ತಾಪಂ ಇ.ಒ.ಗಳ ಕಾನೂನುಬಾಹಿರ ನಿಯೋಜನೆ ಸಲ್ಲದು

KannadaprabhaNewsNetwork |  
Published : Aug 07, 2025, 12:45 AM IST
6ಕೆಡಿವಿಜಿ2-ದಾವಣಗೆರೆಯಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ ಕುಂದೂರು ಬಿ.ಪ್ರಸನ್ನಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ತಾಲೂಕು ಪಂಚಾಯಿತಿ ಇ.ಒ.ಗಳಾಗಿ ನಿಯಮಬಾಹಿರವಾಗಿ ನಿಯೋಜನೆಗೊಂಡ ಇಬ್ಬರೂ ಅಧಿಕಾರಿಗಳನ್ನು 7 ದಿನದೊಳಗೆ ಹುದ್ದೆಯಿಂದ ಬಿಡುಗಡೆಗೊಳಿಸಿ, ಮಾತೃಇಲಾಖೆಗೆ ವಾಪಸ್‌ ಕಳಿಸಬೇಕು. ಇಲ್ಲದಿದ್ದರೆ ಪಿಸಿಆರ್‌, ಪಿಐಎಲ್‌ ದಾಖಲಿಸುವುದಾಗಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಕುಂದೂರು ಬಿ.ಪ್ರಸನ್ನಕುಮಾರ ಎಚ್ಚರಿಸಿದ್ದಾರೆ.

- ವಾರದೊಳಗೆ ಪ್ರಭಾರ ಇ.ಒ.ಗಳನ್ನು ಮಾತೃಇಲಾಖೆಗೆ ಕಳಿಸಿ: ಪ್ರಸನ್ನಕುಮಾರ ಆಗ್ರಹ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ತಾಲೂಕು ಪಂಚಾಯಿತಿ ಇ.ಒ.ಗಳಾಗಿ ನಿಯಮಬಾಹಿರವಾಗಿ ನಿಯೋಜನೆಗೊಂಡ ಇಬ್ಬರೂ ಅಧಿಕಾರಿಗಳನ್ನು 7 ದಿನದೊಳಗೆ ಹುದ್ದೆಯಿಂದ ಬಿಡುಗಡೆಗೊಳಿಸಿ, ಮಾತೃಇಲಾಖೆಗೆ ವಾಪಸ್‌ ಕಳಿಸಬೇಕು. ಇಲ್ಲದಿದ್ದರೆ ಪಿಸಿಆರ್‌, ಪಿಐಎಲ್‌ ದಾಖಲಿಸುವುದಾಗಿ ಜಿಪಂ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅವರಿಗೆ ಸಾಮಾಜಿಕ ಕಾರ್ಯಕರ್ತ ಕುಂದೂರು ಬಿ.ಪ್ರಸನ್ನಕುಮಾರ ಎಚ್ಚರಿಸಿದರು.

ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಪಂ ಇಒ ಹುದ್ದೆಯು ಮ್ಯಾಜಿಸ್ಟ್ರೇಟ್ ಅಧಿಕಾರ ಹೊಂದಿರುವ ಕೆಎಎಸ್‌ ಕೇಡರ್ ಹುದ್ದೆಯಾಗಿದೆ. ಇಂತಹ ಹುದ್ದೆ ಪ್ರಭಾರವನ್ನು ಕಡಿಮೆ ದರ್ಜೆ ಸಾಂಖ್ಯಿಕ ಇಲಾಖೆಯ ಸಹಾಯಕ ಸಾಂಖ್ಯಿಕ ಅಧಿಕಾರಿಗೆ ವಹಿಸುವುದು ನಿಯಮಬಾಹಿರ. ದಾವಣಗೆರೆ ತಾಪಂನ ರಾಮ ಭೋವಿ, ಜಗಳೂರು ತಾಪಂನ ಎನ್.ಕೆ.ಕೆಂಚಪ್ಪ ನಿಯೋಜನೆಯು ಸರ್ಕಾರದ 9.9.2022ರ ಸುತ್ತೋಲೆ, ಸರ್ಕಾರಿ ನೌಕರರ ನಿಯೋಜನೆಗೆ ಸಂಬಂಧಿಸಿದ 12.9.2023ರ ಸುತ್ತೋಲೆಗಳಲ್ಲಿನ ಮಾನದಂಡ, ಸೂಚನೆಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧ ಆಗಿರುವ ಜೊತೆಗೆ ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್ ರಾಜ್‌ ಅಧಿನಿಯಮ 1993ರ ಪ್ರಕರಣ 155ರಿಂದ 157ರವರೆಗಿನ ಅಂಶಗಳಿಗೆ ವಿರುದ್ಧ‍ವಾಗಿದೆ ಎಂದು ದೂರಿದರು.

