ಧಾರವಾಡ:
ಪೋಕ್ಸೋ ಕಾಯ್ದೆಯಡಿ ಬಂಧಿತನಾದ ಹುಬ್ಬಳ್ಳಿಯ ಫರವೇಜ್ ಧಾರವಾಡ ಕೇಂದ್ರ ಕಾರಾಗೃಹದಲ್ಲಿ ಇದ್ದುಕೊಂಡೇ, ತನ್ನ ಸಂಬಂಧಿಕರ ಜತೆಗೆ ಮೊಬೈಲ್‌ನಲ್ಲಿ ಮಾತನಾಡಿರುವ ಆಡಿಯೋ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ ಮುತಾಲಿಕ್ ಬಿಡುಗಡೆ ಮಾಡಿದರು. ಕಾರಾಗೃಹದ ಸಿಬ್ಬಂದಿಗೆ ಹಣ ನೀಡಿದರೆ ಎಲ್ಲವೂ ಲಭಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿ ಕಾರಾಗೃಹದ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ಈ ವೇಳೆ ಕಾರಾಗೃಹದ ಅಧೀಕ್ಷಕರೊಂದಿಗೆ ತೀವ್ರ ವಾಗ್ವಾದವೂ ನಡೆಯಿತು.
ಕೊನೆಗೆ ಜೈಲು ಅಧೀಕ್ಷಕರು ಮುತಾಲಿಕ್ ಅವರನ್ನು ಜೈಲಿನೊಳಗೆ ಕರೆದೊಯ್ದು ಆರೋಪಿ ಫರವೇಜ್‌ನನ್ನು ಭೇಟಿ ಮಾಡಿಸಿದರು. ಆರೋಪಿ ಸತ್ಯ ಒಪ್ಪಿಕೊಳ್ಳಲಿಲ್ಲ. ಹೊರಬಂದ ಮುತಾಲಿಕ್, ಆರೋಪಿ ಹತ್ತಿರ ಸಣ್ಣ-ಸಣ್ಣ ಮೊಬೈಲ್ ಇರುವುದಾಗಿ ದೂರಿದರು. ಜೈಲಿನಲ್ಲಿ ನಡೆಯುವ ಅಕ್ರಮ ಕುರಿತು ಸಮಗ್ರವಾಗಿ ಸಿಬಿಐ ತನಿಖೆಯಾಗಬೇಕು ಎಂದು ಒತ್ತಾಯಿಸಿದರು. ಪ್ರತಿಭಟನೆಯ ಒತ್ತಡಕ್ಕೆ ಮಣಿದ ಜೈಲು ಅಧೀಕ್ಷಕರು ತನಿಖೆ ನಡೆಸುವ ಭರವಸೆ ನೀಡಿದರು. ನಂತರವೇ ಪ್ರತಿಭಟನೆ ಹಿಂಪಡೆಯಲಾಯಿತು.