ಹಾವೇರಿ: ಧರ್ಮಸ್ಥಳ ಕ್ಷೇತ್ರದ ಪೂಜ್ಯರು ಗ್ರಾಮೀಣ ಭಾಗದ ಜನರನ್ನು ಸಮಾಜದ ಮುಖ್ಯವಾಹಿನಿಗೆ ತಂದು ಅವರನ್ನು ಆರ್ಥಿಕವಾಗಿ ಸಶಕ್ತರನ್ನಾಗಿ ಮಾಡುತ್ತಿರುವುದು ಶ್ಲಾಘನೀಯ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಪ್ರಕಾಶ ಶೆಟ್ಟಿ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ರಾಜ್ಯದ ಲಕ್ಷಾಂತರ ಜನರು ನೆಮ್ಮದಿಯಿಂದ ಬದುಕುತ್ತಿದ್ದಾರೆ. ತಮ್ಮ ವೃದ್ಧಾಪ್ಯದಲ್ಲಿ ಸಂತೃಪ್ತಿಯಿಂದ ಜೀವನ ನಡೆಸಲು ಜ್ಞಾನವಿಕಾಸದ ವಾತ್ಸಲ್ಯ ಕಾರ್ಯಕ್ರಮ ಮಾದರಿಯಾಗಿದೆ. ಮಾತೃಶ್ರೀ ಹೇಮಾವತಿ ಅಮ್ಮನವರು ನೊಂದವರ ಕಣ್ಣೀರು ಒರೆಸುವ ಮಾತೆಯಾಗಿ ಅವರಿಗೆ ಮಾಸಾಶನ, ವಾತ್ಸಲ್ಯ ಕಿಟ್, ಪೌಷ್ಟಿಕ ಆಹಾರ ಮತ್ತು ಸೂರು ಇಲ್ಲದವರಿಗೆ ವಾತ್ಸಲ್ಯ ಮನೆಯನ್ನು ನಿರ್ಮಿಸಿ ಕೊಡುತ್ತಿದ್ದು, ಸುಬ್ಬಮ್ಮನವರು ಈ ಮನೆಯಲ್ಲಿ ನೆಮ್ಮದಿಯಿಂದ ಬಾಳುವ ಶಕ್ತಿಯನ್ನು ಮಂಜುನಾಥ ಸ್ವಾಮಿ ಅನುಗ್ರಹಿಸಲಿ ಎಂದರು.
ಜಿಲ್ಲಾ ನಿರ್ದೇಶಕ ಶಿವರಾಯ ಪ್ರಭು ಮಾತನಾಡಿ, ಪೂಜ್ಯರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಅನೇಕ ಜನಪರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಪ್ರಸ್ತುತ ಸಮಾಜದಲ್ಲಿ ಆಸ್ತಿಗೋಸ್ಕರ ಮನೆಯನ್ನು ಭಾಗ ಮಾಡಿಕೊಳ್ಳುವ ಮನಸ್ಥಿತಿ ಇರುವಾಗ ನೊಂದವರ ಭಾವನೆಗಳಿಗೆ ಸ್ಪಂದಿಸುವವರು ಯಾರೂ ಇಲ್ಲದಾಗಿದೆ. ಆದರೆ, ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಅಂತಹ ಅಸಹಾಯಕರನ್ನು ಗುರುತಿಸಿ ಅವರಿಗೆ ಜೀವನ ನಡೆಸಲು ಬೇಕಾದ ಎಲ್ಲ ಮೂಲಭೂತ ಅವಶ್ಯಕತೆಗಳನ್ನು ಒದಗಿಸಿಕೊಡುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಎಂದರು.ಗ್ರಾಪಂ ಮಾಜಿ ಅಧ್ಯಕ್ಷ ಮಹಾರುದ್ರಪ್ಪ ಕೋರಿ, ಗ್ರಾಪಂ ಉಪಾಧ್ಯಕ್ಷೆ ಸಕ್ಕಿನಬಾನು ನದಾಫ, ಸದಸ್ಯ ಮಲ್ಲಪ್ಪ ಬೀದಿಮನಿ, ಬಸವಂತಪ್ಪ ಅಗಡಿ, ತಾಲೂಕಿನ ಯೋಜನಾಕಾರಿ ಶ್ರೀಮೂರ್ತಿ ಶೆಟ್ಟಿ, ಜ್ಞಾನವಿಕಾಸ ಸಮನ್ವಯ ಅಧಿಕಾರಿ ವೀಣಾ, ವಲಯದ ಮೇಲ್ವಿಚಾರಕಿ ಜಯಶ್ರೀ, ವಲಯದ ಸೇವಾ ಪ್ರತಿನಿಧಿಗಳಾದ ಪಾರ್ವತಿ ಮತ್ತು ನೇತ್ರಾವತಿ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು.