ಜುಲೈ 18ರಂದು ಧಾರವಾಡ ಐಐಟಿ 7ನೇ ಘಟಿಕೋತ್ಸವ

KannadaprabhaNewsNetwork |  
Published : Jul 16, 2026, 02:30 AM IST
ಧಾರವಾಡ ಐಐಟಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಪ್ರೊ.ವೆಂಕಪ್ಪಯ್ಯ ದೇಸಾಯಿ ಮಾತನಾಡಿದರು. | Kannada Prabha

ಸಾರಾಂಶ

ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) 7ನೇ ಘಟಿಕೋತ್ಸವ ಜು. 18ರಂದು ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ ಎಂದು ತಿಳಿಸಿದ ಐಐಟಿ ನಿರ್ದೇಶಕ ಪ್ರೊ, ವೆಂಕಪ್ಪಯ್ಯ ದೇಸಾಯಿ, ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ ಎಂದರು.

ಧಾರವಾಡ:

ಇಲ್ಲಿಯ ಪ್ರತಿಷ್ಠಿತ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ) 7ನೇ ಘಟಿಕೋತ್ಸವ ಜು. 18ರಂದು ಮಧ್ಯಾಹ್ನ 3ಕ್ಕೆ ಆಯೋಜಿಸಲಾಗಿದೆ ಎಂದು ತಿಳಿಸಿದ ಐಐಟಿ ನಿರ್ದೇಶಕ ಪ್ರೊ, ವೆಂಕಪ್ಪಯ್ಯ ದೇಸಾಯಿ, ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿಗೆ ಗೌರವ ಡಾಕ್ಟರೇಟ್‌ ನೀಡಲಾಗುತ್ತಿದೆ ಎಂದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ರಾಷ್ಟ್ರೀಯ ಸಂಶೋಧನಾ ಪ್ರತಿಷ್ಠಾನದ ಮುಖ್ಯಸ್ಥರಾದ ಪ್ರೊ. ಭೀಮ್ ಸಿಂಗ್ ಘಟಿಕೋತ್ಸವ ಭಾಷಣ ಮಾಡಲಿದ್ದು, ಗೌರವ ಅತಿಥಿಗಳಾಗಿ ಬೆಂಗಳೂರು ಟಾಟಾ ಪವರ್ ರಿನೀವೆಬಲ್ ಮೈಕ್ರೋಗ್ರೀಡ್‌ನ ಸಿಇಒ ಮನೋಜ್ ಗುಪ್ತಾ ಮತ್ತು ಪ್ಯಾನ್ ಐಐಟಿ ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಪ್ರಭಾತಕುಮಾರ ವಿಶೇಷ ಆಹ್ವಾನಿತರಾಗಿರುತ್ತಾರೆ. ಅಧ್ಯಕ್ಷತೆಯನ್ನು ಧಾರವಾಡದ ಭಾರತೀಯ ತಂತ್ರಜ್ಞಾನ ಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಶರದಕುಮಾರ್ ಸರಾಫ್ ವಹಿಸುವರು ಎಂದರು.

313 ಅಭ್ಯರ್ಥಿಗಳಿಗೆ ಪದವಿ:

