ಕುಡಿವ ನೀರು ಎಕ್ಸ್‌ಪ್ರೆಸ್‌ ಫೀಡರ್‌ ಲೈನ್‌ಗೆ ಸಂಪರ್ಕ ಅಕ್ರಮ; ತೆರವಿಗೆ ಶಾಸಕ ಸೂಚನೆ

KannadaprabhaNewsNetwork |  
Published : Feb 10, 2026, 02:45 AM IST
ಹೂವಿನಹಡಗಲಿಯ ಕುಡಿವ ನೀರಿನ ಯೋಜನೆಯ ವಿದ್ಯುತ್‌ ಲೈನ್‌ಗೆ ಜೆಸ್ಕಾಂನಿಂದ ಅನಧಿಕೃತ ಸಂಪರ್ಕಗಳ ತರವು ಮಾಡುತ್ತಿರುವುದು.ಈ ಹಿಂದೆ ಈ ಕುರಿತು ಕನ್ನಡಪ್ರಭ ವಿಶೇಷ ವರದಿ.   | Kannada Prabha

ಸಾರಾಂಶ

ಪಟ್ಟಣದ ಕುಡಿವ ನೀರಿನೆಯ ವಿದ್ಯುತ್‌ ಲೈನ್‌ಗೆ ಕೊಟ್ನಿಕಲ್ಲು, ನವಲಿ, ಹೊನ್ನೂರು, ರಾಜವಾಳ, ರಾಜವಾಳ ಪ್ಲಾಟ್‌ಗೆ ಅನಧಿಕೃತವಾಗಿ ಜೆಸ್ಕಾಂ ಸಿಬ್ಬಂದಿ ಸಂಪರ್ಕ ಕಲ್ಪಿಸಿದ್ದರು.

ಹೂವಿನಹಡಗಲಿ: ಪಟ್ಟಣದ ಕುಡಿವ ನೀರಿನ ಯೋಜನೆಗೆ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಎಕ್ಸ್‌ಪ್ರೆಸ್‌ ಫಿಲ್ಡರ್‌ ಲೈನ್‌ಗೆ ಜೆಸ್ಕಾಂ ಇಲಾಖೆಯೇ ರೈತರು ಹಾಗೂ ಹಳ್ಳಿಗಳಿಗೆ ಅನಧಿಕೃತ ಸಂಪರ್ಕ ಕಲ್ಪಿಸಿದ್ದೀರಿ. ಕೂಡಲೇ ತೆರವು ಮಾಡಲು ಜೆಸ್ಕಾಂ ಅಧಿಕಾರಿಗಳಿಗೆ ಶಾಸಕ ಕೃಷ್ಣನಾಯ್ಕ ಸೂಚನೆ ನೀಡಿದ್ದಾರೆ.

