ಕನಕಗಿರಿ: ಕನಕಗಿರಿಯಲ್ಲಿ ಎಲ್ಲ ಸರ್ಕಾರಿ ಕಚೇರಿಗಳನ್ನು ಹಂತ ಹಂತವಾಗಿ ಆರಂಭಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಮುಖ್ಯಮಂತ್ರಿಗಳ ವಿಶೇಷ ಅನುದಾನದಡಿ ಕನಕಗಿರಿಯ ಕೊಪ್ಪಳ ರಸ್ತೆಯಿಂದ ಬಂಕಾಪುರ ಗ್ರಾಮದ ವರೆಗೆ ರಸ್ತೆ ಸುಧಾರಣೆಗೆ ₹೨.೭೦ ಕೋಟಿ ಹಾಗೂ ನಿರ್ಲೂಟಿ ಕ್ರಾಸ್‌ನಿಂದ ಮಲ್ಲಿಗೆವಾಡ ಕ್ರಾಸ್ ವರೆಗೆ ₹೧.೫೦ ಕೋಟಿ ಅನುದಾನ ಬಿಡುಗಡೆಯಾಗಿದೆ. ಇನ್ನೂ ಅಂಬೇಡ್ಕರ್ ವೃತ್ತದ ಬಳಿ ಅಂಬೇಡ್ಕರ್ ಸಮುದಾಯ ಭವನ ನಿರ್ಮಾಣಕ್ಕಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ₹೨ ಕೋಟಿ, ಲೋಕೋಪಯೋಗಿ ಇಲಾಖೆಯ ಸಿಎಂಐಡಿಪಿ ಅಡಿಯಲ್ಲಿ ಕನಕಗಿರಿಯಿಂದ ಕಲಿಕೇರಿ ಗ್ರಾಮದ ರಸ್ತೆ ಅಭಿವೃದ್ಧಿಗೆ ₹೨ ಕೋಟಿ ಹಾಗೂ ದೇವಲಾಪುರ ಗ್ರಾಮದಿಂದ ಹುಲಿಹೈದರ ಗ್ರಾಮದ ವರೆಗಿನ ರಸ್ತೆ ಡಾಂಬರೀಕರಣಕ್ಕೆ ₹೭.೫೦ ಕೋಟಿ ಅನುದಾನ ಮಂಜೂರಾಗಿದ್ದು, ಭೂಮಿಪೂಜೆ ನೆರವೇರಿಸಿದ್ದೇನೆ ಎಂದರು.
ಇನ್ನೂ ಈಗಾಗಲೇ ಬಸ್ ಡಿಪೋದ ಜಾಗ ಗುರುತಿಸಿದ್ದು, ಕಟ್ಟಡ ನಿರ್ಮಾಣಕ್ಕಾಗಿ ಸರ್ಕಾರ ₹೩ ಕೋಟಿ ಅನುದಾನ ನೀಡಿದೆ. ಅಗ್ನಿಶಾಮಕ ಠಾಣೆ ಕಚೇರಿ ನಿರ್ಮಾಣಕ್ಕೂ ₹೩ ಕೋಟಿ ಮಂಜೂರಾಗಿದೆ. ನೂರು ಹಾಸಿಗೆ ಆಸ್ಪತ್ರೆಗೂ ಟೆಂಡರ್ ಪ್ರಕ್ರಿಯೆ ಮುಗಿದಿದ್ದು, ಕೆಲವೇ ದಿನಗಳಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.ತಹಸೀಲ್ದಾರ್ ವಿಶ್ವನಾಥ ಮುರುಡಿ, ಲೋಕೋಪಯೋಗಿ ಇಲಾಖೆಯ ಎಇಇ ವಿಶ್ವನಾಥ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಅಧ್ಯಕ್ಷೆ ತನುಶ್ರೀ, ಉಪಾಧ್ಯಕ್ಷ ಕಂಠಿರಂಗಪ್ಪ, ಪ್ರಾ.ಕೃ.ಪ.ಸ. ಸಂಘದ ಅಧ್ಯಕ್ಷ ಬಿ. ಕನಕಪ್ಪ, ಪ್ರಮುಖರಾದ ವೀರೇಶ ಸಮಗಂಡಿ, ಗಂಗಾಧರಸ್ವಾಮಿ, ಸಿದ್ದಪ್ಪ ನಿರ್ಲೂಟಿ, ರಾಮಚಂದ್ರ ಟಿಜೆ, ಬಸವಂತಗೌಡ, ರವಿ ಪಾಟೀಲ್, ನೀಲಕಂಠ ಬಡಿಗೇರ, ಮಲ್ಲಿಕಾರ್ಜುನಗೌಡ ಬೆನಕನಾಳ, ವೆಂಕಟೇಶ ಕುಲಕರ್ಣಿ, ಹೊನ್ನೂರುಸಾಬ ಉಪ್ಪು, ಶಾಂತಪ್ಪ ಬಸರಿಗಿಡ ಇತರರಿದ್ದರು.
ಕಾನೂನು ಕ್ರಮ: ಅಂಗಡಿ ಮುಂಗಟ್ಟುಗಳ ಕಳ್ಳತನ, ಕೃಷಿ ಸಾಮಗ್ರಿಗಳ ಕಳ್ಳತನ, ಅಕ್ರಮ ಮರಳು ದಂಧೆ ಸೇರಿದಂತೆ ನಾನಾ ಅಕ್ರಮ ಚಟುವಟಿಕೆ ವಿರುದ್ಧ ಸೂಕ್ತ ಕ್ರಮವಹಿಸಲು ಪೊಲೀಸ್ ವರಿಷ್ಠಾಧಿಕಾರಿ ಜತೆ ಚರ್ಚಿಸುತ್ತೇನೆ. ಕಳ್ಳರಿಗೆ ಪೊಲೀಸರು ಕಾವಲಾಗಿರುವ ಕುರಿತು ದೂರುಗಳು ಬಂದಿದ್ದು, ಪರಿಶೀಲಿಸಿ, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಕೈಗೊಳ್ಳುತ್ತೇನೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.