ಯುಎಇಯಿಂದ ಕಾರವಾರ ಬಂದರಿಗೆ ಬಂದ ಬೃಹತ್ ಹಡಗು

KannadaprabhaNewsNetwork |  
Published : Mar 14, 2026, 02:15 AM IST
ಕಾರವಾರ ಬಂದರಿಗೆ ಯುಎಯಿಯಿಂದ ಆಗಮಿಸಿದ ಹಡಗು. | Kannada Prabha

ಸಾರಾಂಶ

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹಾಗೂ ಇರಾನ್‌ನಿಂದ ಹಾರ್ಮುಜ್ ಜಲಸಂಧಿ ನಿರ್ಬಂಧದಂತಹ ಆತಂಕಕಾರಿ ವಾತಾವರಣದ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೊರಟಿದ್ದ ಬೃಹತ್ ಸರಕು ಸಾಗಣೆ ಹಡಗೊಂದು ಕೊನೆಗೂ ಸುರಕ್ಷಿತವಾಗಿ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರನ್ನು ಶುಕ್ರವಾರ ತಲುಪಿದೆ.

ಕಾರವಾರ: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಹಾಗೂ ಇರಾನ್‌ನಿಂದ ಹಾರ್ಮುಜ್ ಜಲಸಂಧಿ ನಿರ್ಬಂಧದಂತಹ ಆತಂಕಕಾರಿ ವಾತಾವರಣದ ನಡುವೆಯೂ ಯುನೈಟೆಡ್ ಅರಬ್ ಎಮಿರೇಟ್ಸ್‌ನಿಂದ ಹೊರಟಿದ್ದ ಬೃಹತ್ ಸರಕು ಸಾಗಣೆ ಹಡಗೊಂದು ಕೊನೆಗೂ ಸುರಕ್ಷಿತವಾಗಿ ಜಿಲ್ಲೆಯ ಕಾರವಾರದ ವಾಣಿಜ್ಯ ಬಂದರನ್ನು ಶುಕ್ರವಾರ ತಲುಪಿದೆ.

''ಚೆಂಗ್ ಎಕ್ಸ್'' (Cheng X) ಹೆಸರಿನ ಈ ಹಡಗು ಬೃಹತ್ ಪ್ರಮಾಣದ ಬಿಟುಮಿನ್ (ಡಾಂಬರು) ಹೊತ್ತು ಕಾರವಾರಕ್ಕೆ ಆಗಮಿಸಿದ್ದು, ಯುದ್ಧದ ಬಿಕ್ಕಟ್ಟು ಶುರುವಾದ ಬಳಿಕ ಯುಎಇಯಿಂದ ಕಾರವಾರಕ್ಕೆ ಬಂದ ಮೊದಲ ಹಡಗು ಇದಾಗಿದೆ.

ಸುಮಾರು 5,500 ಟನ್ ಬಿಟುಮಿನ್ ಹೊರುವ ಸಾಮರ್ಥ್ಯ ಹೊಂದಿರುವ ಈ ''ಚೆಂಗ್ ಎಕ್ಸ್'' ಹಡಗು, ಸದ್ಯ 3,100 ಟನ್ ಬಿಟುಮಿನ್ ಅನ್ನು ಕಾರವಾರಕ್ಕೆ ಹೊತ್ತು ತಂದಿದೆ. ಇರಾನ್ ಪಡೆಗಳು ಹಾರ್ಮುಜ್ ಜಲಸಂಧಿಯ ಮೂಲಕ ಸಂಚರಿಸುವ ಹಡಗುಗಳಿಗೆ ಕಟ್ಟುನಿಟ್ಟಿನ ನಿರ್ಬಂಧ ಹೇರಿರುವುದರಿಂದ, ಜಲಸಂಧಿಯ ಹೊರಭಾಗದಲ್ಲಿರುವ ಯುಎಇಯ ಕೋರ್ಫಕಾನ್ ಬಂದರಿನಿಂದ ಈ ಹಡಗು ಮಾ. 3ರಂದು ಭಾರತದತ್ತ ತನ್ನ ಪ್ರಯಾಣ ಬೆಳೆಸಿತ್ತು. ಅತ್ಯಂತ ಅಪಾಯಕಾರಿ ಹಾಗೂ ಉದ್ವಿಗ್ನ ಸನ್ನಿವೇಶದಲ್ಲಿ ಕಡಲ ಮಾರ್ಗವನ್ನು ಸವೆಸಿರುವ ಈ ನೌಕೆಯು ಕೊನೆಗೂ ನಿರಾಳವಾಗಿ ಕಾರವಾರದ ಕರಾವಳಿ ತಲುಪುವಲ್ಲಿ ಯಶಸ್ವಿಯಾಗಿದೆ.

ಸದ್ಯ ಕಾರವಾರದಲ್ಲಿ ಬಿಟುಮಿನ್ ಅನ್‌ಲೋಡ್ ಮಾಡುತ್ತಿರುವ ಈ ಹಡಗು, ಶುಕ್ರವಾರ ಸಂಜೆಯೇ ಮರಳಿ ಯುಎಇಗೆ ತನ್ನ ಪಯಣ ಬೆಳೆಸಬೇಕಿದೆ. ಆದರೆ, ಮಧ್ಯಪ್ರಾಚ್ಯದಲ್ಲಿ ಯುದ್ಧದ ಕಾರ್ಮೋಡ ಮತ್ತಷ್ಟು ದಟ್ಟವಾಗಿರುವುದರಿಂದ ಹಾಗೂ ಸಮುದ್ರ ಮಾರ್ಗದಲ್ಲಿ ದಾಳಿಯ ಭೀತಿ ಹೆಚ್ಚಿರುವುದರಿಂದ, ಸುರಕ್ಷಿತವಾಗಿ ವಾಪಾಸ್ ಯುಎಇಗೆ ಹೇಗೆ ಹೋಗುವುದು ಎಂಬ ಚಿಂತೆ ಇದೀಗ ಹಡಗಿನ ಸಿಬ್ಬಂದಿಯನ್ನು ಕಾಡಲಾರಂಭಿಸಿದೆ. ಜಾಗತಿಕ ಬಿಕ್ಕಟ್ಟು ಹಾಗೂ ಕಡಲ ಹಾದಿಯ ಅನಿಶ್ಚಿತತೆಯಿಂದಾಗಿ ಸಿಬ್ಬಂದಿ ಆತಂಕದಲ್ಲೇ ಮುಂದಿನ ನಡೆಯ ಬಗ್ಗೆ ಚಿಂತನೆ ನಡೆಸುವಂತಾಗಿದೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸಾಹಿತ್ಯ ಕ್ಷೇತ್ರದಲ್ಲಿ ಕೊಪ್ಪಳ ರಾಜ್ಯಕ್ಕೆ ಮಾದರಿ : ರಮೇಶ ಬನ್ನಿಕೊಪ್ಪ
ತೊಡೆ ತಟ್ಟಿ ಮಣ್ಣು ಮುಕ್ಕಿಸಿದ ಪೈಲ್ವಾನರು!