ಮಂಡ್ಯ ನಿರ್ಮಿತಿ ಕೇಂದ್ರದ ಪಿಎಂ ಹುದ್ದೆಗೆ ಅಕ್ರಮ ನೇಮಕಾತಿ

KannadaprabhaNewsNetwork | Published : May 7, 2025 12:46 AM
Follow Us

ಸಾರಾಂಶ

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಬಿ.ಜಯಪ್ರಕಾಶ್ ಅವರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿದ್ದು, ಈ ನೇಮಕವನ್ನು ರದ್ದುಪಡಿಸಿ ಕಾನೂನುಬಾಹಿರ ನೇಮಕಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಡ್ಯ

ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಹುದ್ದೆಗೆ ಬಿ.ಜಯಪ್ರಕಾಶ್ ಅವರನ್ನು ಕಾನೂನುಬಾಹಿರವಾಗಿ ನೇಮಕ ಮಾಡಿದ್ದು, ಈ ನೇಮಕವನ್ನು ರದ್ದುಪಡಿಸಿ ಕಾನೂನುಬಾಹಿರ ನೇಮಕಕ್ಕೆ ಕಾರಣರಾದ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸುವಂತೆ ಸಾಮಾಜಿಕ ಕಾರ್ಯಕರ್ತ ಕೆ.ಆರ್.ರವೀಂದ್ರ ಅವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.

ಮೈಸೂರು ನಿರ್ಮಿತಿ ಕೇಂದ್ರ ಸೇರಿದಂತೆ ಇತರೆ ನಾಲ್ಕು ಸಂಸ್ಥೆಗಳಲ್ಲಿ ಕೆಲಸ ಮಾಡಿರುವುದಾಗಿ ಹತ್ತು ವರ್ಷಗಳ ಅನುಭವದ ಪತ್ರಗಳನ್ನು ನೀಡಿದ್ದಾರೆ. ಇಲ್ಲಿ ಕಾರ್ಯನಿರ್ವಹಿಸದಿದ್ದರೂ ಯೋಜನಾ ವ್ಯವಸ್ಥಾಪಕರ ಹುದ್ದೆ ಪಡೆಯಲು ಕೆಲಸ ನಿರ್ವಹಿಸಿರುವ ಬಗ್ಗೆ ಸುಳ್ಳು ದಾಖಲೆ ಸೃಷ್ಟಿಸಿದ್ದಾರೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ನೇಮಕಾತಿ ಆದೇಶ ನೀಡಿಲ್ಲ:

ಬಿ.ಜಯಪ್ರಕಾಶ್ ಅವರು ಮೈಸೂರಿನ ನಿರ್ಮಿತಿ ಕೇಂದ್ರದಲ್ಲಿ ಸೈಟ್ ಎಂಜಿನಿಯರ್ ಆಗಿ ಸೆಪ್ಟೆಂಬರ್ ೨೦೦೯ ರಿಂದ ಫೆಬ್ರವರಿ ೨೦೧೧ರ ವರೆಗೆ ಕರ್ತವ್ಯನಿರ್ವಹಿಸಿದ್ದು, ಪ್ರತಿ ತಿಂಗಳು ಸಂಬಳ ಪಡೆದಿರುವ ದೃಢೀಕೃತ ವೋಚರ್ ಪ್ರತಿಗಳನ್ನು ನೀಡಿದ್ದಾರೆ. ಆದರೆ, ಬಿ..ಜಯಪ್ರಕಾಶ್‌ರವರಿಗೆ ನೇಮಕಾತಿ ಆದೇಶ ನೀಡಿಲ್ಲ. ಆದರೆ, ಗುತ್ತಿಗೆ ಪ್ರಮಾಣಪತ್ರವನ್ನು ನೀಡಿದ್ದು ಇದೊಂದು ತಾತ್ಕಾಲಿಕ ನೇಮಕಾತಿಯಾಗಿರುತ್ತದೆ. ಈ ಗುತ್ತಿಗೆ ಕರಾರು ಒಪ್ಪಂದ ಮತ್ತು ಪ್ರಮಾಣ ಪತ್ರವನ್ನು ೯ ಅಕ್ಟೋಬರ್ ೨೦೦೯ರಂದು ಬಿ.ಜಯಪ್ರಕಾಶ್‌ಗೆ ನೀಡಿದ್ದಾರೆ. ಆದರೆ, ೬ ಅಕ್ಟೋಬರ್ ೨೦೦೯ರಂದು ೭ ಸಾವಿರ ರು. ಸಂಬಳವನ್ನು ವೋಚರ್ ಮೂಲಕ ಪಡೆದಿದ್ದಾರೆ. ಇವರು ಕರ್ತವ್ಯಕ್ಕೆ ಸೇರುವ ಮೊದಲೇ ಒಂದು ತಿಂಗಳ ಸಂಬಳ ಪಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