ಘಟಿಕೋತ್ಸವದಲ್ಲಿ 313 ವಿದ್ಯಾರ್ಥಿಗಳು ಬಿಟೆಕ್, ಎಂಟೆಕ್ ಮತ್ತು ಪಿಎಚ್‌.ಡಿ ಪದವಿ ಪಡೆಯಲಿದ್ದಾರೆ. ಅವರಲ್ಲಿ 207 ಅಭ್ಯರ್ಥಿಗಳು ಬಿಟೆಕ್ ಪದವಿ, 13 ಬಿಎಸ್, 56 ಎಂಟೆಕ್, 12 ಎಂಎಸ್, 24 ಪಿಎಚ್‌.ಡಿ ಮತ್ತು ಒಂದು ಪಿಜಿ ಡಿಪ್ಲೊಮಾ ಪಡೆಯಲಿದ್ದಾರೆ. ಅತ್ಯಧಿಕ ಸಿಪಿಐಗಾಗಿ ಭಾರತದ ರಾಷ್ಟ್ರಪತಿ ಚಿನ್ನದ ಪದಕವನ್ನು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದ ಆರ್. ಅಮೋಘ್ ಅವರಿಗೆ ನೀಡಲಾಗುವುದು, ಒಟ್ಟಾರೆ ಕಾರ್ಯಕ್ಷಮತೆಗಾಗಿ ನಿರ್ದೇಶಕರ ಚಿನ್ನದ ಪದಕವನ್ನು ಅದೇ ಶಾಖೆಯ ಸಿದ್ಧಾರ್ಥ್ ಸಿಂಗ್ ಪಡೆಯಲಿದ್ದಾರೆ. ಜತೆಗೆ, ಪ್ರತಿ ವಿಭಾಗದ ವಿದ್ಯಾರ್ಥಿಗಳಿಗೆ ಬೆಳ್ಳಿ ಪದಕ ನೀಡಲಾಗುವುದು. ಸಿವಿಲ್ ಮತ್ತು ಮೂಲಸೌಕರ್ಯ ಎಂಜಿನಿಯರಿಂಗ್‌ನಿಂದ ಹರ್ಷ ಜೈನ್, ಕಂಪ್ಯೂಟರ್ ಸೈನ್ಸ್ ಎಂಜಿನಿಯರಿಂಗ್ ವಿಭಾಗದಿಂದ ಆರ್. ಈಶ್ವರ್, ಎಲೆಕ್ಟ್ರಿಕಲ್ ಎಂಜಿನಿಯರಿಂಗ್‌ನಿಂದ ಮನ್ ಮನೋಜ್ ಮಾರು, ಎಂಜಿನಿಯರಿಂಗ್ ಭೌತಶಾಸ್ತ್ರ ವಿಭಾಗದಿಂದ ನಿಶಾಂತ್ ಮೆಹ್ತಾ, ಗಣಿತ ಮತ್ತು ಕಂಪ್ಯೂಟರ್ ಸೈನ್ಸ್ ಮತ್ತು ಎಂಜಿನಿಯರಿಂಗ್ ವಿಭಾಗದಿಂದ ಜೈ ಶರ್ಮಾ ಮತ್ತು ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಿಂದ ವೇದಾಂತ್ ಅಸ್ವರ್ ಪದಕ ಸ್ವೀಕರಿಸಲಿದ್ದಾರೆ ಎಂದ ಅವರು, ಐಐಟಿ ಅಲ್ಲದ ರಾಷ್ಟ್ರೀಯ ಮತ್ತು ವಿದೇಶಗಳ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ಜಂಟಿ ಪದವಿ ಪರಿಚಯಿಸಲು ಸಂಸ್ಥೆ ಯೋಜಿಸಿದೆ. ಇಟಲಿ ವಿವಿಯೊಂದಿಗೆ ಸ್ನಾತಕೋತ್ತರ ಪದವಿ ಪ್ರಾರಂಭಿಸಲು ಚಿಂತನೆ ನಡೆದಿದೆ ಎಂದು ಪ್ರೊ. ದೇಸಾಯಿ ತಿಳಿಸಿದರು.

ಐಐಟಿ ಸಾಧನೆ ಇದು:

