ಗದಗ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ಸರ್ಕಾರಿ ಪ್ರಥಮದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಂಘದಿಂದ ನಗರದ ಜಿಲ್ಲಾಡಳಿತ ಭವನದ ಎದುರು ನಡೆಯುತ್ತಿರುವ ಅತಿಥಿ ಉಪನ್ಯಾಸಕರ ಧರಣಿ ಸತ್ಯಾಗ್ರಹಕ್ಕೆ ಗಾನಯೋಗಿ ಪಂಚಾಕ್ಷರಿ ಪುಟ್ಟರಾಜ ಕಲಾ ಬಳಗದಿಂದ ಸಂಗೀತ ಸೇವೆ ಸಲ್ಲಿಸಿ ಬೆಂಬಲ ಸೂಚಿಸಿದರು.
ಈ ವೇಳೆ ತಾಪಂ ಮಾಜಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಮಾತನಾಡಿ, ಸರ್ಕಾರ ಶೀಘ್ರವಾಗಿ ಅತಿಥಿ ಉಪನ್ಯಾಸಕರಿಗೆ ನ್ಯಾಯ ಒದಗಿಸಬೇಕು. ಉಪನ್ಯಾಸಕರನ್ನು ಬೀದಿಯಲ್ಲಿ ಕುಳಿತು ನ್ಯಾಯ ಕೇಳುತ್ತಿರುವುದು ಖೇದಕರ ಸಂಗತಿ. ಅವರಿಗೆ ನ್ಯಾಯ ನೀಡಬೇಕು ಎಂದು ಆಗ್ರಹಿಸಿದರು.ಹಿರಿಯ ಪತ್ರಕರ್ತ ಜಗದೀಶ್ ಕುಲಕರ್ಣಿ ಮಾತನಾಡಿ, 15- 20 ವರ್ಷಗಳ ಕಾಲ ಬಹಳ ಕಡಿಮೆ ವೇತನದಲ್ಲಿ ವಿದ್ಯಾರ್ಥಿಗಳ ಭವಿಷ್ಯ ಕಟ್ಟಿದ ತಾವು ಅಧೈರ್ಯರಾಗಬೇಡಿ. ನ್ಯಾಯಯುತ ಹೋರಾಟಕ್ಕೆ ಬೆಲೆ ಸಿಕ್ಕೆ ಸಿಗುತ್ತದೆ ಎಂದರು. ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ರಾಜು ಹೆಬ್ಬಳ್ಳಿ ಮಾತನಾಡಿ, ಹೋರಾಟದಲ್ಲಿ ನಮಗೂ ಬೋಧಿಸಿದ ಗುರುಗಳಿದ್ದಾರೆ. ಅತಿಥಿ ಉಪನ್ಯಾಸಕರ ಸೇವೆಯಿಂದ ಮುಂದುವರಿಸುವುದರ ಮೂಲಕ ನ್ಯಾಯ ನೀಡಬೇಕು ಎಂದರು.ಅತಿಥಿ ಉಪನ್ಯಾಸಕರ ಸಂಘದ ರಾಜ್ಯಾಧ್ಯಕ್ಷ ಹನುಮಂತಗೌಡ ಆರ್. ಕಲ್ಮನಿ ಮಾತನಾಡಿ, ನಮ್ಮ ಬೇಡಿಕೆಯನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ ಅವರು ಈಡೇರಿಸಬೇಕು. ಸೇವೆಯಲ್ಲಿ ಇರುವವರನ್ನು ಮುಂದುವರಿಸಬೇಕು. ಕೌನ್ಸೆಲಿಂಗ್‌ಅನ್ನು ಸ್ಥಗಿತಗೊಳಿಸಬೇಕೆಂದು ಆಗ್ರಹಿಸಿದರು.ಈ ವೇಳೆ ಗದಗ, ಬಾಗಲಕೋಟೆ, ರಾಣಿಬೆನ್ನೂರು, ಅಂಕೋಲಾ, ಶಿರಸಿ, ಚಿಕ್ಕಮಗಳೂರು, ವಿಜಯನಗರ, ಹಾವೇರಿ, ಧಾರವಾಡ, ಕಡೂರ, ಕಲಘಟಗಿ, ಬಳ್ಳಾರಿ, ಹಾವೇರಿ, ತುಮಕೂರು, ಕೊಡಗು, ಬೆಳಗಾವಿ, ಉಡುಪಿ, ಕಾರ್ಕಳ, ಹೊಸಪೇಟೆ, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಿಂದ ನೂರಾರು ಅತಿಥಿ ಉಪನ್ಯಾಸಕರು ಇದ್ದರು.