ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನಾನು ಏನು ಆರೋಪ ಮಾಡಿದ್ದೇನೆ. ಎಂಬುದನ್ನು ಸರಿಯಾಗಿ ಗ್ರಹಿಸದ ಮಾಜಿ ಶಾಸಕ ಹರತಾಳು ಹಾಲಪ್ಪ ಮತ್ತು ಮಾಜಿ ವಿಧಾನ ಪರಿಷತ್ ಸದಸ್ಯ ರುದ್ರೇಗೌಡರು ನಾನು ಯಡಿಯೂರಪ್ಪನವರಲ್ಲಿ ಕ್ಷಮೆ ಯಾಚಿಸಬೇಕೆಂದಿದ್ದಾರೆ. ಆದರೆ ತಪ್ಪು ಮಾಡಿರುವುದು ನಾನಲ್ಲ, ತಪ್ಪು ಮಾಡಿರುವುದು ಯಡಿಯೂರಪ್ಪ ಅವರ ಪುತ್ರರಾದ ರಾಘವೇಂದ್ರ ಮತ್ತು ವಿಜಯೇಂದ್ರ. ಹೀಗಿರುವಾಗ ನಾನೇಕೆ ಕ್ಷಮೆ ಕೇಳಲಿ ಎಂದು ಮರು ಪ್ರಶ್ನೆ ಹಾಕಿದರು.
ಯಡಿಯೂರಪ್ಪ ಅವರ ಬಗ್ಗೆ ಈಗಲೂ ನನಗೆ ಗೌರವವಿದೆ. ನನ್ನ ಬೆಳವಣಿಗೆಯಲ್ಲಿ ಅವರ ಪಾತ್ರವಿದೆಯಾದರೂ, ಬೇರು ನಾನೇ. ನನ್ನ ಬೆಳವಣಿಗೆಗೆ ಸಹಾಯ ಮಾಡಿದ ರೀತಿಯಲ್ಲಿಯೇ ಯಾವ್ಯಾವ ಸಂದರ್ಭದಲ್ಲಿ ನನ್ನ ಬೆಳವಣಿಗೆಯನ್ನು ಕಟ್ ಮಾಡಿದರು ಎಂಬುದನ್ನು ಕೂಡ ಯಡಿಯೂರಪ್ಪನವರಾದಿಯಾಗಿ ಎಲ್ಲರೂ ನೆನಪಿಸಿಕೊಳ್ಳಬೇಕು ಎಂದರು.ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಪುತ್ರರಾದ ಬಿ.ವೈ.ವಿಜಯೇಂದ್ರ ಹಾಗೂ ಬಿ.ವೈ.ರಾಘವೇಂದ್ರ ಅವರ ಹಗರಣಗಳ ಕುರಿತು, ಆಸ್ತಿಯ ಕುರಿತು ಕಳೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ್ದೆ. ಆದರೆ, ಬಿ.ಎಸ್.ಯಡಿಯೂರಪ್ಪನವರ ಬಗ್ಗೆ ನಾನೇನು ಮಾತನಾಡಿರಲಿಲ್ಲ. ಬಿಜೆಪಿ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರಿಗೆ ತೀರ್ಥಹಳ್ಳಿ ರಸ್ತೆಯಲ್ಲಿರುವ ಸುಮಾರು 5.36 ಎಕರೆ ಜಮೀನು ಎಲ್ಲಿಂದ ಬಂತು? ಮೊದಲಿಗೆ ಅದನ್ನು ಯಾರು ತೆಗೆದುಕೊಂಡಿದ್ದರು? ಬಳಿಕ ಈ ಜಮೀನು ಕೆಐಎಡಿಬಿಗೆ ಏಕೆ ವರ್ಗಾಯಿಸಿದರು. ಅವರದೇ ಜಮೀನನ್ನು ಕೆಐಎಡಿಬಿ ಸ್ವಾಧೀನಪಡಿಸಿಕೊಳ್ಳುವಂತೆ ಮಾಡಿ, ಬಳಿಕ ಕೆಐಎಡಿಬಿಯಿಂದ ತಮಗೆ ಮಂಜೂರು ಮಾಡಿಸಿಕೊಂಡರು. ಬಹುಶಃ ಇದು ದೇಶದಲ್ಲೇ ಪ್ರಥಮವಿರಬಹುದು ಎಂದು ವ್ಯಂಗ್ಯವಾಡಿದರು.
ಈ ವಿಷಯದ ಬಗ್ಗೆ ಮಾತನಾಡುವುದನ್ನು ಬಿಟ್ಟು ಪತ್ರಿಕಾಗೋಷ್ಠಿ ನಡೆಸಿದ ಬಿಜೆಪಿಯ ಮಹಾನುಭಾವರು ನನ್ನನ್ನು ಕ್ಷಮೆ ಕೇಳುವಂತೆ ಒತ್ತಾಯಿಸಿ ತಪ್ಪನ್ನೇ ಮರೆಸುತ್ತಿದ್ದಾರೆ. ಬಿ.ವೈ.ರಾಘವೇಂದ್ರ ಮತ್ತು ಬಿ.ವೈ.ವಿಜಯೇಂದ್ರ ಅವರ ಈ ಹೊಸ ಸೂತ್ರದ ರಹಸ್ಯ ಬಯಲಾಗಬೇಕು ಎಂದು ಹೇಳಿದರು.