ಈ ಕುರಿತು ಕನ್ನಡಪ್ರಭ ದಿನಪತ್ರಿಕೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ಜೆಸ್ಕಾಂನಿಂದ ಅಕ್ರಮ ಸಂಪರ್ಕ ಎಂಬ ಶೀರ್ಷಿಕೆಯಡಿ ವಿಶೇಷ ವರದಿ ಪ್ರಕಟಿಸಿತ್ತು. ಪಟ್ಟಣದ ಕುಡಿವ ನೀರಿನೆಯ ವಿದ್ಯುತ್‌ ಲೈನ್‌ಗೆ ಕೊಟ್ನಿಕಲ್ಲು, ನವಲಿ, ಹೊನ್ನೂರು, ರಾಜವಾಳ, ರಾಜವಾಳ ಪ್ಲಾಟ್‌ಗೆ ಅನಧಿಕೃತವಾಗಿ ಜೆಸ್ಕಾಂ ಸಿಬ್ಬಂದಿ ಸಂಪರ್ಕ ಕಲ್ಪಿಸಿದ್ದರು. ಇದರಿಂದ ಕುಡಿವ ನೀರಿನ ಮೋಟರ್‌ಗೆ ಪದೇಪದೇ ಕರೆಂಟ್ ಕೈ ಕೊಡುತ್ತಿತ್ತು. ಇದರಿಂದ ಪಟ್ಟಣದ ಜನರಿಗೆ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿತ್ತು. ಇದನ್ನರಿತ ಪುರಸಭೆಯ ಮುಖ್ಯಾಧಿಕಾರಿ ಜಿ.ಹನುಮಂತಪ್ಪ, ಎಂಜಿನಿಯರ್‌ ಟಿ.ಎಸ್‌. ಹನುಮಂತಪ್ಪ ಹಾಗೂ ನೀರು ಸರಬರಾಜು ಸೀನಿಯರ್‌ ವಾಲ್‌ಮನ್ ಗವಿಯಪ್ಪ, ಅಕ್ರಮ ಸಂಪರ್ಕಗಳನ್ನು ಪತ್ತೆ ಮಾಡಿ, ಕ್ರಮ ಕೈಗೊಳ್ಳಲು ಜೆಸ್ಕಾಂ ಇಲಾಖೆಗೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಪುರಸಭೆ ಅಧಿಕಾರಿಗಳು ನೇರವಾಗಿ ಶಾಸಕ ಕೃಷ್ಣನಾಯ್ಕ ಅವರ ಗಮನಕ್ಕೆ ತಂದಿದ್ದಾರೆ. ಕೂಡಲೇ ಜೆಸ್ಕಾಂ ಹಾಗೂ ಪುರಸಭೆಯ ಅಧಿಕಾರಿಗಳ ಸಭೆ ಕರೆದು, ಕುಡಿವ ನೀರಿನ ಯೋಜನೆ ಪ್ರತ್ಯೇಕವಾದ ವಿದ್ಯುತ್‌ ಲೈನ್‌ ಇದಕ್ಕೆ ಯಾವುದೇ ಹಳ್ಳಿ ಹಾಗೂ ರೈತರ ಮೋಟರ್‌ ಪಂಪ್‌ಸೆಟ್‌ಗಳಿಗೆ ಸಂಪರ್ಕ ಕಲ್ಪಿಸುವುದು ಕಾನೂನು ಬಾಹಿರ. ಕೂಡಲೇ ತೆರವು ಮಾಡಬೇಕು. ಹಳ್ಳಿಗಳಿಗೆ ಪ್ರತ್ಯೇಕವಾಗಿ ಹೊಸ ವಿದ್ಯುತ್‌ ಲೈನ್‌ ಮಾಡಿ ಕರೆಂಟ್‌ ನೀಡುವ ಕೆಲಸ ಮಾಡಿ ಎಂದು ಶಾಸಕರ ಖಡಕ್‌ ವಾರ್ನಿಂಗ್‌ಗೆ ಅಕ್ರಮ ಸಂಪರ್ಕಗಳನ್ನು ತೆರವು ಮಾಡುವ ಕೆಲಸಕ್ಕೆ ಜೆಸ್ಕಾಂ ಸಿಬ್ಬಂದಿ ಮುಂದಾಗಿದ್ದಾರೆ.

ಇಷ್ಟೆಲ್ಲ ಸಮಸ್ಯೆಗಳಿದ್ದರೂ ಆ ಭಾಗದ ಲೈನ್‌ಮನ್‌ಗಳು ಏನು ಮಾಡುತ್ತಿದ್ದಾರೆ? ಸಭೆ ಇದ್ದರೂ ಪಟ್ಟಣದ 5 ಸಿಬ್ಬಂದಿ ಗೈರಾಗಿದ್ದಾರೆ. ಅವರಿಗೆ ಯಾರು ರಜೆ ನೀಡಿದ್ದಾರೆ? ನಾನು ಯಾರಿಗೆ ಸಭೆ ಮಾಡಬೇಕು? ಗ್ರಾಮೀಣ ಪ್ರದೇಶ ಸೇರಿ 8 ಜನರನ್ನು ಅಮಾನತು ಮಾಡಲು ಜೆಸ್ಕಾಂ ಇಇ ಸತೀಶ ಅವರು ಜೆಸ್ಕಾಂ ಎಇಇ ಕೇದಾರನಾಥಗೆ ಸಭೆಯಲ್ಲೇ ಸೂಚಿಸಿದರು.