ಐಐಟಿ ಶೈಕ್ಷಣಿಕ ಕಾರ್ಯಕ್ರಮದ ಡೀನ್ ಪ್ರೊ. ನವೀನ್ ಎಂ.ಬಿ. ಮಾತನಾಡಿ, ಫೌಂಡೇಶನ್ ಇನ್ನೋವೇಶನ್ ಲ್ಯಾಬ್ ಮತ್ತು ಪ್ರಿ-ಇನ್ಕ್ಯುಬೇಶನ್‌ನಿಂದ ಇನ್ಕ್ಯುಬೇಶನ್‌ವರೆಗೆ ಸಂಪೂರ್ಣ ನಾವೀನ್ಯತೆ ಜೀವನಚಕ್ರವನ್ನು ಒಳಗೊಂಡ ಸಮಗ್ರ ಸ್ಟಾರ್ಟ್‌ಅಪ್ ಬೆಂಬಲ ಪರಿಸರ ವ್ಯವಸ್ಥೆಯನ್ನು ಇಲ್ಲಿ ಅಭಿವೃದ್ಧಿಪಡಿಸಿದೆ. ಕಡಿಮೆ ಅವಧಿಯಲ್ಲಿ ಫೌಂಡೇಶನ್ ಬಹು ವಲಯಗಳಲ್ಲಿ ಡೀಪ್-ಟೆಕ್ ಸ್ಟಾರ್ಟ್‌ಅಪ್‌ ಬೆಂಬಲಿಸುವ ರೋಮಾಂಚಕ ನಾವೀನ್ಯತೆ ಪರಿಸರ ವ್ಯವಸ್ಥೆಯನ್ನು ನಿರ್ಮಿಸಿದೆ. 2030 ರ ವೇಳೆಗೆ ನೀರು, ತ್ಯಾಜ್ಯ ಮತ್ತು ಇಂಧನದಲ್ಲಿ ಸ್ವಾವಲಂಬಿಯಾಗಲು ಧಾರವಾಡ ಐಐಟಿ ಯೋಜಿಸಿದೆ. ಇದರ ಭಾಗವಾಗಿ ನಮ್ಮ ಆವರಣದಲ್ಲಿ 117 ಮಿಲಿಯನ್ ಲೀಟರ್‌ ಸಾಮರ್ಥ್ಯದೊಂದಿಗೆ ಮೂರು ಕ್ಯಾಸ್ಕೇಡಿಂಗ್ ಕೊಳಗಳ ವ್ಯವಸ್ಥೆ ರೂಪುಗೊಂಡಿದೆ. ಇದು ಕ್ಯಾಂಪಸ್‌ನ ಎಲ್ಲ ರೀತಿಯ ನೀರಿನ ಮೂಲವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಐಐಟಿ ವಿವಿಧ ವಿಭಾಗಗಳಾದ ಪ್ರೊ. ದಿಲೀಪ್ ಎ.ಡಿ., ಪ್ರೊ. ರಂಜೀ ರೇಪಕ, ಪ್ರೊ. ಅಮರನಾಥ್ ಹೆಗಡೆ, ಪ್ರೊ. ಪ್ರತ್ಯಾಸ ಭುಯಿ, ಪ್ರೊ. ಧೀರಜ್ ಪಾಟೀಲ್, ಪ್ರೊ. ಕೋಟೇಶ್ವರರಾವ್ , ಪ್ರೊ. ಆರ್. ಪ್ರಭು, ಕುಲಸಚಿವರಾದ ಡಾ. ಕಲ್ಯಾಣಕುಮಾರ್ ಭಟ್ಟಾಚಾರ್ಜಿ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರೊ. ವಿಜೇತ್ ಕೊಟಗಿ ಇದ್ದರು.

ಸುಧಾ ಮೂರ್ತಿಗೆ ಗೌಡಾ

ಈ ವರ್ಷ ಸಂಸ್ಥೆಯು ತನ್ನ ದಶಮಾನೋತ್ಸವ ಆಚರಿಸುತ್ತಿದ್ದು, 2023ರಲ್ಲಿ ಸ್ವಂತ ಆವರಣಕ್ಕೆ ಸ್ಥಳಾಂತರಗೊಳ್ಳುವ ಮೊದಲು ಈ ಸಂಸ್ಥೆಯು 2016ರಲ್ಲಿ ವಾಲ್ಮಿ ಆವರಣದಲ್ಲಿ ಕಾರ್ಯಾರಂಭ ಮಾಡಿತ್ತು. ತನ್ನ 10 ವರ್ಷಗಳ ಶೈಕ್ಷಣಿಕ ಪಯಣದ ಅಂಗವಾಗಿ ಸಂಸ್ಥೆಯು ಇನ್ಫೋಸಿಸ್ ಫೌಂಡೇಶನ್‌ ಅಧ್ಯಕ್ಷೆ ಸುಧಾ ಮೂರ್ತಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ. ವೆಂಕಪ್ಪಯ್ಯ ದೇಸಾಯಿ ತಿಳಿಸಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಜಾನಪದ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಿಗೆ ಕುಲಪತಿ ಗದ್ದುಗೆ ಕನಸು!
ಬೆಳೆ ವಿಮೆ ಗೊಂದಲ ಬಗೆಹರಿಸಿ, ಹಾವೇರಿ ಜಿಲ್ಲೆ ಬರಪೀಡಿತವೆಂದು ಘೋಷಿಸಲು ಆಗ್ರಹ