ಈ ಇಬ್ಬರು ನಾಯಕರು ಬಿ.ಎಸ್.ಯಡಿಯೂರಪ್ಪನವರ ಪರವಾಗಿ ಈವರೆಗೆ ಮಾತನಾಡಿರಲಿಲ್ಲ. 2009ರಲ್ಲಿ ರಾಘವೇಂದ್ರ ಅವರನ್ನು ಸಂಸದರನ್ನಾಗಿ ಮಾಡುವ ಸಂದರ್ಭದಲ್ಲಿ ಇದೇ ಯಡಿಯೂರಪ್ಪನವರು ರುದ್ರೇಗೌಡರಿಗೆ ಸೀಟು ಕೊಡುವ ಭರವಸೆ ನೀಡಿ ಸಿಹಿಯನ್ನೂ ಹಂಚಿದ್ದರು. ಮಗನಿಗೆ ಟಿಕೆಟ್ ಕೊಡುವುದಿಲ್ಲ ಎಂದು ಪ್ರಮಾಣ ಮಾಡಿದ್ದರು. ಕೊನೆಗೆ ಆಗಿದ್ದೇನು? ಬಹುಶಃ ಇದೆಲ್ಲ ರುದ್ರೇಗೌಡರಿಗೆ ಅರ್ಥವಾಗಬೇಕು ಎಂದು ಟಾಂಗ್ ನೀಡಿದರು.ಗೋಷ್ಠಿಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ, ಕಾಂಗ್ರೆಸ್ ಮುಖಂಡರಾದ ಎಸ್.ಟಿ. ಹಾಲಪ್ಪ, ವೈ.ಹೆಚ್.ನಾಗರಾಜ್, ಜಿ.ಡಿ. ಮಂಜುನಾಥ್, ಚಂದ್ರಭೂಪಾಲ್, ಎಸ್.ಕೆ. ಮರಿಯಪ್ಪ, ಧೀರರಾಜ್, ಯು. ಶಿವಾನಂದ್, ರಾಘವೇಂದ್ರ, ಶಿ.ಜು.ಪಾಶಾ, ನಾಗರಾಜ್, ಹನುಮಂತು, ಲೋಕೇಶ್, ಲಕ್ಷ್ಮಣ್ ಮುಂತಾದವರಿದ್ದರು.ಬಾಕ್ಸ್:
ದೊಡ್ಡ ರಾಜವಂಶಕ್ಕೆ ಸೇರಿದವರು! ಈ ಇಬ್ಬರು ಸಹೋದರರ ಆಸ್ತಿಗಳು ಎಲ್ಲೆಲ್ಲಿವೆ ಎಂದು ನೋಡಿದರೆ ಆಶ್ಚರ್ಯವಾಗುತ್ತದೆ. ಬಸವಾಪುರದಲ್ಲಿ 380 ಎಕರೆಯನ್ನು ಯಾರು ತೆಗೆದುಕೊಂಡರು? ಭದ್ರಾವತಿಯ ಜಂಕ್ಷನ್ ಬಳಿ ಇರುವ ಸುಮಾರು 70 ಎಕರೆ ಜಮೀನು ಯಾವ ಟ್ರಸ್ಟ್ ಹೆಸರಿ ನಲ್ಲಿದೆ? ಶಿಕಾರಿಪುರದಲ್ಲಿ ಅದೆಷ್ಟು ಆಸ್ತಿಗಳಿವೆ? ಬೆಂಗಳೂರು ಮತ್ತು ಮೈಸೂರಿನಲ್ಲಿ ಬೇನಾಮಿ ಹೆಸರಿನಲ್ಲಿ ಬಹು ಕೋಟಿ ಬೆಲೆಬಾಳುವ ಎಷ್ಟು ಆಸ್ತಿಗಳಿವೆ. ಅವರು ನಿಜಕ್ಕೂ ಬಹುದೊಡ್ಡ ರಾಜವಂಶಕ್ಕೆ ಸೇರಿದವರು. ನಾನೋ ಸಾಮಾನ್ಯ ಮನುಷ್ಯ. ನನ್ನ ಆರೋಪವನ್ನು ರುದ್ರೇಗೌಡರು ಮತ್ತು ಈ ಹಾಲಪ್ಪನವರು ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಟೀಕಿಸಿದರು. ಈ ಎಲ್ಲ ಅಕ್ರಮ ಆಸ್ತಿಗಳ ಕುರಿತು ತನಿಖೆ ನಡೆಯಬೇಕು ಎಂದು ಆಗ್ರಹಪಡಿಸಿದರು.------------------------------------
ಶಿವಮೊಗ್ಗದಲ್ಲಿ ಮಾಜಿ ಸಂಸದ ಆಯನೂರು ಮಂಜುನಾಥ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದರು.