ಕನ್ನಡಪ್ರಭ ವಾರ್ತೆ ಕೆ.ಎಂ.ದೊಡ್ಡಿ
ಮಕ್ಕಳಲ್ಲಿ ಒತ್ತಡ ಹಾಕುವ ಸ್ವಭಾವವನ್ನು ಪೋಷಕರು ಕೈ ಬಿಡಬೇಕು ಎಂದು ಸಂಕಲ್ಪ ಪಾಲಿ ಕ್ಲಿನಿಕ್ ವೈದ್ಯ ಡಾ.ರೂಪೇಶ್ ಕಿವಿ ಮಾತು ಹೇಳಿದರು.ಸಮೀಪದ ಮೆಣಸಗೆರೆ ಗ್ರಾಮದ ಜ್ಞಾನಮುದ್ರ ವಿದ್ಯಾಮಂದಿರ ಶಾಲೆಯಲ್ಲಿ ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿ, ಮಕ್ಕಳಿಗೆ ಒತ್ತಡ ಹಾಕುವುದರಿಂದ ಅವರ ಸ್ವಭಾವ ಬದಲಾವಣೆಯಾಗುತ್ತಾ ಮಾನಸಿಕ ಖಿನ್ನತೆಗೆ ಒಳಾಗಾಗುತ್ತಾರೆ ಎಂದು ಸೂಕ್ಷ್ಮವಾಗಿ ನುಡಿದರು.
ಇತ್ತೀಚಿನ ದಿನಗಳಲ್ಲಿ ರಾಸಾಯನಿಕ ಸಿಂಪಡಿಸಿ ಬೆಳೆದ ಆಹಾರದಿಂದ ಮಕ್ಕಳ ಮಾನಸಿಕ ಸ್ಥಿತಿಗಳಲ್ಲಿ ವ್ಯತ್ಯಾಸಗಳಾಗುತ್ತಿವೆ. ಇದಲ್ಲದೆ ಜಂಕ್ ಫುಡ್‌ಗಳು ಸಹ ಮಕ್ಕಳ ಆರೋಗ್ಯದ ಮೇಲೆ ಹೆಚ್ಚು ಪರಿಣಾಮ ಬೀರಲಿದ್ದು, ಪೋಷಕರು ಮಕ್ಕಳಿಗೆ ಪೌಷ್ಟಿಕ ಆಹಾರದತ್ತ ಗಮನಹರಿಸಿ ಸೊಪ್ಪು- ತರಕಾರಿಗಳನ್ನು ಹೆಚ್ಚು ನೀಡಬೇಕು ಎಂದರು.ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಿ ತಮ್ಮ ಕರ್ತವ್ಯ ಮುಗಿಯಿತು ಎಂಬುವುದನ್ನು ಬಿಟ್ಟು ಅವರಿಗೆ ಶಿಸ್ತಿನ ಪಾಠ ಹೇಳಿ ಕೊಡಬೇಕು. ಇದಲ್ಲದೆ ಮಕ್ಕಳು ಮುಂದೆ ಯಾವುದೇ ರೀತಿಯ ಕೆಟ್ಟ ಪದಗಳನ್ನು ಮಾತನಾಡಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ ಕಲಿಸಬೇಕು ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷೆ ಡಾ.ಸೌಮ್ಯ ರಾಜೇಶ್ ಮಾತನಾಡಿ, ಹಳ್ಳಿಗಾಡಿನ ಮಕ್ಕಳಿಗೆ ಆಧುನಿಕ ಶಿಕ್ಷಣ ನೀಡುತ್ತಿರುವುದಕ್ಕೆ ಸಂತಸವಾಗುತ್ತಿದೆ. ಪೋಷಕರು ಮಕ್ಕಳೊಂದಿಗೆ ಕುಳಿತು ಅವರ ಕಲಿಕೆಯನ್ನು ಹೆಚ್ಚು ಮಾಡಲು ಶಾಲೆಯಿಂದ ನೀಡುವ ಚಟುವಟಿಕೆಗಳನ್ನು ತಪ್ಪದೇ ಮಾಡಿಸಬೇಕೆಂದು ಪೋಷಕರಿಗೆ ತಿಳಿಸಿದರು.ಮಾಂಟೆಸ್ಸರಿ ಮಕ್ಕಳಿಗೆ ಘಟಿಕೋತ್ಸವ ಸಮಾರಂಭವನ್ನು ಮಾಡುವುದರಿಂದ ಮಕ್ಕಳಲ್ಲಿ ಶಿಕ್ಷಣದ ಬಗ್ಗೆ ಅತಿ ಹೆಚ್ಚು ಒಲವು ಹಾಗೂ ಆಸಕ್ತಿ ಮೂಡಿ ಕ್ರಿಯಾಶೀಲತೆಯಿಂದ ಅಭ್ಯಾಸ ಮಾಡಲು ನೆರವಾಗುವುದರ ಜತೆಗೆ ಪ್ರತಿಯೊಂದು ಮಕ್ಕಳ ವ್ಯಕ್ತಿತ್ವ ವಿಕಾಸಕ್ಕೆ ಸಹಕಾರಿಯಾಗುತ್ತದೆ ಎಂದು ತಿಳಿಸಿದರು.
ಮಕ್ಕಳು ಘಟಿಕೋತ್ಸವ ಸಮಾರಂಭದಲ್ಲಿ ವಿವಿಧ ರೀತಿಯ ಹಾಡುಗಳಿಗೆ ನೃತ್ಯ ಪ್ರದರ್ಶನ ಮಾಡಿ ಪೋಷಕರ ಗಮನಸೆಳೆದರು. ಈ ವೇಳೆ ಹಿರಿಯ ವಿದ್ಯಾರ್ಥಿಗಳು ಮನರಂಜನೆ ನೀಡಿ ಪೋಷಕರು ಮತ್ತು ಮಾಂಟೆಸ್ಸರಿ ಮಕ್ಕಳನ್ನು ರಂಜಿಸಿದರು. ಘಟಿಕೋತ್ಸವವನ್ನು ಆಚರಿಸಿಕೊಂಡ ಯು.ಕೆ.ಜಿ ಮಕ್ಕಳು ಅತಿಥಿಗಳಿಂದ ಪ್ರಮಾಣ ಪತ್ರವನ್ನು ಸ್ವೀಕರಿಸಿದರು.ಮೆಣಸಗೆರೆ ಪಿಡಿಒ ಸತೀಶ್, ಸಂಸ್ಥೆಯ ಕಾರ್ಯದರ್ಶಿ ಶಿವಮ್ಮ ಶಿವಕುಮಾರ್, ಛೇರ್ಮನ್ ಪ್ರಭಾವತಿ ಸುರೇಶ್, ಮುಖ್ಯ ಶಿಕ್ಷಕಿ ಕೆ.ಎಸ್. ಶೃತಿ, ಮಾಂಟೆಸ್ಸರಿ ಸಂಯೋಜಕಿ ಕೆ.ಪಿ. ಮಂಜುಳಾ ಹಲವರಿದ್ದರು.