ಈಗಾಗಲೇ ಬೇಸಿಗೆ ಬರುತ್ತಿದೆ. ಇದರಿಂದ ಕುಡಿವ ನೀರಿನ ಯೋಜನೆಗಳಿಗೆ ಕರೆಂಟ್‌ ಕೈಕೊಡದಂತೆ ಎಚ್ಚರಿಕೆ ವಹಿಸಬೇಕು. ಪಟ್ಟಣಕ್ಕೆ ನೀರು ಪೂರೈಕೆ ಮಾಡುವ ಜಾಕ್‌ವಾಲ್‌ಗೆ ನಿರಂತರ ವಿದ್ಯುತ್‌ ನೀಡಬೇಕು. ಪದೇಪದೇ ತೊಂದರೆ ಆಗದಂತೆ ನೋಡಿಕೊಳ್ಳಬೇಕು. ದೊಡ್ಡ ಕುಡಿವ ನೀರಿನ ಯೋಜನೆ ಇದ್ದರೂ ಸಮಯಕ್ಕೆ ಸರಿಯಾಗಿ ಜನರಿಗೆ ನೀರು ಪೂರೈಕೆ ಮಾಡದಿದ್ದರೆ ಹೇಗೆ? ಮೊದಲು ಲೈನ್‌ಮನ್‌ ಸರಿಯಾಗಿ ಕೆಲಸ ಮಾಡಲು ಹೇಳಿ ಎಂದು ಶಾಸಕ ಕೃಷ್ಣನಾಯ್ಕ ಅಧಿಕಾರಿಗಳಿಗೆ ಸೂಚಿಸಿದರು.

ಶಾಸಕರು ಜೆಸ್ಕಾಂ ಮತ್ತು ಪುರಸಭೆಯ ಅಧಿಕಾರಿಗಳ ಸಭೆ ಕರೆದಾಗ, ಪಟ್ಟಣದ 5 ಲೈನ್‌ಮನ್‌ಗಳು ಮಾಹಿತಿ ನೀಡದೇ ಅನಧಿಕೃತವಾಗಿ ಕರ್ತವ್ಯಕ್ಕೆ ಗೈರಾಗಿದ್ದರು. ಅವರಿಗೆ ನೋಟಿಸ್‌ ನೀಡುವಂತೆ ತಿಳಿಸಿದ್ದಾರೆ. ಆ ಕುರಿತು ಕ್ರಮ ಕೈಗೊಳ್ಳುತ್ತೇವೆ. ಪಟ್ಟಣದ ಕುಡಿವ ನೀರಿನ ಯೋಜನೆಯ ವಿದ್ಯುತ್‌ ಲೈನ್‌ಗೆ ಅಕ್ರಮ ಸಂಪರ್ಕಗಳನ್ನು ತೆರವು ಮಾಡುತ್ತಿದ್ದೇವೆ ಎಂದು ಜೆಸ್ಕಾಂ ಎಇಇ ಕೇದಾರನಾಥ ತಿಳಿಸಿದರು.

ಶಾಸಕರಿಗೆ ಪಟ್ಟಣದ ಕುಡಿವ ನೀರಿನ ಯೋಜನೆಯ ವಿದ್ಯುತ್‌ ಲೈನ್‌ಗೆ ಜೆಸ್ಕಾಂನಿಂದಲೇ ಅಕ್ರಮ ಸಂಪರ್ಕದಿಂದ ಪಟ್ಟಣಕ್ಕೆ ಕುಡಿವ ನೀರಿನ ಸಮಸ್ಯೆ ಉಂಟಾಗುತ್ತಿದೆ ಎಂದು ಮಾಹಿತಿ ನೀಡಿದ್ದರಿಂದ ಅಧಿಕಾರಿಗಳ ಸಭೆ ಕರೆದು ಕ್ರಮಕ್ಕೆ ಸೂಚಿಸಿದ್ದಾರೆ ಎಂದು ಪುರಸಭೆ ಮುಖ್ಯಾಧಿಕಾರಿ ಜಿ.ಹನುಮಂತಪ್ಪ ಹೇಳಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಕನ್ನಡ ಸಾಹಿತ್ಯಕ್ಕೆ ಗದುಗಿನ ಕೊಡುಗೆ ಅಪಾರ: ಬಸವರಾಜ ಜಾಲಿಹಾಳ
ಹಂಪಿ ಉತ್ಸವ ಯಶಸ್ವಿಗೆ ಜಿಲ್ಲಾಡಳಿತ ಸನ್ನದ್ಧ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