ಸರ್ಕಾರಿ ನೌಕರನಿಂದಲೇ ಅಕ್ರಮ ಕಟ್ಟಡ ತೆರವು

KannadaprabhaNewsNetwork |  
Published : Jun 17, 2024, 01:35 AM IST
ಲೋಕಾಯುಕ್ತ ಆದೇಶ, ಸಕಾ೯ರಿ ಜಾಗದಲ್ಲಿ, ಸಕಾ೯ರಿ ನೌಕರನಿಂದಲೇ ಅಕ್ರಮ ಕಟ್ಟಡ, ತೆರವು | Kannada Prabha

ಸಾರಾಂಶ

ಕೊಳ್ಳೇಗಾಲ ತಾಲೂಕಿನ ಪಾಳ್ಯದಲ್ಲಿ ಗ್ರಾಪಂ ಕಾರ್ಯದರ್ಶಿ ನಿರ್ಮಿಸಿದ್ದ ಅಕ್ರಮ ಕಟ್ಟಡ ತೆರವುಗೊಳಿಸುತ್ತಿರುವುದು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಗ್ರಾಪಂ ಕಾರ್ಯದರ್ಶಿಯೊಬ್ಬರು ಸರ್ವೆ ನಂಬರ್ 130ರ 1.42 ಎಕರೆ ಸರ್ಕಾರಿ ಬಂಡಿದಾರಿಯನ್ನು ಅತಿಕ್ರಮಿಸಿ ಮನೆ ನಿರ್ಮಿಸಿದ್ದು ಸಾಬೀತಾದ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳ ಸೂಚನೆ ಮೇರೆಗೆ ತಹಸೀಲ್ದಾರ್ ಮಂಜುಳ ಅವರ ಸೂಚನೆ ಮೇರೆಗೆ ಶನಿವಾರ ಸಂಜೆ ಕಂದಾಯ ಇಲಾಖೆ ಸಿಬ್ಬಂದಿ ಅಕ್ರಮ ಕಟ್ಟಡ ತೆರವುಗೊಳಿಸಿ ಇದು ಸರ್ಕಾರಿ ಜಾಗ ಎಂದು ಫಲಕ ನಮೂದಿಸಿರುವ ಘಟನೆ ನಡೆದಿದೆ.

ಕೊಳ್ಳೇಗಾಲ ತಾಲೂಕಿನ ಪಾಳ್ಯ ಗ್ರಾಮದಲ್ಲಿ ಸರ್ವೆ ನಂಬರ್ 130ರ 1.42 ಎಕರೆ ಬಂಡಿದಾರಿ ಸರ್ಕಾರಿ ಜಾಗದಲ್ಲಿ ಪಾಳ್ಯ ಗ್ರಾಪಂಯಲ್ಲಿ ಬಿಲ್ ಕಲೆಕ್ಟರ್ ಹಾಗೂ ಹಾಲಿ ಚಾಮರಾಜನಗರ ತಾಲೂಕು ಕೆಂಪನಪುರ ಗ್ರಾಪಂ ಕಾರ್ಯದರ್ಶಿಯಾಗಿರುವ ಸಿದ್ದನಾಯಕರವರ ಮಗ ಸಿದ್ದಪ್ಪ ಸ್ವಾಮಿ ಅಕ್ರಮವಾಗಿ 14 ಚದರ ಅಡಿಯಲ್ಲಿ ಆರ್‌ಸಿಸಿ ಮನೆ ನಿರ್ಮಾಣ ಮಾಡಿಕೊಂಡಿದ್ದರು. ಈ ಬಗ್ಗೆ ಲೋಕಾಯುಕ್ತರಿಗೆ ಆರ್‌ಟಿಐ ಕಾರ್ಯಕರ್ತ ರಂಗಸ್ವಾಮಿ ದೂರು ನೀಡಿದ್ದು ಅಲ್ಲದೆ ಲೋಕಾಯುಕ್ತಕ್ಕೆ ದಾಖಲೆ ಸಲ್ಲಿಸಿ ಗಮನ ಸೆಳೆದಿದ್ದರು.