17 ತಿಂಗಳು ವೋಚರ್‌ ಮೂಲಕ ಸಂಬಳ:

ಸೈಟ್ ಎಂಜಿನಿಯರ್ ಆಗಿ ೧೭ ತಿಂಗಳ ಸಂಬಳವನ್ನು ವೋಚರ್ ಮುಖಾಂತರ ಪಡೆದಿದ್ದು, ಈ ವೋಚರ್‌ಗಳಿಗೆ ನಂಬರ್ ಇರುವುದಿಲ್ಲ. ಈ ವೋಚರ್‌ಗಳನ್ನು ಬಿ.ಜಯಪ್ರಕಾಶ್ ಅವರಿಗೆ ಅನುಕೂಲ ಮಾಡಿಕೊಡಲು ಮೈಸೂರು ನಿರ್ಮಿತಿ ಕೇಂದ್ರದ ಹಿಂದಿನ ಯೋಜನಾ ನಿರ್ದೇಶಕ ಎಚ್.ಬಿ.ಸತೀಶ್ ಹಾಗೂ ಹಾಲಿ ಯೋಜನಾ ನಿರ್ದೇಶಕ ಮಹೇಶ್‌ಕುಮಾರ್ ಅಧಿಕಾರ ದುರುಪಯೋಗಪಡಿಸಿಕೊಂಡು ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿದ್ದಾರೆ ಎಂದು ಆರೋಪಿಸಿದರು.

ಸಂಬಂಧಿಗಳ ಕಂಪನಿಯಿಂದ ಅನುಮತಿಪತ್ರ:

ಅಲ್ಲದೇ, ಬಿ.ಜಯಪ್ರಕಾಶ್ ಅವರು ಮೈಸೂರಿನ ಆರ್.ಕೆ.ಅಸೋಸಿಯೇಟ್ಸ್, ದೀಪು ಕನ್ಸಲ್ಟೆಂಟ್, ಆರ್.ಕೆ.ಬ್ರದರ್ಸ್‌ ಇನ್‌ಪ್ರಾ ಪ್ರೋ ಪ್ರೆವೈಂಚರ್ಸ್‌ ಲಿಮಿಟೆಡ್ ಈ ಕಂಪನಿಗಳಲ್ಲಿ ಯಾವುದೇ ಕೆಲಸಗಳನ್ನು ನಿರ್ವಹಿಸದಿದ್ದರೂ ಕೆಲಸ ನಿರ್ವಹಿಸಿರುವ ಬಗ್ಗೆ ಅನುಭವದ ಪತ್ರಗಳನ್ನು ಸೃಷ್ಟಿಮಾಡಿದ್ದಾರೆ. ಈ ಕಂಪನಿಗಳ ಮಾಲೀಕರಾದ ಜಯಕೃಷ್ಣೇಗೌಡ ಮತ್ತು ಶಿವರಾಮು ಅವರು ಬಿ.ಜಯಪ್ರಕಾಶ್‌ರವರ ತಾಯಿಯ ಸಹೋದರರು. ದೊಡ್ಡ ಮಟ್ಟದ ಗುತ್ತಿಗೆದಾರರಾಗಿದ್ದು ಸಾಕಷ್ಟು ರಾಜಕೀಯ, ಹಣದ ಪ್ರಭಾವ ಹೊಂದಿದವರಾಗಿದ್ದಾರೆ ಎಂದರು.

ಕೆ.ಆರ್.ಪೇಟೆ ತಾಲೂಕಿನವರಾದ ಜಯಕೃಷ್ಣೇಗೌಡ, ಶಿವರಾಮು ಕೆ.ಆರ್.ಪೇಟೆ ತಹಸೀಲ್ದಾರ್, ಪಾಂಡವಪುರ ಉಪ ವಿಭಾಗಾಧಿಕಾರಿ ಮತ್ತು ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಎಲ್.ನಾಗರಾಜು ಅವರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರು. ಈ ಕಾರಣದಿಂದ ಬಿ.ಜಯಪ್ರಕಾಶ್ ಅವರಿಗೆ ಅನುಕೂಲ ಮಾಡಿಕೊಡಲು ಸುಳ್ಳು ತನಿಖಾ ವರದಿ ನೀಡಿದ್ದಾರೆ ಎಂದು ಆರೋಪಿಸಿದರು.

ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಅಪರ ಜಿಲ್ಲಾಧಿಕಾರಿ ನೇತೃತ್ವದ ಸಮಿತಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿದ್ದು, ಅರ್ಹರ ಪಟ್ಟಿಯಲ್ಲಿ ಬಿ.ಜಯಪ್ರಕಾಶ್ ಆರನೇ ಅಭ್ಯರ್ಥಿಯಾಗಿದ್ದರೂ ಅವರನ್ನು ಮೊದಲನೆಯವರಾಗಿ ಆಯ್ಕೆ ಮಾಡಿಕೊಳ್ಳಲಾಗಿದೆ ಎಂದು ದೂರಿದರು.

ಅನುಭವಿಲ್ಲದಿರುವುದಕ್ಕೆ ಡೀಸಿ ಪತ್ರ ಸಾಕ್ಷಿ:

ಬಿ.ಜಯಪ್ರಕಾಶ್ ಅವರಿಗೆ ಅನುಭವವಿಲ್ಲದಿರುವುದನ್ನು ಸಾಬೀತುಪಡಿಸಲು ಮಂಡ್ಯ ಜಿಲ್ಲಾಧಿಕಾರಿಗಳು ೧೦ ನವೆಂಬರ್ ೨೦೨೩ರಂದು ಹಾಗೂ ೨೦ ಜುಲೈ ೨೦೨೪ರಂದು ಅಧಿಕೃತ ಜ್ಞಾಪನ ಹೊರಡಿಸಿರುವುದು ಸಾಕ್ಷಿಯಾಗಿದೆ. ಅದರಲ್ಲಿ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ತಾತ್ಕಾಲಿಕವಾಗಿ ನೇಮಕಗೊಂಡಿರುವ ಬಿ.ಜಯಪ್ರಕಾಶ್ ಅವರಿಗೆ ಕಡತಗಳ ನಿರ್ವಹಣೆ ಮತ್ತು ಕಡತಗಳನ್ನು ಮಂಡಿಸುವ ಬಗ್ಗೆ ಆಡಳಿತಾತ್ಮಕವಾಗಿ ಅನುಭವದ ಕೊರತೆ ಇದೆ. ಆದ್ದರಿಂದ ಆಡಳಿತಾತ್ಮಕ ಹಿತದೃಷ್ಟಿಯಿಂದ ಇನ್ನು ಮುಂದೆ ಮಂಡ್ಯ ನಿರ್ಮಿತಿ ಕೇಂದ್ರದಿಂದ ಜಿಲ್ಲಾಧಿಕಾರಿ ಅನುಮೋದನೆಗೆ ಸಲ್ಲಿಕೆಯಾಗುವ ಎಲ್ಲಾ ಕಡತಗಳನ್ನು ಜಿಲ್ಲಾ ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರರು ಪರಿಶೀಲಿಸಿ ಟಿಪ್ಪಣಿ ನಮೂದಿಸಿ ಸಲ್ಲಿಸುವಂತೆ ನಿರ್ದೇಶಿಸಿರುವುದು ಗಮನಾರ್ಹ ಸಂಗತಿ ಎಂದರು.

ಅಧಿಕಾರಿಗಳಿಂದ ಅಧಿಕಾರ ದುರುಪಯೋಗ:

ಬಿ.ಜಯಪ್ರಕಾಶ್ ಅವರಿಗೆ ಅನುಕೂಲ ಮಾಡಿಕೊಡಲು ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಮೈಸೂರು ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಹೇಶ್‌ಕುಮಾರ್, ಕಾನೂನುಬಾಹಿರವಾಗಿ ಯೋಜನಾ ವ್ಯವಸ್ಥಾಪಕರ ಹುದ್ದೆಗೆ ಆಯ್ಕೆ ಮಾಡಿ ಸುಳ್ಳು ತನಿಖಾ ವರದಿ ನೀಡಿ ಅಧಿಕಾರ ದುರುಪಯೋಗಪಡಿಸಿಕೊಂಡಿರುವ ಅಪರ ಜಿಲ್ಲಾಧಿಕಾರಿಯಾಗಿದ್ದ ಡಾ.ಎಚ್.ಎಲ್.ನಾಗರಾಜು, ಲೋಕೋಪಯೋಗಿ ಇಲಾಖೆ ಕಾರ್ಯಪಾಲಕ ಅಭಿಯಂತರ ಹರ್ಷ, ಅರಕೆರೆ ಸರ್ಕಾರಿ ಪಾಲಿಟೆಕ್ನಿಕ್ ಸಿವಿಲ್ ವಿಭಾಗದ ಮುಖ್ಯಸ್ಥ ಬಿ.ಶಿವರಾಜು, ಪಿಇಎಸ್ ಎಂಜಿನಿಯರಿಂಗ್ ಕಾಲೇಜು ಸಿವಿಲ್ ವಿಭಾಗದ ಮುಖ್ಯಸ್ಥ ಟಿ.ಎಂ.ಪ್ರಕಾಶ್ ಅವರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿದರು.

