಗೀಳಿನಿಂದ ಹೊರ ಬಂದು ಉತ್ತಮ ಅಭ್ಯಾಸ ಬೆಳೆಸಿಕೊಂಡು ಭವಿಷ್ಯದಲ್ಲಿ ಸಮಾಜದ ಸತ್ಪ್ರಜೆಯಾಗುವಂತೆ ಕರೆ ನೀಡಿದರು.ವಿವಿಧ ಶಾಲೆಯ ವಿದ್ಯಾರ್ಥಿಗಳು ತಯಾರಿಸಿದ ವಿಜ್ಞಾನ ಮಾದರಿಗಳನ್ನು ಗಣ್ಯರು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ವೇದಿಕೆಯಲ್ಲಿ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಿ.ಮಹಾದೇವ, ಗ್ರಾಪಂ ಉಪಾಧ್ಯಕ್ಷೆ ಲತಾ ಮಾದೇವ, ಡಾ.ಎಚ್.ಎಸ್.ಪದ್ಮಾವತಿ ನಾಗೇಶ್, ಶ್ರೀನಿವಾಸಚಾರಿ, ಮುಖ್ಯ ಶಿಕ್ಷಕ ಕುಳ್ಳಯ್ಯ, ಶಿಕ್ಷಕರಾದ ಸುಂದರಪ್ಪ, ಜಿ.ಎಸ್.ಕೃಷ್ಣ ,ಪುಟ್ಟರಾಜು, ಈಶ, ಸಿದ್ದಪ್ಪ, ಬೋರೇಗೌಡ, ತಿಮ್ಮಯ್ಯ ಹಾಗೂ ಸರ್ಕಾರಿ ಅನುದಾನಿತ ಮತ್ತು ಅನುದಾನ ರಹಿತ ಎಲ್ಲಾ ಪ್ರಾರ್ಥಮಿಕ ಹಾಗೂ ಪ್ರೌಢ ಶಾಲೆಯ ಶಿಕ್ಷಕ ವರ್ಗದವರು ಇದ್ದರು.