ಬಸವರಾಜ ಹಿರೇಮಠ
ಮೂರನೇ ತಲೆಮಾರಿನ ಐಐಟಿಗಳಲ್ಲಿ ದೇಶದ ಮೊದಲ ಸ್ಮಾರ್ಟ್ ಮತ್ತು ಹಸಿರು ಕ್ಯಾಂಪಸ್ ಎಂದು ಗುರುತಿಸಿಕೊಂಡಿರುವ ಇಲ್ಲಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯು ತಾನು ನಿತ್ಯ ಬಳಸುವ ನೀರು, ವಿದ್ಯುತ್‌ನಲ್ಲಿ ಸಂಪೂರ್ಣ ಸ್ವಾವಲಂಬನೆ ಜತೆಗೆ ತನ್ನಲ್ಲಿ ಉತ್ಪಾದನೆಯಾಗುವ ಸಂಪೂರ್ಣ ತಾಜ್ಯವನ್ನು ಮರುಬಳಕೆಯ ಗುರಿಯತ್ತ ಮಹತ್ವದ ಹೆಜ್ಜೆಯನ್ನಿಟ್ಟಿದೆ.
400ಕ್ಕೂ ಹೆಚ್ಚು ಎಕರೆ ಪ್ರದೇಶದಲ್ಲಿರುವ ಧಾರವಾಡ ಐಐಟಿ ಕ್ಯಾಂಪಸ್, ವಿದ್ಯಾರ್ಥಿಗಳು ಮತ್ತು ಅಧ್ಯಾಪಕರು ಯಾವುದೇ ಸದ್ದು-ಗದ್ದಲವಿಲ್ಲದೇ ಅಧ್ಯಯನ ಹಾಗೂ ಸಂಶೋಧನೆ ಮೇಲೆ ಹೆಚ್ಚು ಗಮನಹರಿಸಲು ಸೂಕ್ತವಾದ ವಾತಾವರಣ ಹೊಂದಿದೆ. ಇದರೊಂದಿಗೆ ಬರುವ ದಿನಗಳಲ್ಲಿ ಐದು ಸಾವಿರಕ್ಕೂ ಹೆಚ್ಚು ಮರ, ಜಾಗಿಂಗ್ ಮತ್ತು ಸೈಕ್ಲಿಂಗ್ ಟ್ರ್ಯಾಕ್ ಮತ್ತು ಜಲಮೂಲಗಳಿಂದ ಕೂಡಿದ ಮಿನಿ-ಫಾರೆಸ್ಟ್ ಒಳಗೊಂಡ ಪರಿಸರ ಸ್ನೇಹಿ ಶೈಕ್ಷಣಿಕ ಪರಿಸರ ವ್ಯವಸ್ಥೆ ರಚಿಸುವ ಗುರಿಯನ್ನು ಸಂಸ್ಥೆಯು ಹೊಂದಿದೆ.ಹಸಿರು ವಾತಾವರಣದಿಂದ ಇಲ್ಲಿಯ ಕ್ಯಾಂಪಸ್ ತಾಪಮಾನ ಹೊರಗಡೆಗಿಂತ ಎರಡು ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆ ಇದೆ. ಮಳೆನೀರು ಕೊಯ್ಲು ತಂತ್ರಗಳನ್ನು ಬಳಸಿಕೊಂಡು ಐದು ಕೊಳಗಳನ್ನು ಅಭಿವೃದ್ಧಿಪಡಿಸಲಾಗಿದೆ. ಇತ್ತೀಚಿನ ಸುಸ್ಥಿರತೆಯ ಪ್ರಯತ್ನದಲ್ಲಿ, ಪ್ರತಿ ಹನಿ ಮಳೆನೀರನ್ನು ಕೊಯ್ಲು, ಸಂಗ್ರಹಿಸುವುದು ಮತ್ತು ಪರಿಣಾಮಕಾರಿಯಾಗಿ ಮರುಬಳಕೆ ಮಾಡಲು ಮೂರು ಕ್ಯಾಸ್ಕೇಡಿಂಗ್ ಕೆರೆಗಳನ್ನು ರಚಿಸುವ ಕೆಲಸವನ್ನು ಸಹ ಐಐಟಿ ಶುರು ಮಾಡಿರುವುದು ಮಾದರಿ ಹೌದು.
ಆಡಳಿತ ಕಟ್ಟಡ, ಶೈಕ್ಷಣಿಕ ಬ್ಲಾಕ್, ಜ್ಞಾನ ಸಂಪನ್ಮೂಲ ಮತ್ತು ದತ್ತಾಂಶ ಕೇಂದ್ರ, ಕೇಂದ್ರ ಉಪನ್ಯಾಸ ರಂಗಮಂದಿರ, ವಾದ್ಯ ಸೌಲಭ್ಯ ಕೇಂದ್ರ, ಅಧ್ಯಾಪಕರ ವಸತಿ, ಹಾಸ್ಟೆಲ್, ಸಭಾಂಗಣ ಮತ್ತು ಕ್ಯಾಂಟೀನ್ ಸೇರಿದಂತೆ ಎಲ್ಲ 16 ಕ್ಯಾಂಪಸ್ ಬ್ಲಾಕ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಸೌರ ಫಲಕಗಳ ಅಳವಡಿಕೆಯನ್ನು ಸಂಸ್ಥೆ ಕೈಗೆತ್ತಿಕೊಂಡಿದೆ ಎಂದು ಡಾ. ಹೆಗ್ಡೆ ತಿಳಿಸಿದರು.
2030ರೊಳಗೆ ಸಂಪೂರ್ಣ ತ್ಯಾಜ್ಯ ಮರುಬಳಕೆ, ನೀರು ಮತ್ತು ವಿದ್ಯುತ್ ಸ್ವಾವಲಂಬನೆಯ ಸಾಧನೆಯ ಗುರಿಯನ್ನು ಧಾರವಾಡ ಐಐಟಿ ಹೊಂದಿದ್ದು, ಅದಕ್ಕೆ ಬೇಕಾದ ಉಪಕ್ರಮಗಳನ್ನು ಈಗಾಗಲೇ ಕೈಗೆತ್ತಿಕೊಂಡಿದೆ.