ಧಾರವಾಡ:
ಸ್ಮಶಾನ ಜಾಗವಿಲ್ಲದೆ ತೀವ್ರ ಸಂಕಷ್ಟ ಅನುಭವಿಸುತ್ತಿದ್ದ ಜನರಿಗೆ ಅನುಕೂಲವಾಗಲೆಂಬ ಉದ್ದೇಶದಿಂದ ಸರ್ಕಾರದ ಪರಿಹಾರ, ಫಲಾಪೇಕ್ಷೆ ಇಲ್ಲದೆ ಸುಮಾರು ₹ 4 ಕೋಟಿ ಮೌಲ್ಯದ 1.15 ಎಕರೆ ಭೂಮಿಯನ್ನು ಮಲ್ಲಿಕಾರ್ಜುನ ಹಿರೇಮಠ ಎಂಬುವರು ದಾನ ಮಾಡಿ ನೂರಾರು ವರ್ಷಗಳ ಸಮಸ್ಯೆಗೆ ಅಂತ್ಯವಾಡಿದ್ದಾರೆ.ನಗರದ ಕಮಲಾಪುರ, ಮಾಳಾಪುರ, ಪತ್ರೇಶ್ವರಿ ನಗರದ ನಿವಾಸಿಗಳ ಬಹು ದಿನಗಳ ಸಮಸ್ಯೆಗೆ ಸ್ಪಂದಿಸುವ ಜತೆಗೆ ಸ್ವಾರ್ಥರಹಿತ ಸೇವೆ ತೋರಿದ ದಾನಿ ಮಲ್ಲಿಕಾರ್ಜುನ ಅವರನ್ನು ನಾಗರಿಕರು ಅದ್ಧೂರಿ ಸನ್ಮಾನಿಸಿ ಕೃತಜ್ಞತೆ ಸಲ್ಲಿಸಿದರು. ನಿವಾಸಿಗಳ ಹಿತಕ್ಕಾಗಿ ಮಲ್ಲಿಕಾರ್ಜುನ ಹಿರೇಮಠ ಅವರು ₹ 4 ಕೋಟಿಗೂ ಅಧಿಕ ಮೌಲ್ಯ ಬೆಲೆಬಾಳುವ ಸ್ವಂತ ಜಮೀನಿನಲ್ಲಿ ಸ್ಮಶಾನಕ್ಕಾಗಿ 1.15 ಎಕರೆ ಭೂಮಿಯನ್ನು ನೀಡಿದ್ದಾರೆ.
ಸಮಸ್ಯೆಗೆ ಪರಿಹಾರ:ವಿವಿಧ ಬಡಾವಣೆಗಳ ನಿವಾಸಿಗಳು, ಪತ್ರೇಶ್ವರಿ ನಗರದ ಹತ್ತಿರದ 4 ಎಕರೆ ಜಮೀನಿನಲ್ಲಿ ಬಹುದಿನಗಳಿಂದ ಶವ ಹೂಳುವ ಕಾರ್ಯ ಮಾಡುತ್ತ ಬಂದಿದ್ದರು. ಆದರೆ, ಈಚೇಗೆ ಮಲ್ಲಿಕಾರ್ಜುನ ಹಿರೇಮಠ ಅವರು ಈ ಜಮೀನನ್ನು ಪರಭಾರೆಗೆ ಮುಂದಾಗಿದ್ದರು. ಇದರಿಂದ ತಮ್ಮವರ ಅಂತ್ಯ ಸಂಸ್ಕಾರಕ್ಕೆ ಸೂಕ್ತ ಸ್ಮಶಾನ ಸ್ಥಳದ ಕೊರತೆ ಹಿನ್ನೆಲೆಯಲ್ಲಿ ಬಡಾವಣೆಗಳ ನಿವಾಸಿಗಳು ಪ್ರತಿಭಟನೆ ಕೂಡ ಮಾಡಿದ್ದರು. ಈ ಸಮಸ್ಯೆ ಅರಿತ ಹಿರೇಮಠ ಅವರು, ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ, ತಮ್ಮ ಜಮೀನು ಸ್ಮಶಾನಕ್ಕೆ ನೀಡಿದರು.
ಗೌರವ ಮತ್ತು ಅಭಿನಂದನೆ:ಸುಮಾರು ₹ 4 ಕೋಟಿ ಬೆಲೆ ಬಾಳುವ ಜಮೀನು ದಾನವಾಗಿ ನೀಡಿದ ಅವರ ಈ ಔದಾರ್ಯ ಮತ್ತು ಸಮಾಜಮುಖಿ ಕಾರ್ಯ ಗುರುತಿಸಿ, ಈ ಮೂರು ಬಡಾವಣೆಗಳ ನಾಗರಿಕರು ಅವರಿಗೆ ಶಾಲು ಹೊದಿಸಿ, ಹಾರ ಹಾಕಿ ಸನ್ಮಾನಿಸುವ ಮೂಲಕ ಕೃತಜ್ಞತೆ ಸಲ್ಲಿಸಿದರು. ಸನ್ಮಾನ ಸ್ವೀಕರಿಸಿದ ಮಲ್ಲಿಕಾರ್ಜುನ ಹಿರೇಮಠ, ಸಮಾಜದಲ್ಲಿನ ಒಂದು ಸಮಸ್ಯೆಗೆ ಪರಿಹಾರ ನೀಡಲು ನನ್ನ ಕೈಲಾದ ಅಳಿಲು ಸೇವೆ ಮಾಡಿದ್ದೇನೆ. ಅಂತಿಮ ವಿಧಿಗಳನ್ನು ನೆರವೇರಿಸಲು ಸ್ಥಳ ಇಲ್ಲದಿರುವುದು ಅರಿತು ಸಂತೋಷದಿಂದ ಜಮೀನು ನೀಡಿದ್ದೇನೆಂದು ತಿಳಿಸಿದರು. ಮಾಳಾಪುರ, ಕಮಲಾಪುರ, ಪತ್ರೇಶ್ವರಿ ನಗರದ ನಿವಾಸಿಗಳಿಗೆ ನೂರಾರು ವರ್ಷದಿಂದ ಸ್ಮಶಾನಕ್ಕೆ ಭೂಮಿ ಇರಲಿಲ್ಲ. ಸದ್ಯ ಮಲ್ಲಿಕಾರ್ಜುನ ಹಿರೇಮಠ ಅವರು, ಯಾವುದೇ ಫಲಾಪೇಕ್ಷೆ ಬಯಸದೆ, ಈ ಭೂಮಿ ದಾನ ಮಾಡಿದ ಕಾರಣ ನಿವಾಸಿಗಳು ನಿಟ್ಟುಸಿರು ಬಿಡುವಂತಾಗಿದೆ.
ಡಾ. ದೊಡ್ಡಪ್ಪ ಹೂಗಾರ ತಹಸೀಲ್ದಾರ