ಮೂವರು ವಜಾಗೆ ಶಿಫಾರಸ್ಸಾಗಿದ್ದರೂ ಆದೇಶವಾಗಿಲ್ಲ:

ಪ್ರಭಾವಕ್ಕೆ ಮಣಿದು ಜಿಲ್ಲಾಧಿಕಾರಿ ಹಿಂಜರಿಕೆ

ಕನ್ನಡಪ್ರಭ ವಾರ್ತೆ ಮಂಡ್ಯ

ಡಿಪ್ಲೊಮಾ ಪಾಸಾಗಿರುವ ನಕಲಿ ಅಂಕಪಟ್ಟಿ ಹಾಗೂ ಬಿ-ಟೆಕ್ ಪದವಿ ಗಳಿಸಿರುವ ನಕಲಿ ಸರ್ಟಿಫಿಕೇಟ್‌ಗಳನ್ನು ನೀಡಿ ಮಂಡ್ಯ ನಿರ್ಮಿತಿ ಕೇಂದ್ರದ ಮೂವರು ಸೈಟ್ ಎಂಜಿನಿಯರ್‌ಗಳನ್ನು ಹುದ್ದೆಯಿಂದ ಕೈಬಿಡುವಂತೆ ತನಿಖಾ ತಂಡ ಶಿಫಾರಸು ಮಾಡಿ ಹದಿನೈದು ದಿನಗಳಾದದರೂ ಇದುವರೆಗೂ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿರುವುದು ಸಾರ್ವಜನಿಕ ವಲಯದಲ್ಲಿ ಅವರ ಬಗ್ಗೆ ತಪ್ಪು ಭಾವನೆ ಮೂಡುವಂತೆ ಮಾಡಿದೆ ಎಂದು ಸಾಮಾಜಿಕ ಹೋರಾಟಗಾರ ಕೆ.ಆರ್.ರವೀಂದ್ರ ಹೇಳಿದರು.

ಜನಪರವಾಗಿ ಕಾರ್ಯನಿರ್ವಹಿಸುತ್ತಿರುವ ಜಿಲ್ಲಾಧಿಕಾರಿ ಡಾ.ಕುಮಾರ ಅವರ ಬಗ್ಗೆ ಜನಮಾನಸದಲ್ಲಿ ಒಳ್ಳೆಯ ಅಭಿಪ್ರಾಯವಿದೆ. ಆದರೆ, ಈ ಪ್ರಕರಣದಲ್ಲಿ ನಕಲಿ ಎಂಜಿನಿಯರ್‌ಗಳನ್ನು ಸಂರಕ್ಷಣೆ ಮಾಡುತ್ತಿರುವುದು ಅವರ ಕಾರ್ಯದಕ್ಷತೆಗೆ ಕಪ್ಪುಚುಕ್ಕೆ ಮೂಡಿಸುವಂತಿದೆ. ರಾಜಕೀಯ ಒತ್ತಡ, ಪ್ರಭಾವಕ್ಕೆ ಮಣಿದು ನಕಲಿ ಎಂಜಿನಿಯರ್‌ಗಳನ್ನು ಹುದ್ದೆಯಲ್ಲಿ ಮುಂದುವರೆಸುತ್ತಾ ಸಂಬಳ ನೀಡುತ್ತಿರುವುದು ಸಾರ್ವಜನಿಕರಿಗೆ ಎಂತಹ ಸಂದೇಶ ರವಾನೆಯಾಗುತ್ತಿದೆ ಎಂಬುದನ್ನು ಜಿಲ್ಲಾಧಿಕಾರಿಗಳು ಈಗಲಾದರೂ ಅರಿತು ಅವರನ್ನು ಮೂವರನ್ನು ಹುದ್ದೆಯಿಂದ ಕೈಬಿಡುವುದಕ್ಕೆ ಕ್ರಮ ವಹಿಸುವಂತೆ ಒತ್ತಾಯಿಸಿದರು.