ಲೋಕಾಯುಕ್ತ ಅಧಿಕಾರಿಗಳು ಪರಿಶೀಲನೆ ಬಳಿಕ ಈ ಕಟ್ಟಡ ಸರ್ಕಾರಿ ಜಾಗ ಎಂದು ಸಾಬೀತಾಗುತ್ತಿದ್ದಂತೆ ಕೂಡಲೆ ತೆರವುಗೊಳಿಸುವಂತೆ ಕಂದಾಯ ಇಲಾಖೆಗೆ ಲೋಕಾಯುಕ್ತ ಅಧಿಕಾರಿಗಳು ಆದೇಶಿಸಿದ್ದರು. ಈ ಹಿನ್ನೆಲೆ ತಹಸೀಲ್ದಾರ್ ಮಂಜುಳ ಸೂಚನೆಯಂತೆ ಪಾಳ್ಯ ನಾಡ ಕಚೇರಿಯ ಉಪತಹಸೀಲ್ದಾರ್ ವಿಜಯ್ ಕುಮಾರ್, ಪಾಳ್ಯ ಆರ್ ಐ ರಂಗಸ್ವಾಮಿ, ತಾಲೂಕು ಸರ್ವೆಯರ್ ಹೇಮರಾಜು, ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರ ಸಮ್ಮುಖದಲ್ಲಿ ಶನಿವಾರ ಸಂಜೆ ಜೆಸಿಬಿ ಯಂತ್ರದ ಮೂಲಕ ಕಟ್ಟಡವನ್ನು ತೆರವುಗೊಳಿಸಿದ್ದಾರೆ. ಅಲ್ಲದೆ ಇದು ಸರ್ಕಾರಿ ಆಸ್ತಿ ಎಂಬ ಫಲಕ ಹಾಕಿದ್ದಾರೆ. ದೂರುದಾರನ ಈ ಕಾರ್ಯವೈಖರಿ ಹಾಗೂ ಸರ್ಕಾರಿ ಜಾಗ ಉಳಿಸಿದ ಕುರಿತು ಗ್ರಾಮದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

5 ವರ್ಷದ ಹೋರಾಟದ ಫಲ: ಪಾಳ್ಯದಲ್ಲಿ ಮನೆ ನಿರ್ಮಿಸಲು ಮುಂದಾದ ಕಾರ್ಯದರ್ಶಿ ಕ್ರಮವನ್ನು ರಂಗಸ್ವಾಮಿ ಪ್ರಶ್ನಿಸಿದ್ದಾರೆ. ಇದು ಸರ್ಕಾರಿ ಜಾಗ, ಇಲ್ಲಿ ಮನೆ ನಿರ್ಮಾಣ ನಿಲ್ಲಿಸಿ ಎಂದರೂ ಸಹಾ ಕಟ್ಟಡ ನಿರ್ಮಾಣ ನಿಲ್ಲಿಸಲಿಲ್ಲ, ಈ ವಿಚಾರವನ್ನು ಕಂದಾಯ ಇಲಾಖಾಧಿಕಾರಿಗಳ ಗಮನಕ್ಕೆ ತಂದರೂ ಅಧಿಕಾರಿಗಳು ಸ್ಪಂದಿಸಲಿಲ್ಲ. ಈ ಹಿನ್ನೆಲೆ ಲೋಕಾಯುಕ್ತಕ್ಕೆ 2019ರಲ್ಲಿ ಅವರು ನೀಡಿದ್ದರು. ಸರ್ಕಾರಿ ಜಾಗ ಎಂಬುದನ್ನು ಲೋಕಾಯುಕ್ತ ಅಧಿಕಾರಿಗಳ ಮುಂದೆ ಸಾಬೀತು ಪಡಿಸಲು ಸಾಕಷ್ಟು ದಾಖಲೆ ಒದಗಿಸಿದ್ದರು. ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳು ಉತ್ತಮ ಆದೇಶ ನೀಡಿದ್ದು ಅವರ ಆದೇಶದಿಂದ ಸರ್ಕಾರಿ ಜಾಗ ಉಳಿದಂತಾಗಿದೆ.

ಕಂದಾಯಾಧಿಕಾರಿಗಳು ಇದು ಸರ್ಕಾರಿ ಜಾಗ ಎಂದು ಹೇಳಿದರೂ ಕೇಳಲಿಲ್ಲ, ಈ ಹಿನ್ನೆಲೆ ಲೋಕಾಯುಕ್ತ ಅಧಿಕಾರಿಗಳಿಗೆ ದೂರು ನೀಡಿದ್ದೆ. 5 ವರ್ಷಗಳ ಹೋರಾಟದ ಫಲಕ್ಕೆ ಲೋಕಾಯುಕ್ತ ಅಧಿಕಾರಿ ನ್ಯಾಯ ನೀಡಿದ ಹಿನ್ನೆಲೆ ನನ್ನ ಹೋರಾಟಕ್ಕೂ ನ್ಯಾಯ ಸಿಕ್ಕಿದ್ದು ಜೊತೆಗೆ ಸರ್ಕಾರಿ ಜಾಗ ಉಳಿಸಿದ್ದು ನನಗೆ ಸಂತಸ ತಂದಿದೆ.

-ರಂಗಸ್ವಾಮಿ, ಆರ್‌ಟಿಐ ಕಾರ್ಯಕರ್ತ, ಪಾಳ್ಯ ಗ್ರಾಮ

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