ಫ್ಲೆಕ್ಸ್‌ಗಳಲ್ಲಿ ಕನ್ನಡ ನಿರ್ಲಕ್ಷ್ಯಿಸಿ, ಆಂಗ್ಲ ಪದಗಳ ದರ್ಬಾರು

KannadaprabhaNewsNetwork | Published : May 27, 2024 1:03 AM

ಸಾರಾಂಶ

ರಾಜ್ಯಾದ್ಯಂತ ದಿನನಿತ್ಯ ಕನ್ನಡಪರ ಹೋರಾಟಗಾರರು ಕನ್ನಡ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ಹೆಸರು ಹೇಳಿಕೊಂಡು ರಾಜಕೀಯ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ. ಆದರೆ ಸರ್ಕಾರ ಕನ್ನಡ ರಕ್ಷಣೆಗಾಗಿ ಕಾನೂನುಗಳನ್ನು ಮಾಡಿ, ಅದನ್ನು ಪಾಲಿಸದೇ ಕಣ್ಮುಚ್ಚಿ ಕುಳಿತಿದೆ ಎಂದು ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗೋಪಾಲಗೌಡ ಆರೋಪಿಸಿದ್ದಾರೆ.

- ಪಾಲಿಕೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ: ಕರುನಾಡ ಕನ್ನಡ ಸೇನೆ ಎಚ್ಚರಿಕೆ- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ರಾಜ್ಯಾದ್ಯಂತ ದಿನನಿತ್ಯ ಕನ್ನಡಪರ ಹೋರಾಟಗಾರರು ಕನ್ನಡ ಉಳಿವಿಗಾಗಿ ಹೋರಾಟ ನಡೆಸುತ್ತಿದ್ದಾರೆ. ಕನ್ನಡದ ಹೆಸರು ಹೇಳಿಕೊಂಡು ರಾಜಕೀಯ ಅಭ್ಯರ್ಥಿಗಳು ಗೆಲ್ಲುತ್ತಿದ್ದಾರೆ. ಆದರೆ ಸರ್ಕಾರ ಕನ್ನಡ ರಕ್ಷಣೆಗಾಗಿ ಕಾನೂನುಗಳನ್ನು ಮಾಡಿ, ಅದನ್ನು ಪಾಲಿಸದೇ ಕಣ್ಮುಚ್ಚಿ ಕುಳಿತಿದೆ ಎಂದು ಕರುನಾಡ ಕನ್ನಡ ಸೇನೆ ರಾಜ್ಯಾಧ್ಯಕ್ಷ ಕೆ.ಟಿ.ಗೋಪಾಲಗೌಡ ಆರೋಪಿಸಿದ್ದಾರೆ.

ಪ್ರಚಾರದ ಬೋರ್ಡ್‌ಗಳು, ಜಾಹೀರಾತು ಫ್ಲೆಕ್ಸ್‌ಗಳಲ್ಲಿ ಶೇ.60 ಕನ್ನಡ ಕಡ್ಡಾಯ ಎಂಬ ಸರ್ಕಾರದ ಆದೇಶ ಗಾಳಿಗೆ ತೂರಲಾಗುತ್ತಿದೆ. ಫ್ಲೆಕ್ಸ್ ಬೋರ್ಡ್‌ಗಳಲ್ಲಿ ಒಂದು ಅಕ್ಷರ ಕನ್ನಡ ಪದಗಳಿಲ್ಲದ ಕಾನೂನುಬಾಹಿರ ಫ್ಲೆಕ್ಸ್ ಅಳವಡಿಕೆಗೆ ದಾವಣಗೆರೆ ಮಹಾನಗರ ಪಾಲಿಕೆ ಪರವಾನಗಿ ನೀಡುತ್ತಿದೆ ಎಂದು ಕಿಡಿಕಾರಿದ್ದಾರೆ.

ಪಾಲಿಕೆ ಆಯುಕ್ತರು, ಅಧಿಕಾರಿಗಳು ಕನ್ನಡ ವಿರೋಧಿಗಳಾಗಿದ್ದಾರೆ. ನವಂಬರ್‌ನಲ್ಲಿ ಮಾತ್ರ ರಾಜ್ಯೋತ್ಸವ ಕಾರ್ಯಕ್ರಮಗಳ ಹೆಸರಿನಲ್ಲಿ ಕೋಟ್ಯಂತರ ರು. ವ್ಯಯ ಮಾಡುತ್ತಾರೆ. ನಗರದ ತುಂಬಾ ಕಾನೂನುಬಾಹಿರ ಫ್ಲೆಕ್ಸ್‌ಗಳು ರಾರಾಜಿಸುತ್ತಿವೆ. ಇದರಿಂದ ನಗರದ ಸೌಂದರ್ಯ ಹಾಳಾಗುತ್ತಿದೆ. ಪಾಲಿಕೆ ಪರವಾನಗಿ ಅವಧಿ ಮೀರಿದರೂ ಫ್ಲೆಕ್ಸ್ ತೆರವುಗೊಳಿಸಿಲ್ಲ ಎಂದಿದ್ದಾರೆ.

ಅಷ್ಟೇ ಅಲ್ಲ, ಮಹಾನಗರ ಪಾಲಿಕೆಯ ಪರವಾನಗಿಯನ್ನೇ ಪಡೆಯದೇ ಕಂಡ ಕಂಡ ವಿದ್ಯುತ್ ಕಂಬಗಳು, ಟ್ರಾಫಿಕ್ ಸಿಗ್ನಲ್ ಗಳ ಕಂಬಗಳ ಮೇಲೆಲ್ಲಾ ಫ್ಲೆಕ್ಸ್‌ಗಳನ್ನು ಕಟ್ಟಿರುವುದರಿಂದ ಗಾಳಿ-ಮಳೆಗೆ ವಿದ್ಯುತ್ ಅವಘಡಗಳು ಸಂಭವಿಸುವ ಆತಂಕ ಎದುರಾಗಿದೆ. ಪಾಲಿಕೆ ಆಯುಕ್ತರು ಅಧಿಕಾರಿಗಳು ಈ ಅವ್ಯವಸ್ಥೆ, ಕಾನೂನು ಉಲ್ಲಂಘನೆ ಕಂಡೂ ಕಾಣದಂತೆ ವರ್ತಿಸುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ನಗರದಲ್ಲಿ ಆಂಗ್ಲಮಯ ಹಾಗೂ ಕಾನೂನು ಬಾಹಿರ ಫ್ಲೆಕ್ಸ್‌ಗಳ ತೆರವಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು. ಪರವಾನಗಿ ನೀಡಿರುವ, ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳಬೇಕು. ಸ್ಪಂದಿಸದಿದ್ದರೆ ಪಾಲಿಕೆ ವಿರುದ್ಧ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.

- - - -26ಕೆಡಿವಿಜಿ31ಃ:

ದಾವಣಗೆರೆ ನಗರದ ಪ್ರಮುಖ ವೃತ್ತದಲ್ಲಿ ಟ್ರಾಫಿಕ್ ಸಿಗ್ನಲ್‌ ಕಂಬಗಳಿಗೆ ಫ್ಲೆಕ್ಸ್ ಕಟ್ಟಿರುವುದು.

Share this article