ತಾಪಂ ಕಾರ್ಯನಿರ್ವಾಹಕಾಧಿಕಾರಿ ಹುದ್ದೆಗೆ ಸರ್ಕಾರದ ಸುತ್ತೋಲೆ ಹಾಗೂ ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದನ್ವಯ ಅರ್ಹರನ್ನು ನೇಮಕಗೊಳಿಸಬೇಕು. ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಟ್ಟದಲ್ಲಿ ತಾಪಂ ಇಒ ಹುದ್ದೆಗಳ ನಿಯೋಜನೆಯಾಗಿದೆ. 29 ಇಲಾಖೆಗಳು ಬರುವ ಇಂತಹದ್ದೊಂದು ಜವಾಬ್ದಾರಿಯುತ ಹುದ್ದೆಯಲ್ಲಿ ನಿಯಮ ಅನುಸರಿಸದಿರುವುದು ಅನೇಕ ಅನುಮಾನಗಳಿಗೆ ಕಾರಣವಾಗಿದೆ ಎಂದು ಹೇಳಿದರು.

ರಾಮ ಭೋವಿ, ಕೆಂಚಪ್ಪ ಇಬ್ಬರನ್ನೂ ಮಾತೃ ಇಲಾಖೆಗೆ ವಾಪಸ್‌ ಕಳಿಸಿದ ನಂತರ ಖಾಲಿಯಾಗುವ ದಾವಣಗೆರೆ, ಜಗಳೂರು ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳ ಹುದ್ದೆಗೆ ಸರ್ಕಾರದ ಸುತ್ತೋಲೆಗಳು ಮತ್ತು ಕರ್ನಾಟಕ ಉಚ್ಚ ನ್ಯಾಯಾಲಯ ಆದೇಶದನ್ವಯ ಅರ್ಹರಿಗೆ ಪ್ರಭಾರ ವ್ಯವಸ್ಥೆ ಅಥವಾ ಕಾಯಂ ವ್ಯವಸ್ಥೆಯನ್ನು ಕರ್ತವ್ಯದ 7 ದಿನಗಳ ಕಾಲಮಿತಿಯೊಳಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಈ ವಿಚಾರದಲ್ಲಿ ಜಿಪಂ ಸಿಇಒ ಉದಾಸೀನ, ಕಾಲಹರಣ, ವಿಳಂಬ ಧೋರಣೆ ಅನುಸರಿಸಿದರೆ ಸಿಇಒ ಒಳಗೊಂಡಂತೆ ಪ್ರಕರಣ‍ವನ್ನು ನ್ಯಾಯಾಲಯದಲ್ಲಿ ತತ್ಕಾಲದಲ್ಲಿ ಜಾರಿಯಲ್ಲಿರುವ ಕಾನೂನುಗಳನ್ವಯ ಖಾಸಗಿ ದೂರು (ಪಿಸಿಆರ್‌) ಮತ್ತು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್‌) ದಾಖಲಿಸಲಾಗುವುದು ಎಂದು ಕುಂದೂರು ಪ್ರಸನ್ನಕುಮಾರ ಎಚ್ಚರಿಸಿದರು.

ಸುದ್ದಿಗೋಷ್ಠಿಯಲ್ಲಿ ಮುಖಂಡ ಹದಡಿ ಗ್ರಾಪಂ ಸದಸ್ಯ ಹದಡಿ ಹನುಮಂತಪ್ಪ ಇದ್ದರು.

- - -

-6ಕೆಡಿವಿಜಿ2.ಜೆಪಿಜಿ:

ದಾವಣಗೆರೆಯಲ್ಲಿ ಬುಧವಾರ ಸಾಮಾಜಿಕ ಕಾರ್ಯಕರ್ತ ಕುಂದೂರು ಬಿ.ಪ್ರಸನ್ನಕುಮಾರ ಸುದ್ದಿಗೋಷ್ಢಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

‘ಕನ್ನಡಪ್ರಭ, ಏಷ್ಯಾನೆಟ್‌ ಸುವರ್ಣ ನ್ಯೂಸ್‌’ನ ಸಹಯೋಗದಲ್ಲಿ ಆಯೋಜಿಸಿದ್ದ ‘ಕೆಂಗೇರಿ ಸಂಭ್ರಮ’ಕ್ಕೆ ವಿದ್ಯುಕ್ತ ತೆರೆ
ಸರ್ವಾಧ್ಯಕ್ಷರಾಗಿ ಸೋಮಲಿಂಗ ಗೆಣ್ಣೂರ ಆಯ್ಕೆ